ಬಾಗಲಕೋಟೆ: ವಿಧಾನಸಭೆ ಚುನಾವಣೆಗೆ ರಾಜ್ಯದ 224 ಕ್ಷೇತ್ರಗಳಿಗೂ ಅಭ್ಯರ್ಥಿಗಳ ಬಗ್ಗೆ ಚರ್ಚಿಸಲು ಕೆಪಿಸಿಸಿ ಚುನಾವಣ ಸಮಿತಿ ಸಭೆಯನ್ನು ಫೆ.2ರಂದು ಕರೆಯಲಾಗಿದೆ.
ಸಭೆಯಲ್ಲಿ ಸುದೀಘ್ರವಾಗಿ ಚರ್ಚಿಸಿದ ಬಳಿಕ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಎಐಸಿಸಿಗೆ ಕಳುಹಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಅಭ್ಯರ್ಥಿ ಗಳನ್ನು ಬೇಗ ಘೋಷಿಸಲಾಗುವುದು. ಇದಕ್ಕಾಗಿ ಈಗಾಗಲೇ ರಾಜ್ಯದ ಎಲ್ಲ ಕ್ಷೇತ್ರಗಳಿಂದ ಆಕಾಂಕ್ಷಿಗಳ ಅರ್ಜಿ ಪಡೆದಿದ್ದು, ಜಿಲ್ಲಾ ಮಟ್ಟದಲ್ಲೂ ಆಕಾಂಕ್ಷಿಗಳನ್ನು ವೀಕ್ಷಕರು ಭೇಟಿ ಮಾಡಿ ವಿವರಣೆ ಪಡೆದಿದ್ದಾರೆ. ಯಾವ ಕ್ಷೇತ್ರಕ್ಕೆ ನಮ್ಮ ಪಕ್ಷದ ಅಭ್ಯರ್ಥಿ ಯಾರು ಆಗಬೇಕು ಎಂಬುದರ ಕುರಿತು ಫೆ.2ರಂದು ಬಹುತೇಕ ಅಂತಿಮಗೊಳ್ಳಲಿದೆ ಎಂದರು.
ಸ್ವಯಂ ಪ್ರೇರಿತ ದೂರು ದಾಖಲಿಸಲಿ
ಶಿಸ್ತಿನ ಪಕ್ಷ ಎಂದು ಹೇಳುವ ಬಿಜೆಪಿಯ ಸಚಿವರು, ಶಾಸಕರು ಅಸಂವಿಧಾನಬದ್ಧ ಪದ ಬಳಕೆ ಮಾಡಿ ಮಾತನಾಡುತ್ತಿದ್ದಾರೆ. ಸರಕಾರದ ಸಚಿವರೊಬ್ಬರು, ಅವರದೇ ಪಕ್ಷದ ಶಾಸಕ ಯತ್ನಾಳರ ಕಾರು ಚಾಲಕನ ಕೊಲೆ ಕುರಿತು ಆರೋಪಿಸಿದ್ದಾರೆ. ಇನ್ನು ಯತ್ನಾಳರು, ಸಚಿವರನ್ನು ಪಿಂಪ್ ಎಂದು ಕರೆದಿದ್ದಾರೆ. ಸಚಿವರಾಗಿದ್ದೂ ಪಿಂಪ್ ಕೆಲಸ ಮಾಡಿಯೇ ಎಂದು ಹೇಳಿದ್ದಾರೆ. ಇವರಿಬ್ಬರ ವಿರುದ್ಧವೂ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದರು.
ಸಚಿವರ ಹೇಳಿಕೆಯೇ ಮೇಲೆಯೇ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಬೇಕಿತ್ತು. ಅದೊಂದು ಕೊಲೆ ಪ್ರಕರಣದ ಕುರಿತು ಹೇಳಿದ್ದಾರೆ. ಇದೆಲ್ಲ ನಿರ್ಲಕ್ಷ್ಯಮಾಡುತ್ತಿರುವುದು ಸರಿಯೇ? ಯಾರು ಏನು ಪಿಂಪ್ ಕೆಲಸ ಮಾಡಿದರು, ಯಾರು ಯಾರನ್ನು ಕೊಲೆ ಮಾಡಿಸಿದರು ಎಂಬುದು ಹೊರ ಬರಬೇಕಲ್ಲವೇ? ಸ್ಯಾಂಟ್ರೋ ರವಿ ಕೇಸ್‌ನಲ್ಲಿ ಬಿಜೆಪಿ ಸರಕಾರದ ಯಾವ ಯಾವ ವ್ಯಕ್ತಿಗಳ ಹೆಸರಿದೆ ಎಂಬುದು ನನಗೆ ಗೊತ್ತಿಲ್ಲ. ಇದು ಕುಮಾರಸ್ವಾಮಿ ಅವರಿಗೇ ಗೊತ್ತು. ಯಾವ ಹುತ್ತಿನಲ್ಲಿ ಯಾವ ಹಾವು ಇದೆ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದರು.