ನವದೆಹಲಿ: ಭೀಮ್ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಖಾಗೆ ಜಾಮೀನು ನೀಡಿದ್ದ ನ್ಯಾಯಾಧೀಶರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ 2018ರಲ್ಲಿ ಟ್ವೀಟ್ ಮಾಡಿದ್ದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮಂಗಳವಾರ (ಡಿಸೆಂಬರ್ 06) ದೆಹಲಿ ಹೈಕೋರ್ಟ್ ಗೆ ಬೇಷರತ್ ಕ್ಷಮಾಪಣೆ ಕೇಳಿ ಅಫಿಡವಿತ್ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದು ಆಕ್ರೋಶ
ಜಸ್ಟೀಸ್ ಎಸ್.ಮುರಳೀಧರ್ ಅವರನ್ನು ಅವಹೇಳನ ಮಾಡಿ ಟ್ವೀಟ್ ಮಾಡಿದ್ದ ಪ್ರಕರಣದ ಕುರಿತು ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಲೇಖಕ ಆನಂದ್ ರಂಗನಾಥನ್ ಮತ್ತು ನ್ಯೂಸ್ ಪೋರ್ಟಲ್ ಸ್ವರಾಜ್ ವಿರುದ್ಧ ಕೋರ್ಟ್ ನ್ಯಾಯಾಂಗ ನಿಂದನೆ ಕ್ರಮಕ್ಕೆ ಮುಂದಾಗಿತ್ತು ಎಂದು ವರದಿ ವಿವರಿಸಿದೆ.
ಪ್ರಕರಣದ ಅಂತಿಮ ವಿಚಾರಣೆ ನಡೆಯಲಿರುವ ಮಾರ್ಚ್ 16ರಂದು ವಿವೇಕ್ ಅಗ್ನಿಹೋತ್ರಿ ಖುದ್ದು ಹಾಜರಿರಬೇಕು ಎಂದು ಕೋರ್ಟ್ ಸೂಚನೆ ನೀಡಿತ್ತು.
ಆ ನಿಟ್ಟಿನಲ್ಲಿ ಇಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತನ್ನ ವಕೀಲರ ಮೂಲಕ ಬೇಷರತ್ ಕ್ಷಮೆಯಾಚಿಸಿ, ಅಫಿಡವಿತ್ ಸಲ್ಲಿಸಿದ್ದು, ತನ್ನ ಕಕ್ಷಿದಾರ ಅಗ್ನಿಹೋತ್ರಿ ಟ್ವೀಟ್ ಡಿಲೀಟ್ ಮಾಡಿರುವುದಾಗಿ ತಿಳಿಸಿದ್ದರು. ಆದರೆ ಈ ಸಂದರ್ಭದಲ್ಲಿ ಆಮಿಕಸ್ ಕ್ಯೂರಿ (ನ್ಯಾಯಾಲಯದ ಪರ ಸ್ವತಂತ್ರ ವಕೀಲ) ಅವರು, ಅಗ್ನಿಹೋತ್ರಿ ಟ್ವೀಟ್ ಅನ್ನು ಡಿಲೀಟ್ ಮಾಡಿಲ್ಲ, ಅದನ್ನು ಟ್ವೀಟರ್ ತೆಗೆದು ಹಾಕಿತ್ತು ಎಂದು ತಿಳಿಸಿದ್ದರು.
2017ರ ಡಿಸೆಂಬರ್ 31ರಂದು ಎಲ್ಗಾರ್ ಪರಿಷತ್ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ನವಲಾಖ್ (70ವರ್ಷ) 2020ರಲ್ಲಿ ಬಂಧಿಸಲಾಗಿದ್ದು, ಪ್ರಸ್ತುತ ನವಲಾಖ್ ಗೃಹ ಬಂಧನದಲ್ಲಿರುವುದಾಗಿ ವರದಿ ತಿಳಿಸಿದೆ.