ಪ್ರೀತಿ ಎಂದರೆ ನಾವು ಇಷ್ಟಪಟ್ಟವರು ಸಿಗಲೇಬೇಕು ಎಂಬ ಸ್ವಾರ್ಥವಲ್ಲ, ಬದಲಾಗಿ ಅವರು ಎಲ್ಲೇ ಇದ್ದರೂ ಚೆನ್ನಾಗಿರಲಿ ಎಂದು ಸದಾ ಒಳ್ಳೆಯದು ಬಯಸುವುದು ಕೂಡಾ ನಿಜವಾದ ಪ್ರೀತಿ… ಇಂತಹ ಒಂದು ಕಥಾ ಹಂದರದೊಂದಿಗೆ ತೆರೆಕಂಡಿರುವ ಚಿತ್ರ “ಪ್ರೇಮಂ ಪೂಜ್ಯಂ’. ಪ್ರೀತಿ ಎಂದರೆ ಸ್ವಾರ್ಥ, ಪ್ರೀತಿ ಎಂದರೆ ರೊಮ್ಯಾನ್ಸ್, ಪ್ರೀತಿ ಎಂದರೆ ಜಾಲಿ, ಪ್ರೀತಿ ಎಂದರೆ ಮದುವೆ…. ಹೀಗೆ ಅನೇಕ ವ್ಯಾಖ್ಯಾನಗಳ ನಡುವೆ “ಪ್ರೇಮಂ ಪೂಜ್ಯಂ’ ಚಿತ್ರ ಮಾತ್ರ “ಪ್ರೀತಿ ಎಂದರೆ ಪೂಜ್ಯನೀಯವಾದುದು’ ಎಂಬುದನ್ನು ಹೇಳುತ್ತಲೇ ಇಡೀ ಪ್ರೇಕ್ಷಕರ ಮನಸ್ಸನ್ನು ಆವರಿಸಿಕೊಳ್ಳುತ್ತದೆ.
ಹೊಡಿಬಡಿ, ಮಾಸ್, ಭರ್ಜರಿ ಡೈಲಾಗ್ ಸಿನಿಮಾಗಳ ಮಧ್ಯೆ ಹೆಚ್ಚು ಮಾತಿಲ್ಲದೇ, ಮೌನದಲ್ಲೇ ಮಾತನಾಡುತ್ತಾ ಹೃದಯಗೆಲ್ಲುವ ಮೂಲಕ “ಪ್ರೇಮಂ ಪೂಜ್ಯಂ’ ಒಂದು ಕ್ಲಾಸ್ ಸಿನಿಮಾವಾಗಿ ಇಷ್ಟವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬಂದ ಒಂದು ಉತ್ತಮ ಪ್ರೇಮಕಾವ್ಯವಾಗಿ “ಪ್ರೇಮಂ ಪೂಜ್ಯಂ’ ಪ್ರೇಕ್ಷಕರ ಮನಗೆಲ್ಲುತ್ತಾ ಹೋಗುತ್ತದೆ. ಆ ನಿಟ್ಟಿನಲ್ಲಿ ಚೊಚ್ಚಲ ನಿರ್ದೇಶನದಲ್ಲೇ ಒಂದೊಳ್ಳೆಯ ಪ್ರಯತ್ನ ಮಾಡಿದ ನಿರ್ದೇಶಕ ರಾಘವೇಂದ್ರ ಅವರ ಶ್ರಮ ಹಾಗೂ ಸಿನಿಮಾ ಪ್ರೀತಿಯನ್ನು ಮೆಚ್ಚಲೇಬೇಕು
“ಪ್ರೇಮಂ ಪೂಜ್ಯಂ’ ಚಿತ್ರ ಒಂದು ಅಪ್ಪಟ ಲವ್‌ಸ್ಟೋರಿ. ಆದರೆ, ರೆಗ್ಯುಲರ್ ಶೈಲಿಯ ಕಥೆಯಿಂದ ಈ ಸಿನಿಮಾ ಬಹುದೂರ ಸಾಗಿದೆ. ಅದೇ ಈ ಸಿನಿಮಾದ ಪ್ಲಸ್. ನಿರ್ದೇಶಕರು “ಪ್ರೀತಿ ಎಂದರೆ ಪೂಜ್ಯನೀಯ’ ಎಂಬ ಒನ್‌ಲೈನ್ ಇಟ್ಟುಕೊಂಡು ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಪ್ರೇಮಿಯೊಬ್ಬ ಹೀಗೂ ಯೋಚಿಸಬಹುದು, ತಾನು ಪ್ರೀತಿಸಿದ ಹುಡುಗಿಯ ಕುರಿತು ಇಂತಹ ಭಾವನೆಯೊಂದಿಗೆ ಆತ ಬದುಕಬಹುದು ಎಂಬ ಅಂಶ ಚಿತ್ರದ ಹೈಲೈಟ್. ಅದೇ ಪ್ರೇಕ್ಷಕರನ್ನು ಸೆಳೆಯುತ್ತದೆ ಮತ್ತು ಕಣ್ಣಂಚಲ್ಲಿ ನೀರು ತರಿಸುತ್ತದೆ. ನಿರ್ದೇಶಕರು ಪ್ರತಿ ದೃಶ್ಯದಲ್ಲೂ ಭಾವನೆ ತುಂಬಿದ್ದಾರೆ. ಸಿನಿಮಾ ನೋಡ ನೋಡುತ್ತಲೇ ಹೆಚ್ಚು ಆಪ್ತವಾಗುತ್ತದೆ ಎಂದರೆ ಅದಕ್ಕೆ ಕಾರಣ ನಿರ್ದೇಶಕರ ನಿರೂಪಣೆ ಹಾಗೂ ಅದಕ್ಕೆ ಹೊಂದಿಕೊಂಡ ಪರಿಸರ.
ಇದನ್ನೂ ಓದಿ:ಪ್ರಧಾನಿ ಮೋದಿ 4 ಗಂಟೆಯ ಕಾರ್ಯಕ್ರಮಕ್ಕೆ 23 ಕೋಟಿ ರೂ ಖರ್ಚು ಮಾಡುತ್ತಿದೆ ಮ.ಪ್ರದೇಶ ಸರ್ಕಾರ!
ಸಿನಿಮಾದ ಕಥೆಯ ಜೊತೆ ಜೊತೆಗೆ ಸಾಗಿ ಬಂದಿರೋದು ಸೊಗಸಾದ ಲೊಕೇಶನ್. ನಿರ್ದೇಶಕರು ತಮ್ಮ ಕನಸಿನ ಕವನ ಕಟ್ಟಿಕೊಡುವಲ್ಲಿ ತುಂಬಾ ಮುದ್ದಾದ, ಮನತಣಿಸುವ ಲೊಕೇಶನ್ ಹುಡುಕಿದ್ದಾರೆ. ಇವತ್ತಿನ ಬೆಂಗಳೂರಿನ ಚುಮುಚುಮು ವಾತಾವರಣಕ್ಕೂ, ತೆರೆಮೇಲಿನ ಲೊಕೇಶನ್‌ಗೂ ತುಂಬಾ ಹೊಂದಿಕೊಂಡಿದೆ. ಇಡೀ ಸಿನಿಮಾ ಯಾವುದೇ ಗೊಂದಲವಿಲ್ಲದೇ, ತುಂಬಾ ಸ್ಪಷ್ಟತೆಯಿಂದ ಸಾಗುವುದು ಕೂಡಾ ಈ ಚಿತ್ರದ ಪ್ಲಸ್ ಪಾಯಿಂಟ್. ಸಿನಿಮಾದಲ್ಲಿ ಪ್ರೀತಿ ಇದೆ, ಸುಂದರ ಹಾಡುಗಳಿವೆ, ನಾಯಕ-ನಾಯಕಿಯ ಸೊಗಸಾದ ಕ್ಷಣಗಳಿವೆ. ಆದರೆ, ಇಡೀ ಸಿನಿಮಾದಲ್ಲಿ ನಾಯಕ, ಎಲ್ಲೂ ನಾಯಕಿಯನ್ನು ಸ್ಪರ್ಶಿಸುವುದಿಲ್ಲ. ಅದಕ್ಕೊಂದು ಕಾರಣವೂ ಇದೆ.
ಅದೇನೆಂಬುದನ್ನು ತೆರೆಮೇಲೆ ನೋಡಿ ಆನಂದಿಸಿ. ಇನ್ನು, ನಾಯಕನ ನಟನ ಪ್ರತಿ ಹಂತವನ್ನು ಇಲ್ಲಿ ತೋರಿಸುತ್ತಾ ಬಂದಿದ್ದಾರೆ. ಜೊತೆಗೆ ಸಾಧು ಕೋಕಿಲ, ಮಾಸ್ಟರ್ ಆನಂದ್ ಅವರ ಕಾಮಿಡಿಯೂ ಇದೆ. ಆದರೆ, ಅವೆಲ್ಲವನ್ನು ಅತಿ ಮಾಡದೇ, ಅಗತ್ಯಕ್ಕಷ್ಟೇ ಸೀಮಿತಗೊಳಿಸಲಾಗಿದೆ. ನಾಯಕ ಪ್ರೇಮ್ ಕೆರಿಯರ್‌ನಲ್ಲಿ ಇದೊಂದು ವಿಭಿನ್ನ ಸಿನಿಮಾ. ಪ್ರೇಮ್ ಕೂಡಾ ಆಯಾ ಶೇಡ್‌ಗೆ ತಕ್ಕಂತೆ ನಟಿಸಿ, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ಬೃಂದಾ ನಗುವಲ್ಲೇ ಗಮನ ಸೆಳೆದಿದ್ದಾರೆ. ಉಳಿದಂತೆ ಮಾಸ್ಟರ್ ಆನಂದ್, ಸಾಧುಕೋಕಿಲ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಛಾಯಾಗ್ರಾಹಕ ನವೀನ್ ಕುಮಾರ್ ಅವರ ಶ್ರಮ ಇಡೀ ಸಿನಿಮಾದಲ್ಲಿ ಎದ್ದು ಕಾಣುತ್ತದೆ. ಚಿತ್ರದಲ್ಲಿ ಅಲ್ಲಲ್ಲಿ ಬರುವ ಹಾಡುಗಳು, ಹಿನ್ನೆಲೆ ಸಂಗೀತ ಚಿತ್ರದ ಕಥೆಗೆ ಪೂರಕವಾಗಿದೆ. ಸಿನಿಮಾದ ಅವಧಿ ಸ್ವಲ್ಪ ಹೆಚ್ಚಾಗಿದೆ. ಅದಕ್ಕೆ ಕಾರಣ, ನಿರ್ದೇಶಕರು ಪೋಣಿಸಿಕೊಂಡು ಬಂದ ದೃಶ್ಯ. ಒಂದು ದೃಶ್ಯಕ್ಕೆ ಕತ್ತರಿ ಹಾಕಿದರೆ, ಎಲ್ಲಿ ಇಡೀ ಲಿಂಕ್ ತಪ್ಪೋಗುತ್ತದೋ ಎಂಬ ಕಾರಣದಿಂದ ಸಿನಿಮಾದ ಅವಧಿಯನ್ನು ಸ್ವಲ್ಪ ಹೆಚ್ಚೇ ಇಟ್ಟಿದ್ದಾರೆ. ಅದರಾಚೆ “ಪ್ರೇಮಂ ಪೂಜ್ಯಂ’ ಒಂದೊಳ್ಳೆಯ ಪ್ರೇಮಕಥೆ. ಯಾವುದೇ ಮುಜುಗರವಿಲ್ಲದೇ, ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಆರಾಮವಾಗಿ ಈ ಸಿನಿಮಾವನ್ನು ನೋಡಬಹುದು.
ರವಿಪ್ರಕಾಶ್ ರೈ