ಜೇವರ್ಗಿ: ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರ ಅಂತ್ಯ ಸಂಸ್ಕಾರವನ್ನು ಕೊನೆಗೂ ತಮ್ಮೂರಲ್ಲೇ ಮಾಡಿಸುವಲ್ಲಿ ನೆಲೋಗಿ ಗ್ರಾಮಸ್ಥರು ಯಶಸ್ವಿಯಾದರು. ಧರಂಸಿಂಗ್ ಅಂತ್ಯ ಸಂಸ್ಕಾರವನ್ನು ಕಲಬುರಗಿಯಲ್ಲಿಯೇ ಮಾಡಲಾಗುತ್ತಿದೆ
ಎನ್ನುವ ಮಾಹಿತಿ ಅರಿತು ಎಚ್ಚೆತ್ತ ನೆಲೋಗಿ ಗ್ರಾಮಸ್ಥರು ಗುರುವಾರ ತಾಲೂಕಿನ ಸೊನ್ನ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದರು. ಸಾಮಾನ್ಯ ಕಾರ್ಯಕರ್ತರಾಗಿದ್ದ ಧರಂಸಿಂಗ್ ಅವರನ್ನು ಶಾಸಕ, ಮಂತ್ರಿ ಹಾಗೂ
ಮುಖ್ಯಮಂತ್ರಿಯನ್ನಾಗಿ ಮಾಡಿದ ಕೀರ್ತಿ ಜೇವರ್ಗಿ ತಾಲೂಕಿನ ಜನತೆಗೆ ಸಲ್ಲುತ್ತದೆ. ಅವರ ಕುಟುಂಬ ವರ್ಗ ಕಲಬುರಗಿಯಲ್ಲಿ ಅಂತ್ಯ ಸಂಸ್ಕಾರ ಮಾಡುವುದು ಸರಿಯಲ್ಲ.
ನೆಲೋಗಿಯಲ್ಲೇ ನೆರವೇರಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು.
ಆಗ್ರಹಕ್ಕೆ ಮಣಿದ ಕುಟುಂಬ: ಗ್ರಾಮಸ್ಥರ ಪ್ರತಿಭಟನೆ ಹಿಂದಿನ ಭಾವನೆ ಅರ್ಥ ಮಾಡಿಕೊಂಡ ಧರಂಸಿಂಗ್ ಕುಟುಂಬಸ್ಥರು ನೆಲೋಗಿಯಲ್ಲೇ ಅಂತ್ಯ ಸಂಸ್ಕಾರ ಮಾಡಲು ನಿರ್ಧರಿಸಿದರು. ತಮ್ಮ ನೆಚ್ಚಿನ ನಾಯಕನ ಪಾರ್ಥಿವ ಶರೀರವನ್ನು ನೆಲೋಗಿಗೆ ಬರ ಮಾಡಿಕೊಂಡ ಗ್ರಾಮಸ್ಥರು, “ನಮ್ಮ ಮನೆಯ ಮಗ ಮತ್ತೂಮ್ಮೆ ನಮ್ಮೂರಿಗೆ ಬಂದ’ ಎಂದು ಭಾವಿಸಿ ನೋವಿನಲ್ಲೂ ನೆಮ್ಮದಿ ಕಂಡರು.
ತಂದೆಯ ನಿಧನದ ನಂತರ ಶಾಸಕ ಡಾ| ಅಜಯಸಿಂಗ್, ವಿಧಾನಪರಿಷತ್ ಸದಸ್ಯ ವಿಜಯಸಿಂಗ್ ನಮ್ಮ ಗ್ರಾಮದ ನಂಟು ಕಳಚಿಕೊಳ್ಳಬಾರದು ಎನ್ನುವ ಮನವಿಯನ್ನು ಗ್ರಾಮಸ್ಥರು ಮಾಡಿದರು.
ಅಂಗಡಿ-ಮುಂಗಟ್ಟು ಬಂದ್: ಪಟ್ಟಣ ಹಾಗೂ ತಾಲೂಕಿನ ಬಹುತೇಕ ಕಡೆ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿತ್ತು. ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಅಭಿಮಾನಿಗಳು ರಸ್ತೆ ಬದಿಯಲ್ಲಿ ಸಾಗುತ್ತಿದ್ದ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು.