Advertisement

ಚಿತ್ರ, ಚಿತ್ರಮಂದಿರಗಳು ರೆಡಿ, ಪ್ರೇಕ್ಷಕರು ಬರಬೇಕಷ್ಟೇ…

10:19 AM Jul 20, 2021 | Team Udayavani |

ಬೆಂಗಳೂರು: ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಇತ್ತ ಕಡೆ ಚಿತ್ರಮಂದಿರಗಳು ಕೂಡಾ ಪ್ರೇಕ್ಷಕರಿಗೆ ಸ್ವಾಗತ ಕೋರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೂರು ತಿಂಗಳಿನಿಂದ ಯಾವುದೇ ಸಿನಿಮಾವಿಲ್ಲದೇ ಖಾಲಿ ಇದ್ದ ಚಿತ್ರಮಂದಿರಗಳನ್ನು ಮತ್ತೆ ಮೂಲಸ್ಥಿತಿಗೆ ತರಲು ಒಂದಷ್ಟು ಸಮಯಬೇಕಾಗಿರುವುದರಿಂದ ಕೆಲವು ಚಿತ್ರಮಂದಿರಗಳು ಒಂದು ವಾರದ ನಂತರ ಬಾಗಿಲು ತೆರೆಯಲು ನಿರ್ಧರಿಸಿವೆ.

Advertisement

ಆದರೆ, ಸಿದ್ಧತೆಗಳಂತೂ ಜೋರಾಗಿ ನಡೆಯುತ್ತಿವೆ. ಸ್ಕ್ರೀನ್‌ ಟೆಸ್ಟ್‌, ಸೀಟ್‌ ಫ್ಲೋರ್‌ ಕ್ಲೀನಿಂಗ್‌, ಸ್ಯಾನಿಟೈಶನ್‌ ಹೀಗೆ ಸಕಲ ಸಿದ್ಧತೆಗಳಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಮೈಸೂರಿನ ಡಿಆರ್‌ಸಿ ಸಿನಿಮಾಸ್‌ ಸೋಮವಾರದಿಂದಲೇ ಪ್ರದರ್ಶನ ಆರಂಭಿಸಿದ್ದು, “ಯುವರತ್ನ’, “ರಾಬರ್ಟ್‌’, “ಇನ್ಸ್‌ಪೆಕ್ಟರ್‌ ವಿಕ್ರಮ್‌’ ಚಿತ್ರ ಪ್ರದರ್ಶಿಸಿದೆ. ಜೊತೆಗೆ ದಾವಣಗೆರೆ ಸೇರಿದಂತೆ ಹಲವು ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಆರಂಭವಾಗಿದೆ.

ಬಿಡುಗಡೆಗೆ ತಯಾರಿ ಜೋರು: ಇದು ಚಿತ್ರಮಂದಿರದ ಕಥೆಯಾದರೆ, ಹೊಸ ಸಿನಿಮಾಗಳು ಕೂಡಾ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಈ ಮೂಲಕ ಆಗಸ್ಟ್‌ನಿಂದ ಸಿನಿಮಾ ಬಿಡುಗಡೆ ಜೋರಾಗಲಿದೆ. ಅದಕ್ಕೆ ಕಾರಣ ಹೌಸ್‌ಫ‌ುಲ್‌ ಪ್ರದರ್ಶನಕ್ಕೆ ಅವಕಾಶ ಸಿಗುವ ನಿರೀಕ್ಷೆ. ಸರ್ಕಾರ ಆಗಸ್ಟ್‌ 1 ರಿಂದ ಹೌಸ್‌ ಫ‌ುಲ್‌ ಪ್ರದರ್ಶನಕ್ಕೆ ಅವಕಾಶ ನೀಡುವ ಸಾಧ್ಯತೆ ಇರುವುದರಿಂದ ಹೊಸಬರು ಸೇರಿದಂತೆ, ಸ್ಟಾರ್‌ಗಳ ಸಿನಿಮಾಗಳು ಬಿಡುಗಡೆಯ ಸಿದ್ಧತೆಯಲ್ಲಿವೆ. ಇನ್ನೊಂದಿಷ್ಟು ಸಿನಿಮಾಗಳು ಸೆನ್ಸಾರ್‌ ಪ್ರಕ್ರಿಯೆಯಲ್ಲಿ ತೊಡಗಿವೆ. ಕೊರೊನಾ ಲಾಕ್‌ಡೌನ್‌ ನಿಂದಾಗಿ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗದೇ ಉಳಿದಿವೆ. ಅತ್ತ ಕಡೆ ಓಟಿಟಿಯಲ್ಲೂ ರಿಲೀಸ್‌ ಮಾಡಲಾಗದೇ, ಇತ್ತ ಕಡೆ ಚಿತ್ರಮಂದಿರಗಳೂ ತೆರೆಯದೇ ಸಿನಿಮಾ ನಿರ್ಮಾಪಕರು ಸಂಕಷ್ಟದಲ್ಲಿದ್ದಾರೆ.

ಪ್ರೇಕ್ಷಕರು ರೆಡಿಯಾಗಬೇಕು..: ಅತ್ತ ಕಡೆ ಚಿತ್ರ ಮಂದಿರ ಹಾಗೂ ಚಿತ್ರಗಳು ರೆಡಿಯಾಗುತ್ತಿವೆ. ಈಗರೆಡಿಯಾಗಿರಬೇಕಾಗಿರೋದು ಪ್ರೇಕ್ಷಕರು. ಚಿತ್ರ ಮಂದಿರ ತೆರೆದು ಚಿತ್ರಗಳು ಬಿಡುಗಡೆಯಾದರೂ, ಅದನ್ನು ನೋಡುವ ಮನಸ್ಸನ್ನುಈಗಪ್ರೇಕ್ಷಕರು ಮಾಡಬೇಕಿದೆ.

ಆಗಸ್ಟ್‌ನಲ್ಲಿ ಸಿನಿ ಭರಾಟೆ: ಮೊದಲೇ ಹೇಳಿದಂತೆ ಸಾಕಷ್ಟು ಸಿನಿಮಾಗಳು ತೆರೆಗೆ ಬರಲಿವೆ. ಅದರಲ್ಲಿ ಸ್ಟಾರ್‌ಗಳ ಹಾಗೂ ಹೊಸಬರ ಚಿತ್ರಗಳು ಬಿಡುಗಡೆಯಾಗಲಿವೆ. “ನಿನ್ನ ಸನಿಹಕೆ’,”ಲಂಕೆ’, “ರೈಮ್ಸ್‌’, “ಸಲಗ’, “ಭಜರಂಗಿ-2′, “ಕ್ರಿಟಿಕಲ್‌ ಕೀರ್ತನೆಗಳು’, “ಕೋಟಿಗೊಬ್ಬ-3′ ಸೇರಿದಂತೆ ಅನೇಕ ಚಿತ್ರಗಳು ಬಿಡುಗಡೆಯಾಗಲಿವೆ

Advertisement

ಸರ್ಕಾರದ ನಿಯಮಾವಳಿಗಳ ಪ್ರಕಾರ ಸಿನಿಮಾಗಳ ಪ್ರದರ್ಶನಕ್ಕೆ ಥಿಯೇಟರ್‌ನ ಸಿದ್ಧ ಮಾಡಿ ಇಟ್ಟುಕೊಂಡಿದ್ದೇವೆ.ಹೊಸ ಸಿನಿಮಾಗಳು ಬಿಡುಗಡೆಯಾದರೆ ಅವುಗಳನ್ನು ಶೇ.50 ಪ್ರೇಕ್ಷಕರ ಪ್ರವೇಶಾತಿಯಲ್ಲಿ ಪ್ರದರ್ಶಿಸಲು ನಾವು ತಯಾರಾಗಿದ್ದೇವೆ.ಹೊಸ ಸಿನಿಮಾಗಳು ರಿಲೀಸ್‌ಆದ್ರೆ, ಪ್ರೇಕ್ಷಕರು ಕೂಡ ಥಿಯೇಟರ್‌ಗಳತ್ತ ಬರುತ್ತಾರೆ ಎಂಬ ನಿರೀಕ್ಷೆಇದೆ.

– ನರಸಿಂಹಲು, “ವೈಷ್ಣವಿ’ ಚಿತ್ರಮಂದಿರ ಮಾಲೀಕರ

ಸರ್ಕಾರದ ಗೈಡ್‌ಲೈನ್ಸ್‌ ತಪ್ಪದೆ ಫಾಲೋ ಮಾಡುತ್ತಿದ್ದೇವೆ. ನಮ್ಮಲ್ಲಿ ಸಿನಿಮಾಗಳ ಶೋಗಳನ್ನು ಪ್ರಾರಂಭಿಸಲು ಎಲ್ಲ ತಯಾರಿ ಮಾಡಿಕೊಂಡಿದ್ದೇವೆ. ಈಗಾಗಲೇ ಆನ್‌ಲೈನ್‌ ಬುಕ್ಕಿಂಗ್‌ ಕೂಡ ನೀಡಲಾಗುತ್ತಿದೆ. ಸದ್ಯಕ್ಕೆ ಈಗಾಗಲೇ ರಿಲೀಸ್‌ ಆಗಿರುವ ಸಿನಿಮಾಗಳು ಪ್ರದರ್ಶನವಾಗಲಿವೆ. ಸ್ವತ್ಛತೆಯ ಕಡೆಗೆ ಮತ್ತು ಆಡಿಯನ್ಸ್‌ಗೆ ಕಂಫ‌ರ್ಟ್‌ ಝೋನ್‌ ಕಲ್ಪಿಸುವುದಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಗಮನ ನೀಡಲಾಗುತ್ತಿದೆ.

– ಪರೇಶ್‌ ಕುಮಾರ್‌, ಐನಾಕ್ಸ್‌ ಮ್ಯಾನೇಜರ್‌

ನಮ್ಮ ಡಿಆರ್‌ಸಿ ಸಿನಿಮಾಸ್‌ನಲ್ಲಿ ಸೋಮವಾರದಿಂದಲೇ ಪ್ರದರ್ಶನ ಆರಂಭಿಸಿದ್ದೇವೆ. ಈಗಾಗಲೇ ತೆರೆಕಂಡಿರುವ ಚಿತ್ರಗಳನ್ನು ಮರು ಪ್ರದರ್ಶಿಸುತ್ತಿದ್ದೇವೆ.ಹೊಸ ಸಿನಿಮಾಗಳು ಬರುವವರೆಗೆ ಬೇರೆ ದಾರಿ ಇಲ್ಲ. ಪ್ರೇಕ್ಷಕರು ಹೊಸ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ.

-ಚೇತನ್‌, ಡಿಆರ್‌ಸಿ ಸಿನಿಮಾಸ್‌, ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next