Advertisement

ಯಂಗ್‌ಮೆನ್ಸ್‌ ಭೋವಿ ಅಸೋಸಿಯೇಶನ್‌ ವತಿಯಿಂದ ಚಲನಚಿತ್ರ ಪ್ರದರ್ಶನ

04:54 PM Jul 06, 2019 | Team Udayavani |

ಮುಂಬಯಿ:ಯಂಗ್‌ಮೆನ್ಸ್‌ ಭೋವಿ ಅಸೋಸಿಯೇಶನ್‌ ಮುಂಬಯಿ ಇದರ ವತಿಯಿಂದ ಜೂ. 30ರಂದು ಸಂಜೆ ಚಿದಾನಂದ ಉದ್ಯಾವರ ಅವರು ರಚಿಸಿ, ನಿರ್ದೇಶಿಸಿರುವ “ನಿಲಾವುಂದೆ ಬೆಳಿ ಮೊಯ’ ಮಲಯಾಳಿ ಭಾಷೆಯ ಚಲನಚಿತ್ರ ಪ್ರದರ್ಶನವು ಮುಲುಂಡ್‌ ಪಶ್ಚಿಮದ ಕಾಳಿದಾಸ ಸಭಾಗೃಹದಲ್ಲಿ ನಡೆಯಿತು.

Advertisement

ಈ ಸಂದರ್ಭದಲ್ಲಿ ಕಲಾವಿದ ಮತ್ತು ಚಿತ್ರನಿರ್ದೇಶಕ ಚಿದಾನಂದ ಉದ್ಯಾವರ ಅವರನ್ನು ಯಂಗ್‌ಮೆನ್ಸ್‌ ಭೋವಿ ಅಸೋಸಿಯೇಶನ್‌ ವತಿಯಿಂದ “ಮೊಯ ಕಲಾರತ್ನ’ ಬಿರುದು ಪ್ರದಾನಿಸಿ ಸಮ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಚಲನಚಿತ್ರದ ಕಲಾವಿದರೆಲ್ಲರನ್ನು ಅಭಿನಂದಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಉದ್ಯಾವರ ಮುಂಬಯಿ ಹದಿನಾರು ಸಮಸ್ತರು ಮತ್ತು ಉದ್ಯಾವರ ವಿದ್ಯಾದಾಯಿನಿ ಸಂಘದ ವತಿಯಿಂದ ಕಲಾವಿದ ಮತ್ತು ಚಿತ್ರನಿರ್ದೇಶಕ ಚಿದಾನಂದ ಉದ್ಯಾವರ ಅವರನ್ನು ಉದ್ಯಾವರ “ಉದಯಸೂರ್ಯ’ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಿ ಶುಭಹಾರೈಸಿದರು.

ಪ್ರಾರಂಭದಲ್ಲಿ ಮೊಯ ಸಮಾಜದ ವಿವಿಧ ಸಂಘಟನೆಗಳ ಗಣ್ಯರು ಹಾಗೂ ಯಂಗ್‌ಮೆನ್ಸ್‌ ಬೋವಿ ಅಸೋಸಿಯೇಶನ್‌ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಚಂದ್ರಕಾಂತ್‌ ಉಚ್ಚಿಲ್‌ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ರವಿ ಉಚ್ಚಿಲ್‌ ಅವರು ಮಾತನಾಡಿ, ನಮ್ಮ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭಾವಂತರು ತುಂಬಾ ಮಂದಿ ಇದ್ದಾರೆ. ಅವರನ್ನು ಪ್ರೋತ್ಸಾಹಿಸುವ ಕಾರ್ಯ ನಮ್ಮಿಂದಾಗಬೇಕು. ಈ ನಿಟ್ಟಿನಲ್ಲಿ ಯಂಗ್‌ಮೆನ್ಸ್‌ ಬೋವಿ ಅಸೋಸಿಯೇಶನ್‌ ಶ್ರಮಿಸುತ್ತಿದ್ದು, ಇದಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ ಎಂದರು.

Advertisement

ಸಮ್ಮಾನ ಸ್ವೀಕರಿಸಿದ ಮಾತನಾಡಿದ ಕಲಾವಿದ ಮತ್ತು ಚಿತ್ರನಿರ್ದೇಶಕ ಚಿದಾನಂದ ಉದ್ಯಾವರ ಅವರು, ನನ್ನನ್ನು ಮುಂಬಯಿಗೆ ಕರೆದು ನಾನು ನಿರ್ಮಿಸಿದ ಈ ಚಿತ್ರವನ್ನು ಇಲ್ಲಿ ಅದ್ದೂರಿಯಿಂದ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟ ಯಂಗ್‌ಮೆನ್ಸ್‌ ಬೋವಿ ಅಸೋಸಿಯೇಶನ್‌ ಹಾಗೂ ಇತರ ಸಮಾಜ ಬಾಂಧವ ರಿಗೆ ಋಣಿಯಾಗಿದ್ದೇನೆ. ನಮ್ಮ ಸಮಾಜದಲ್ಲಿ ಅನೇಕ
ಪ್ರತಿಭೆಗಳು ಅರಳುತ್ತಿದ್ದು, ಅವರಿಗೆ ಉತ್ತಮ ವೇದಿಕೆ ಯನ್ನು ನೀಡಿ ಪ್ರೋತ್ಸಾಹಿಸಿದಾಗ ಮಾತ್ರ ಅವರು ಬೆಳೆಯಲು ಸಾಧ್ಯವಾಗುತ್ತದೆ. ಇದು ನನ್ನದೊಂದು  ಕಿರು ಪ್ರಯತ್ನವಾಗಿದೆ. ಯಂಗ್‌ಮೆನ್ಸ್‌ ಬೋವಿ ಅಸೋಸಿಯೇಶನ್‌ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಅಭಿನಂದನೀಯ ಎಂದರು.

ಕಾರ್ಯಕ್ರಮದಲ್ಲಿ ಬಂಟರವಾಣಿಯ ಮಾಸಿಕದ ಸಂಪಾದಕ ಪ್ರೇಮನಾಥ್‌ ಮುಂಡ್ಕೂರು, ತೀಯಾ ಸಮಾಜ ಮುಂಬಯಿ ಅಧ್ಯಕ್ಷ ರವಿ ಮಂಜೇಶ್ವರ ಹಾಗೂ ಸಮಾಜದ ಇತರ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next