Advertisement

ಚಿತ್ರನಗರಿ, ಸ್ಮಾರಕ ಶೀಘ್ರ ನಿರ್ಮಾಣ: ಉಮಾಶ್ರೀ

08:39 AM Sep 22, 2017 | |

ಮೈಸೂರು: ಶೀಘ್ರವೇ ಚಿತ್ರನಗರಿ ಹಾಗೂ ವಿಷ್ಣು  ಸ್ಮಾರಕ ನಿರ್ಮಿಸಲಾಗುವುದು ಎಂದು ಸಚಿವೆ ಉಮಾಶ್ರೀ ತಿಳಿಸಿದ್ದಾರೆ. ನಗರದಲ್ಲಿ ಗುರುವಾರ ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕನ್ನಡ ಚಿತ್ರೋದ್ಯಮದ ಬೆಳವ ಣಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ರೀತಿಯಲ್ಲಿ ಸಹಕರಿಸಿದ್ದಾರೆ. ಪ್ರತಿ ತಾಲೂಕುಗಳಲ್ಲಿ ಜನತಾ ಚಿತ್ರಮಂದಿರಗಳ ನಿರ್ಮಾಣಕ್ಕೆ ಸರ್ಕಾರ 50 ಲಕ್ಷ ರೂ.ಸಬ್ಸಿಡಿ ನೀಡುತ್ತಿದೆ. ಜೊತೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಶೀಘ್ರವೇ ಚಿತ್ರನಗರಿ ಹಾಗೂ ವಿಷ್ಣು ಸ್ಮಾರಕ ನಿರ್ಮಾಣ ಕಾರ್ಯ ನೆರವೇರಿಸಲಿದ್ದಾರೆ ಎಂದು ತಿಳಿಸಿದರು. 

Advertisement

ನಿಸಾರ್‌ ಅಹಮದ್‌ಗಿಲ್ಲ ಫ್ಲೆಕ್ಸ್‌: ಸ್ವಚ್ಛ ನಗರಿ ಮೈಸೂರಿನಲ್ಲಿ ಫ್ಲೆಕ್ಸ್‌ ನಿಷೇಧಿಸಿದ್ದರೂ ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನಾ ದಿನದಂದು ಚಾಮುಂಡಿಬೆಟ್ಟದ ಅಲ್ಲಲ್ಲಿ ಹಲವು ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಮುಖ್ಯಮಂತ್ರಿ, ಮಂತ್ರಿಗಳು ಜತೆಗೆ ಸ್ಥಳೀಯ ರಾಜಕಾರಣಿಗಳು ತಮ್ಮ ಚಿತ್ರಗಳನ್ನು ಹಾಕಿಸಿಕೊಂಡಿದ್ದರು. ಆದರೆ, ಯಾವ ಫ್ಲೆಕ್ಸ್‌ನಲ್ಲೂ ಪ್ರೊ.ನಿಸಾರ್‌ ಅಹಮದ್‌ ಭಾವಚಿತ್ರ ಕಾಣಲಿಲ್ಲ. 

ನಿಸಾರ್‌ ಕುಟುಂಬ ಸದಸ್ಯರ ಹಾಜರಿ: ನಿಸಾರ್‌ ಅಹಮದ್‌ ಅವರ ಪತ್ನಿ ಶಹನವಾಜ್‌, ನಿಸಾರ್‌ ಅವರ ತಂಗಿ ದಿಲ್‌ಶಾÏದ್‌, ಅವರ ಮಗ ಸೆಂಧಿಲ್‌, ಬೀಗತಿ ನಾಗರತ್ನ, ಮೊಮ್ಮಕ್ಕಳಾದ ಹುಮರ್‌, ನವೀದ್‌, ಫಾತಿಮಾ, ಆಕುಬ್‌ ಸೇರಿ ನಿಸಾರದದ ಕುಟುಂಬದ ಸುಮಾರು 15 ಮಂದಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನಿಸಾರ್‌ ಅಹಮದ್‌ ಅವರ ಪತ್ನಿ ಅನಾರೋಗ್ಯ ಪೀಡಿತರಾಗಿರು ವುದರಿಂದ ಗಾಲಿ ಕುರ್ಚಿಯಲ್ಲಿ ಅವರನ್ನು ಕರೆ ತಂದು ಎಲ್ಲರಿಗಿಂತ ಮುಂಚೆಯೇ ವೇದಿಕೆಯ ಒಂದು ಮೂಲೆಯಲ್ಲಿ ಕೂರಿಸಲಾಗಿತ್ತು. ಆದರೆ,  ಸ್ವಾಗತ ಮಾಡುವವರಿಂದ ಹಿಡಿದು ನಂತರ ಮಾತನಾಡಿದ ಗಣ್ಯರಲ್ಲಿ ಯಾರೂ ಅವರ ಹೆಸರು ಹೇಳಲಿಲ್ಲ. ನಿಸಾರ್‌ ಅಹಮದ್‌ ತಮ್ಮ ಭಾಷಣದ ಸಂದರ್ಭದಲ್ಲಿ ಪತ್ನಿಯನ್ನು ನೆನೆದರು. ಆಗ ನಿರೂಪಕರು ಅವರಿಗೆ ಸ್ವಾಗತ ಕೋರಿದರು. ಕೂಡಲೇ ಸಚಿವೆ ಉಮಾಶ್ರೀ ಹಾರ ತೆಗೆದುಕೊಂಡು ಹೋಗಿ ಶಹನಾಜ್‌ ಅವರಿಗೆ ಹಾಕಿದರು.

ಫ‌ುಟ್‌ಪಾತ್‌ ಹೋಟೆಲಲ್ಲಿ ಇಡ್ಲಿ ತಿಂದ ಖಾದರ್‌:
ಸಚಿವ ಯು.ಟಿ.ಖಾದರ್‌, ತಾವು ಮಂತ್ರಿ ಎಂಬ ಹಮ್ಮು-ಬಿಮ್ಮು ಮರೆತು ಫ‌ುಟ್‌ಪಾತ್‌ ಹೋಟೆಲ್‌ ನಲ್ಲಿ ತಿಂಡಿ ತಿಂದು ಸರಳತೆ ಮೆರೆದರು. ಸಿಎಂ ಸಿದ್ದರಾಮಯ್ಯ ಅವರಿಗಿಂತ ಮುಂಚೆಯೇ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಸಚಿವ ಖಾದರ್‌,
ಮಹಿಷಾಸುರ ಪತ್ರಿಮೆ ಇರುವ ವೃತ್ತದಲ್ಲಿನ ಶ್ರೀ ಚಾಮುಂಡೇಶ್ವರಿ ಹೋಟೆಲ್‌ನಲ್ಲಿ ಇಡ್ಲಿ ತಿಂದು ಬೆಳಗಿನ ಉಪಾಹಾರ ಮುಗಿಸಿದರು.

30ರವರೆಗೆ “ಆಕಾಶ ಅಂಬಾರಿ’ ಹಾರಾಟ
ಬೆಂಗಳೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು-  ಮೈಸೂರು ನಡುವೆ ಸೆ.30ರವರೆಗೆ “ಆಕಾಶ ಅಂಬಾರಿ’ ವಿಶೇಷ ವಿಮಾನ ಹಾರಾಟ ಸೇವೆಗೆ ರಾಜ್ಯ ಸರ್ಕಾರ ಗುರುವಾರ ಚಾಲನೆ ನೀಡಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಕೈರಾಳಿ ಏವಿಯೇಷನ್‌ ಪ್ರೈವೇಟ್‌ ಲಿಮಿಟೆಡ್‌ (ಕೆಎಪಿಎಲ್‌) ಸಂಸ್ಥೆಯೊಂದಿಗೆ ಒಡಂಬಡಿಕೆಯಾಗಿದ್ದು, ಆಕಾಶ ಅಬಾರಿ ಸೇವೆ ಆರಂಭವಾಗಿದೆ. ವಿಮಾನ ನಿತ್ಯ ಬೆಳಗ್ಗೆ ಎಚ್‌ ಎಎಲ್‌ ವಿಮಾನ ನಿಲ್ದಾಣದಿಂದ ಹೊರಟು ಮೈಸೂರು ವಿಮಾನ ನಿಲ್ದಾಣ ತಲುಪಲಿದೆ. ಹಾಗೆಯೇ, ನಿತ್ಯ ಸಂಜೆ ಮೈಸೂರಿನಿಂದ ಬೆಂಗಳೂರಿಗೆ ವಿಮಾನ ಹಿಂತಿರುಗಲಿದೆ. ಮಾಹಿತಿಗೆ ದೂ. ಸಂಖ್ಯೆ- 93425 36565.

Advertisement

ಪಂಚೆ ಕಾಲಿಗೆ ಸಿಕ್ಕಿ ಮುಗ್ಗರಿಸಿದ ಸಿದ್ದರಾಮಯ್ಯ
ಬೆಳಗ್ಗೆ 8.50ರ ಸುಮಾರಿಗೆ ತಮ್ಮ ಸಂಪುಟದ ಸಚಿವರೊಂದಿಗೆ ಚಾಮುಂಡಿಬೆಟ್ಟಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕವಿ ಪ್ರೊ. ನಿಸಾರ್‌ ಅಹಮದ್‌  ಅವರೊಂದಿಗೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ದೇವಿಗೆ ಪೂಜೆ ಸಲ್ಲಿಸಿದರು. ಅಲ್ಲಿಂದ ಹೊರ ಬರುವಾಗ ಕಾಲಿಗೆ ಪಂಚೆ ಸಿಕ್ಕಿಕೊಂಡು ಮುಗ್ಗರಿಸಿದರು. ಕೂಡಲೇ ಜತೆಯಲ್ಲಿದ್ದ ನಿಸಾರ್‌ ಅಹಮದ್‌ ಮುಖ್ಯಮಂತ್ರಿಯವರ ತೋಳನ್ನು ಹಿಡಿದುಕೊಂಡು, ಅವರು ಬೀಳದಂತೆ ತಡೆದರು.

ಮಹಿಳೆಗೆ 500 ರೂ. ನೀಡಿದ ಸಿಎಂ
ದಸರಾ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹೊರಬರುತ್ತಿ ದ್ದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಎರಡೂ ಕಾಲಿಲ್ಲದ ಮಹಿಳೆಯೊಬ್ಬಳು ಎದುರಾದರು. ಆಕೆಯ ಸಮಸ್ಯೆ ಆಲಿಸಿದ ಸಿಎಂ, ಕೂಡಲೇ ಮನೆ ಮಂಜೂರು ಮಾಡಿಕೊಡುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿದರು. ತಮ್ಮ ಜೇಬಿನಿಂದ 500 ರೂ.ತೆಗೆದು ಆಕೆಗೆ ನೀಡಿ ಮುನ್ನಡೆದರು.

Advertisement

Udayavani is now on Telegram. Click here to join our channel and stay updated with the latest news.

Next