Advertisement

ಸಿನಿ ಮಂದಿಯ ವರ್ಕ್ ಫ್ರಮ್ ಹೋಮ್

09:57 AM Mar 28, 2020 | Suhan S |

“ಸಿನಿಮಾ ಅಂದ್ರೆ ಅದು ಒಬ್ಬರಿಂದ ಆಗುವ ಕೆಲಸವಲ್ಲ. ಅಲ್ಲಿ ಹತ್ತಾರು ಜನರಿಸುತ್ತಾರೆ. ನೂರಾರು ಯೋಚನೆಗಳಿರುತ್ತವೆ. ಸಾವಿರಾರು ಚರ್ಚೆಗಳಾಗುತ್ತವೆ. ಅವೆಲ್ಲವೂ ಸೇರಿ ಒಂದು ಅಮೂರ್ತ ಭಾವವಾದಾಗ ಅದಕ್ಕೊಂದು ದೃಶ್ಯ ರೂಪ ಸಿಗುತ್ತದೆ. ಅದು ಸಿನಿಮಾ ವಾಗುತ್ತದೆ. ಸಿನಿಮಾ ಅಂದ್ರೆ ಒಬ್ಬರಿಂದ ಶುರುವಾಗಿ ಅನೇಕರಲ್ಲಿ ಮುಗಿಯುವ ಒಂದು ಅದ್ಭುತ ಸಂಘಟಿತ ಕೃತಿ’ – ಇದು ಹಾಲಿವುಡ್‌ನ‌ ಖ್ಯಾತ ನಿರ್ದೇಶಕ “ಜುರಾಸಿಕ್‌ ಪಾರ್ಕ್‌’ ಖ್ಯಾತಿಯ ನಿರ್ದೇಶಕ ಸ್ಟೀವನ್‌ ಸ್ಪೀಲ್ಬರ್ಗ್‌ ಅವರ ಜನಪ್ರಿಯ ಮಾತು. ಇಂದಿಗೂ ಜಗತ್ತಿನ ಎಲ್ಲ ಚಿತ್ರರಂಗಗಳೂ ಅಕ್ಷರಶಃ ಹೀಗೆ ನಡೆದುಕೊಂಡು ಬರುತ್ತಿವೆ.

Advertisement

ಆರಂಭದಲ್ಲಿ ಒಬ್ಬರಿಂದಲೋ.. ಇಬ್ಬರಿಂದಲೋ… ಶ್ರೀಕಾರ ಬೀಳುವ ಪರಿಕಲ್ಪನೆ ಅಥವಾ ಕಥೆಯೊಂದಕ್ಕೆ, ಕೊನೆಗೆ ನೂರಾರು ಯೋಚನೆಗಳು – ಚರ್ಚೆಗಳು ಸೇರಿ, ಅದೆಷ್ಟೋ ಜನರ ಪರಿಶ್ರಮದಿಂದ ಸಿನಿಮಾವಾಗಿ ಬೆಳ್ಳಿತೆರೆ ಮೇಲೆ ಲಕ್ಷಾಂತರ ಜನರ ಮುಂದೆ ಪ್ರದರ್ಶನವಾಗುತ್ತದೆ. ಸ್ವೀವನ್‌ ಸ್ಪೀಲ್ಬರ್ಗ್‌ ಹೇಳಿರುವಂತೆ ಸಿನಿಮಾ ಅನ್ನೋದು ನಿಜಕ್ಕೂ “ಒಂದು ಅದ್ಭುತ ಸಂಘಟಿತ ಕೃತಿ’ ಅನ್ನೋದರಲ್ಲಿ ಎರಡು ಮಾತಿಲ್ಲ. ಒಟ್ಟಿನಲ್ಲಿ ಎಲ್ಲರ ಅಭಿಪ್ರಾಯಗಳು – ಯೋಚನೆಗಳು ಹೀಗೆ ಒಂದೆಡೆ ಸೇರಿದಾಗ ಮಾತ್ರ ಸಿನಿಮಾ ಅನ್ನೋ ಅದ್ಭುತ ಸಂಘಟಿತ ಕೃತಿ ಹೊರಬರಲು ಸಾಧ್ಯ. ಆದರೆ ಹಾಗೆ ಆಗಬೇಕಾದರೆ, ಎಲ್ಲರೂ ಒಂದೆಡೆ ಸೇರಲೇಬೇಕು. ಆಗಾಗ್ಗೆ ಸಿನಿಮಾದ ಬಗ್ಗೆ ಚರ್ಚೆಗಳಾಗುತ್ತಿರಬೇಕು. ಆನಂತರ ಅದಕ್ಕೆ ಸಂಬಂಧಿಸಿದ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕು. ಎಲ್ಲರೂ ಒಂದೆಡೆ ಸೇರಲು ಆಗದಿದ್ದರೂ, ಅವರವರ ಅಭಿಪ್ರಾಯ – ಅನಿಸಿಕೆ, ಯೋಚನೆಗಳನ್ನು ಹಂಚಿಕೊಳ್ಳಲು ವೇದಿಕೆಯೊಂದು ಬೇಕೆ ಬೇಕು.

ಮೊದಲೆಲ್ಲ ಒಂದು ಸಿನಿಮಾ ನಿರ್ಮಾಣವಾಗಬೇಕಾದರೆ, ಅದರ ಕಥೆಗಾರರು, ಬರಹಗಾರರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ನಟ-ನಟಿಯರು ಹೀಗೆ ಚಿತ್ರದ ವಿವಿಧ ವಿಭಾಗಗಳ ಪ್ರತಿಯೊಬ್ಬರೂ ಒಂದೆಡೆ ಕೂತು ತಮ್ಮ ಸಿನಿಮಾದ ಬಗ್ಗೆ ಅದೆಷ್ಟೋ ದಿನಗಳು, ಕೆಲವೊಮ್ಮೆ ತಿಂಗಳುಗಳ ಕಾಲ ಚರ್ಚಿಸುತ್ತಿದ್ದರು. ಹೀಗೆ ಸಾಕಷ್ಟು ಚರ್ಚೆಗಳಾದ ಬಳಿಕ ಎಲ್ಲರ ಒಮ್ಮತದಂತೆ ಚಿತ್ರತಂಡ ಚಿತ್ರೀಕರಣಕ್ಕೆ ಹೊರಡುತ್ತಿತ್ತು. ಕೊನೆಗೆ ಒಂದಷ್ಟು ಸಮಯ ಚಿತ್ರೀಕರಣಕ್ಕೆ, ಆಮೇಲೆ ಒಂದಷ್ಟು ಸಮಯ ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸಗಳಿಗೆ ಕೊಟ್ಟ ನಂತರ ಸಿನಿಮಾ ತೆರೆಗೆ ಬರುತ್ತಿತ್ತು. ಏನಿಲ್ಲಂದ್ರೂ ಆಗೆಲ್ಲ ಸಿನಿಮಾ ಅಂದ್ರೆ ಕನಿಷ್ಟ ಕೆಲ ತಿಂಗಳು, ಅಥವಾ ಕೆಲ ವರ್ಷದ ಯೋಜನೆ ಆಗಿರುತ್ತಿತ್ತು. ಆದರೆ ಇಂದು ಸಾಂಪ್ರದಾಯಿಕ ಸಿನಿಮಾ ನಿರ್ಮಾಣದ ಸ್ವರೂಪ ಸ್ವಲ್ಪ ಮಟ್ಟಿಗೆ ಬದಲಾಗಿದೆ.

ಆಧುನಿಕ ತಂತ್ರಜ್ಞಾನ, ಇಂಟರ್‌ನೆಟ್‌ ಮೊದಲಾದ ಸೌಲಭ್ಯಗಳು ಚಿತ್ರತಂಡದ ಎಲ್ಲರ ಅಭಿಪ್ರಾಯ – ಅನಿಸಿಕೆ, ಯೋಚನೆಗಳನ್ನು ಹಂಚಿಕೊಳ್ಳಲು ಹಲವಾರು ವೇದಿಕೆಗಳನ್ನು ಕಲ್ಪಿಸಿಕೊಟ್ಟಿರುವುದರಿಂದ, ಚಿತ್ರದ ವಿವಿಧ ವಿಭಾಗಗಳ ಪ್ರತಿಯೊಬ್ಬರೂ ಒಂದೆಡೆ ಕೂತು ಚರ್ಚಿಸುವ ಪರಿಪಾಠ ಕಡಿಮೆಯಾಗುತ್ತಿದೆ. ಇದರಿಂದ ಸಮಯ ಮತ್ತು ಸಿನಿಮಾ ನಿರ್ಮಾಣದ ವೆಚ್ಚ ಕೂಡ ಕಡಿಮೆಯಾಗುತ್ತದೆ ಎಂಬ ಅಭಿಪ್ರಾಯ ಇಂದಿನ ಪೀಳಿಗೆಯ ಸಿನಿಮಾ ಮೇಕರ್‌ಗಳಲ್ಲಿದೆ. ಅದರಲ್ಲೂ ಕಳೆದ ನಾಲ್ಕೈದು ವರ್ಷಗಳಲ್ಲಿ ಕನ್ನಡವೂ ಸೇರಿದಂತೆ ಭಾರತದ ಬಹುತೇಕ ಪ್ರಾದೇಶಿಕ ಚಿತ್ರರಂಗಗಳಲ್ಲೂ ಬದಲಾದ ಇಂಥದ್ದೊಂದು ಸಿನಿಮಾ ಮೇಕಿಂಗ್‌ ಸ್ವರೂಪ ಯಶಸ್ವಿಯಾಗಿರುವುದರಿಂದ, ಇತ್ತೀಚಿನ ಯುವ ನಿರ್ಮಾಪಕರು, ನಿರ್ದೇಶಕರು ಕಾಲಕ್ಕೆ ತಕ್ಕಂತೆ ಬದಲಾಗಿರುವ ಈ ಸ್ವರೂಪವೇ ಸರಿ ಇದೆ ಎನ್ನುತ್ತಿದ್ದಾರೆ.

ಇನ್ನು ಇತರೆ ಕ್ಷೇತ್ರಗಳಂತೆ ಸಿನಿಮಾರಂಗ ಕೂಡ ಇಂದು ತನ್ನ ಅರ್ಥ, ವ್ಯಾಪ್ತಿ, ವ್ಯಾಖ್ಯಾನ ಎಲ್ಲದರಲ್ಲೂ ಬದಲಾಗುತ್ತಿರುವುದರಿಂದ, “ವರ್ಕ್‌ ಫ್ರಂ ಹೋಂ’ನಂತಹ ಪರಿಕಲ್ಪನೆಯನ್ನು ಸಿನಿಮಾರಂಗದಲ್ಲಿ ಯೋಜಿತವಾಗಿ ಬಳಸಿಕೊಳ್ಳುವುದರಲ್ಲಿ ತಪ್ಪೇನು ಅನ್ನೋದು ಅನೇಕರ ಅಭಿಪ್ರಾಯ. ಆದರೆ ಎಂಥ “ವರ್ಕ್‌ ಫ್ರಂ ಹೋಂ’ನಲ್ಲಿ ಸಿನಿಮಾಗಳ ಕೆಲಸವಾದರೂ, ಅದನ್ನು ನೋಡಲು ಜನ ಥಿಯೇಟರ್‌ ಗೆ ಬರಬೇಕಲ್ಲ ಅನ್ನೋದು ಸಾಂಪ್ರದಾಯಿಕ ಸಿನಿಮಾ ಮೇಕರ್‌ಗಳ ಮಾತು.

Advertisement

ಆದರೆ ಇದಕ್ಕೂ ಉತ್ತರ ತಯಾರಿಟ್ಟುಕೊಂಡಿರುವ ಯುವ ಸಿನಿಮಾ ಮೇಕರ್, ಇಂದು ಅಮೇಜಾನ್‌, ನೆಟ್ ಫ್ಲಿಕ್ಸ್‌ನಂತ ಪರ್ಯಾಯ ಸಿನಿಮಾ ಪ್ರದರ್ಶನಕ್ಕೆ ವೇದಿಕೆ ಸೃಷ್ಟಿಯಾಗುತ್ತಿರುವಾಗ, ಮುಂದಿನ ದಿನಗಳಲ್ಲಿ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ ಅಥವಾ ಮಲ್ಟಿಫ್ಲೆಕ್ಸ್‌ಗಳಲ್ಲಿ ಹೋಗಿ ಸಿನಿಮಾ ನೋಡುವ ಆಸಕ್ತಿ ಅಥವಾ ವ್ಯವದಾನವನ್ನು ಹೊಸ ಪೀಳಿಗೆಯ ಪ್ರೇಕ್ಷಕರು ಇಟ್ಟುಕೊಂಡಿರುತ್ತಾರಾ? ಅನ್ನೋ ಪ್ರಶ್ನೆಯನ್ನು ಮುಂದಿಡುತ್ತಾರೆ.

 

-ಕಾರ್ತಿಕ್

Advertisement

Udayavani is now on Telegram. Click here to join our channel and stay updated with the latest news.

Next