ಸಿನಿಮಾ ಮಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಅದಕ್ಕೆ ಕಾರಣ ಒಂದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿರೋದು. ಒಂದು ವೇಳೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದೇ ಹೋದರೆ ಮತ್ತೂಂದಷ್ಟು ಬೆಳವಣಿಗೆಗಳು ನಡೆಯುತ್ತವೆ. ರಾಜ್ಯದ ಜನರ ಚಿತ್ತ ಕೂಡಾ ಸಿನಿಮಾದಿಂದ ರಾಜಕೀಯ ಕೂಡಾ ಹೆಚ್ಚಿರುತ್ತದೆ. ಈಗ ಒಂದೇ ಪಕ್ಷಕ್ಕೆ ಬಹುಮತ ಬರುವ ಮೂಲಕ ಬೇಗನೇ ಸರ್ಕಾರ ರಚನೆಯಾಗಿ ಎಲ್ಲವೂ ಸುಸೂತ್ರವಾಗುವುದರಿಂದ ಜನ ಸಿನಿಮಾ ಮೂಡ್‌ಗೆ ಬರುತ್ತಾರೆಂಬ ಲೆಕ್ಕಾಚಾರ ಸಿನಿಮಾ ಮಂದಿಯದ್ದು. ಈಗಾಗಲೇ ಅನೇಕ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದವು. ಆದರೆ, ಈಗ ಚುನಾವಣಾ ಫಲಿತಾಂಶ ಹೊರಬಿದ್ದಿರುವುದರಿಂದ ಸಿನಿಮಾ ಮಂದಿ ತಮ್ಮ ಸಿನಿಮಾ ಬಿಡುಗಡೆಮಾಡಲು ಮುಂದಾಗಿದ್ದಾರೆ.
ಮುಖ್ಯವಾಗಿ ಹೊಸಬರ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗಲಿವೆ. “ರಾಮನ ಅವತಾರ’, “ಅಭಿರಾಮಚಂದ್ರ’, “ಡಾಲರ್ಪೇಟೆ’, “ಜುಗಲ್ ಬಂಧಿ’, “ಬನ್ ಟೀ’, “ಜೂಮ್ ಕಾಲ್’, “ಯದಾ ಯದಾ ಹೀ’, “ಸೈರನ್’, “ಶ್ರೀಮಂತ’, “ಸೂತ್ರದಾರಿ’, “ಕ್ರೀಂ’ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹೊಸಬರ ಸಿನಿಮಾಗಳ ಪಟ್ಟಿ ಬೆಳೆಯುತ್ತಾ ಹೋಗುತ್ತವೆ.
ಹೆಚ್ಚಾಗಲಿದೆ ಸಿನಿಮಾ ಸಂಖ್ಯೆ: ಸಿನಿಮಾಗಳ ಬಿಡುಗಡೆ ವಿಚಾರದಲ್ಲಿ ಈ ವರ್ಷ ಇಲ್ಲಿವರೆಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಿವೆ. ಇಲ್ಲಿವರೆಗೆ 85ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಿವೆ. ಇಷ್ಟೊಂದು ಸಿನಿ ಟ್ರಾಫಿಕ್ ಯಾಕೆ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಅನೇಕ ಸಿನಿಮಾಗಳು ಲಾಕ್‌ಡೌನ್ ಮುಂಚೆ ತಯಾರಾಗಿವೆ. ಆದರೆ, ಸಿನಿಮಾ ಬಿಡುಗಡೆಯ ಹಾದಿಯಲ್ಲಿ ಎದುರಾದ ತೊಂದರೆಗಳಿಂದ ರಿಲೀಸ್ ತಡವಾಗುತ್ತಾ ಬಂದಿವೆ. ಸದ್ಯ ಚಿತ್ರಮಂದಿರಗಳಿಂದ ಹಿಡಿದು ಎಲ್ಲವೂ ಕೂಡಿ ಬಂದ ಕಾರಣ ಸಿನಿಮಾ ಬಿಡುಗಡೆ ಮಾಡುತ್ತಿವೆ.
ಇದು ಕೇವಲ ಒಂದು ವಾರದ ಕಥೆಯಲ್ಲ, ಮುಂದಿನ ವಾರವೂ ಕೆಲವು ಸಿನಿಮಾಗಳು ಬಿಡುಗಡೆಯ ಕ್ಯೂನಲ್ಲಿವೆ. ಅವಕಾಶ ಸಿಕ್ಕ ವಾರ ಬಿಟ್ಟರೆ ಮತ್ತೆ ತಿಂಗಳುಗಟ್ಟಲೇ ಮುಂದೆ ಹೋಗಬೇಕಾಗುತ್ತದೆ ಎಂಬ ಕಾರಣಕ್ಕೆ ವಾರ ವಾರ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಮೇ ಮೂರನೇ ವಾರದಿಂದಲೇ ಸಿನಿಮಾ ಬಿಡುಗಡೆಯ ಭರಾಟೆ ಜೋರಾಗಲಿದೆ.