ಬರೋಬ್ಬರಿ 11 ತಿಂಗಳುಗಳ ಅನಂತರ ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಸೀಟು ಭರ್ತಿಗೆ ಕೇಂದ್ರ ಸರಕಾರ ಅನುಮತಿ ನೀಡಿದೆ. ಈ ಮೂಲಕ ಭಾರತೀಯ ಚಿತ್ರರಂಗದ ಮೊಗದಲ್ಲಿ ಮಂದಹಾಸ ಮೂಡಿದ್ದು, ಚಿತ್ರರಂಗ ಈ ನಿರ್ಧಾರವನ್ನು ಸ್ವಾಗತಿಸಿದೆ.
ಕೋವಿಡ್-19 ಪರಿಣಾಮ ಕಳೆದ ಮಾರ್ಚ್‌ನಿಂದ ಸಿನೆಮಾ ರಂಗ ಸಂಪೂರ್ಣವಾಗಿ ಸ್ತಬ್ಧವಾಗುವ ಜತೆಗೆ ನಷ್ಟ ಅನುಭವಿಸುತ್ತಿತ್ತು. ಅಕ್ಟೋಬರ್ 15ರಿಂದ ಶೇ 50ರಷ್ಟು ಸೀಟು ಭರ್ತಿಯೊಂದಿಗೆ ಸಿನೆಮಾ ಪ್ರದರ್ಶನಕ್ಕೆ ಸರಕಾರ ಅನುಮತಿ ನೀಡಿದರೂ, ಬಿಗ್ ಬಜೆಟ್ ಹಾಗೂ ಸ್ಟಾರ್ ಸಿನೆಮಾಗಳ ನಿರ್ಮಾಪಕರು ಸಿನೆಮಾ ಬಿಡುಗಡೆ ಮಾಡಲು ಮುಂದೆ ಬಂದಿರಲಿಲ್ಲ. ತಾವು ಹಾಕಿರುವ ಬಂಡವಾಳ ಶೇ. 50 ಸೀಟು ಭರ್ತಿಯಲ್ಲಿ ವಾಪಸ್ ಬರುವುದು ಕಷ್ಟ ಎಂಬ ಲೆಕ್ಕಾಚಾರದೊಂದಿಗೆ ಆಯಾ ರಾಜ್ಯಗಳ ಚಿತ್ರರಂಗಗಳು ರಾಜ್ಯ ಸರಕಾರಗಳಿ ಗೆ ಒತ್ತಡ ಹೇರುತ್ತಲೇ ಬಂದಿದ್ದವು. ಅಂತಿಮವಾಗಿ ಈಗ ಕೇಂದ್ರ ಸರಕಾರ ಶೇ 100ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿದೆ.
ಭಾರತೀಯ ಚಿತ್ರೋದ್ಯಮ ವರ್ಷಕ್ಕೆ 1,000ಕ್ಕೂ ಹೆಚ್ಚು ಚಿತ್ರಗಳನ್ನು ನೀಡುವ ಮೂಲಕ ದೇಶದ ದೊಡ್ಡ ಉದ್ಯಮಗಳ ಪೈಕಿ ಒಂದಾಗಿದೆ. 2020ರ ಹೊತ್ತಿಗೆ ಭಾರತೀಯ ಚಿತ್ರೋದ್ಯಮದ ವಾರ್ಷಿಕ ವಹಿವಾಟು 23 ಸಾವಿರ ಕೋಟಿ ದಾಟಿದೆ ಎಂದು ಅಂದಾಜಿಸಲಾಗಿದೆ. ಜತೆಗೆ ಪ್ರತಿ ವರ್ಷ ಭಾರತೀಯ ಚಿತ್ರೋದ್ಯಮ ಶೇ 11.5ರಷ್ಟು ಬೆಳವಣಿಗೆ ಯೊಂದಿಗೆ ಮುನ್ನುಗ್ಗುತ್ತಿದೆ. ಆದರೆ ಕೋವಿಡ್‌ನಿಂದ ಚಿತ್ರರಂಗದ ಮೇಲೆ ದೊಡ್ಡ ಹೊಡೆತ ಬಿದ್ದಿತ್ತು. ಈಗ ಸರಕಾರ ಶೇ. 100 ಸೀಟು ಭರ್ತಿಗೆ ಅವಕಾಶ ನೀಡಿರುವುದರಿಂದ ಉದ್ಯಮ ಚೇತರಿಕೆಯ ನಿರೀಕ್ಷೆಯಲ್ಲಿದೆ. ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳ ಸೇರಿದಂತೆ ನಾನಾ ಪ್ರಾದೇಶಿಕ ಭಾಷೆಗಳ ಸಿನೆಮಾಗಳು ಬಿಡುಗಡೆಯ ಸಿದ್ಧತೆಯೊಂದಿಗೆ ಸರಕಾರದ ನಿರ್ಧಾರಕ್ಕೆ ಎದುರು ನೋಡುತ್ತಿದ್ದವು. ಈಗ ದಾರಿ ಸುಗಮವಾಗಿದೆ.
ಕನ್ನಡ ಚಿತ್ರರಂಗವೊಂದರಲ್ಲಿ 15ಕ್ಕೂ ಹೆಚ್ಚು ಸ್ಟಾರ್ ಸಿನೆಮಾಗಳು ಬಿಡುಗಡೆಯ ಹಾದಿಯಲ್ಲಿವೆ. ಕಳೆದ 11 ತಿಂಗಳುಗಳಿಂದ ನಿಂತು ಹೋಗಿದ್ದ ಸಿನೆಮಾ ವಹಿವಾಟಿಗೆ ಮತ್ತೆ ವೇಗ ನೀಡ ಲು ಈಗ ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರು ತುದಿಗಾಲಿನಲ್ಲಿದ್ದಾರೆ. ಕರ್ನಾಟಕದಲ್ಲಿರುವ 650ಕ್ಕೂ ಹೆಚ್ಚು ಸಿಂಗಲ್ ಸ್ಕ್ರೀನ್ ಹಾಗೂ 60ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‌ಗಳು ಈಗ ಶೇ. 100ರಷ್ಟು ಸೀಟು ಭರ್ತಿ ನಿರ್ಧಾರದಿಂದ ಮತ್ತೆ ಹೊಸ ಉತ್ಸಾಹದೊಂದಿಗೆ ತೆರೆದುಕೊಳ್ಳಲಿವೆ. ಶೇ. 100 ಸೀಟು ಭರ್ತಿಗೆ ಅವಕಾಶ ಸಿಕ್ಕಿದೆ ಎಂಬ ಖುಷಿಯಲ್ಲಿ ಪ್ರೇಕ್ಷಕರು ತಮ್ಮ ಆರೋಗ್ಯ ಸುರಕ್ಷತೆಯ ವಿಚಾರದಲ್ಲಿ ಮೈ ಮರೆಯಬಾರದು. ಚಿತ್ರಮಂದಿರದಲ್ಲಿನ ಸಂಭ್ರಮದಲ್ಲಿ ಆರೋಗ್ಯಕ್ಕೆ ಕುತ್ತು ಬರದಂತೆ ಎಚ್ಚರ ವಹಿಸುವ ಅಗತ್ಯವೂ ಇದೆ. ಕೋವಿಡ್‌ನ ಅಪಾಯ ಇನ್ನೂ ದೂರವಾಗಿಲ್ಲ. ಹೀಗಾಗಿ ಚಿತ್ರ ಮಂದಿರಗಳು ನಿಯಮಿತ ಸ್ಯಾನಿಟೈಸೇಶನ್, ಮಾಸ್ಕ್ ಧರಿಸುವಿಕೆಯ ಕಡ್ಡಾಯ ಪಾಲನೆಯನ್ನು ಖಾತ್ರಿ ಪಡಿಸುವ ಮೂಲಕ ಎಚ್ಚರಿಕೆ ವಹಿಸಬೇಕಿದೆ.