Advertisement
ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ವ್ಯಾಸರಾಯರು ಕವಿಯಾಗಿಯೂ,ಕಥೆಗಾರರಾಗಿಯೂ, ಕಾದಂಬರಿಕಾರರಾಗಿ,ಅನುವಾದಕರಾಗಿ ತನ್ನ ಸಾಹಿತ್ಯ ಸೇವೆ ಸಲ್ಲಿಸಿದವರು.
Related Articles
Advertisement
ಚೀನಿ, ಸಿಂಧಿ,ಇಂಗ್ಲೀಷ್,ಫ್ರೆಂಚ್, ಉರ್ದು ಕಥೆಗಳನ್ನು ಭಾಷಾಂತರಿಸಿದ ಹೆಗ್ಗಳಿಕೆಯೂ ವ್ಯಾಸರಾವ್ ಅವರದ್ದು. ವರನಟ ಡಾ.ರಾಜ್ ಕುಮಾರ್, ಕವಿ ಜಿ.ಎಸ್.ಶಿವರುದ್ರಪ್ಪ , ಡಾ.ಯು.ಆರ್.ಅನಂತಮೂರ್ತಿ ಸೇರಿದಂತೆ ಹಲವು ದಿಗ್ಗಜರ ಸಂದರ್ಶನ ನಡೆಸಿದ್ದ ವ್ಯಾಸರಾವ್ ಅವರು ತಮ್ಮ ಸಾಹಿತ್ಯ ಪ್ರೌಢಿಮೆಗೆ ಅನುಗುಣವಾಗಿ ಅದ್ಭುತ ಎನಿಸುವಂತ ಪ್ರಶ್ನೆಗಳನ್ನು ಮುಂದಿಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಇತರರ ಸಾಹಿತ್ಯ ದ ಕುರಿತು ಅಪಾರ ಕಾಳಜಿ, ಯುವ ಬರಹಗಾರರಿಗೆ ಪ್ರೇರೆಪಕರಾಗಿದ್ದ ವ್ಯಾಸರಾಯರು ನೂರಾರು ಮಂದಿ ಬರಹಗಾರರ ಕಥೆ, ಸಾಹಿತ್ಯ, ಹಾಸ್ಯ, ಕವನ ಸಂಕಲನಗಳಿಗೆ ಮುನ್ನುಡಿ ಬರೆದಿದ್ದಾರೆ.
ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಹಿರಿತೆರೆ ಮಾತ್ರವಲ್ಲನೆ ಕಿರುತೆರೆಗೂ ಸಾಹಿತಿಯಾಗಿ ಪರಿಚಿತರಾಗಿದ್ದ ವ್ಯಾಸರಾಯರು 35 ಜನಪ್ರಿಯ ಟಿವಿ ಧಾರಾವಾಹಿಗಳಿಗೆ ಸಾಹಿತ್ಯ ರಚಿಸಿದ್ದರು.
ನೂರಕ್ಕೂ ಹೆಚ್ಚು ಸಿನಿಮಾ ಹಾಡುಗಳನ್ನು ಬರೆದಿದ್ದ ವ್ಯಾಸರಾಯರ ಹಾಡುಗಳ ಪೈಕಿ ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು, ನೀನಿಲ್ಲದೇ ನನಗೇನಿದೆ.., ಚಂದ ಚಂದ ಸಂಗಾತಿ ನೋಟವೇ ಚಂದ.. ಮೊದಲಾದವು ಜನಪ್ರಿಯತೆಯ ಉತ್ತುಂಗಕ್ಕೇರಿದ ಗೀತೆಗಳು.
ಶ್ರೇಷ್ಠ ಸಾಹಿತ್ಯಕ್ಕೆ ಸಾಕ್ಷಿ, ಪ್ರೇರಣೆಯಾಗಿದ್ದ ಅವರ ಸಾಹಿತ್ಯವುಳ್ಳ ‘ಮೈಸೂರು ಮಲ್ಲಿಗೆ’, ‘ಆಸ್ಫೋಟ’, ‘ದಂಗೆ ಎದ್ದ ಮಕ್ಕಳು’, ‘ವಾತ್ಸಲ್ಯ ಪಥ’ ಚಿತ್ರಗಳು ಪ್ರಶಸ್ತಿಗೆ ಭಾಜನವಾಗಿವೆ.
ಬರ್ಕಲೀ ತರಂಗಿಣಿ ಪ್ರಶಸ್ತಿ, ಲಾವಣ್ಯ ಪ್ರಶಸ್ತಿ, ಜೇಸೀ ಪ್ರಶಸ್ತಿ, ಸ್ವರಮಂದಾರ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಸೇರಿದಂತೆ ನೂರಾರು ಸನ್ಮಾನಗಳಿಗೆ ವ್ಯಾಸರಾವ್ ಅವರು ಭಾಜನರಾಗಿದ್ದರು.
ಬೆಂಗಳೂರಿನ ನಿವಾಸದಲ್ಲಿ ಜುಲೈ 15 ರ ಭಾನುವಾರ ಬೆಳ್ಳಂಬೆಳಗ್ಗೆ ಸಾಹಿತ್ಯ ಲೋಕದ ಯಾತ್ರೆ ಮುಗಿಸಿ ವ್ಯಾಸರಾಯರು ಮರೆಯಾಗಿದ್ದಾರೆ.
ಬಹುಮುಖ ಪ್ರತಿಭೆಯನ್ನು ಹೊಂದಿದ್ದ ಮೇರು ಸಾಹಿತಿಯ ಅಗಲುವಿಕೆ ಕನ್ನಡ ಸಾರಸ್ವತ ಲೋಕಕ್ಕೆ ,ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎನ್ನಬಹದು.