Advertisement

ಫಿಲ್ಮ್ ಚೇಂಬರ್‌ ಆರ್ಥಿಕ ನೆರವು

05:28 AM Feb 17, 2019 | |

ಬೆಂಗಳೂರು: ಜಮ್ಮು ಕಾಶ್ಮೀರದಲ್ಲಿ ಯೋಧರ ಮೇಲೆ ನಡೆದ ಉಗ್ರರ ದಾಳಿ ಖಂಡಿಸಿ ಹಾಗೂ ಉಗ್ರರ ದಮನಕ್ಕೆ ಶೀಘ್ರ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ  ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಶನಿವಾರ ಪ್ರತಿಭಟಿಸಲಾಯಿತು. 

Advertisement

ಇದಕ್ಕೂ ಮುನ್ನ, ಶನಿವಾರ ಮಂಡಳಿಯಲ್ಲಿ ಹುತಾತ್ಮ ಯೋಧರಿಗೆ  ಶ್ರದ್ಧಾಂಜಲಿ ಸಭೆ ನಡೆಸಿ ಸಂತಾಪ ಸೂಚಿಸಲಾಯಿತು. ಇದೇ ವೇಳೆ ಮಂಡ್ಯದ ಹುತಾತ್ಮ ಯೋಧ ಗುರು ಅವರ ಕುಟುಂಬಕ್ಕೆ ಕರ್ನಾಟಕ ಚಲನಚಿತ್ರ  ವಾಣಿಜ್ಯ ಮಂಡಳಿ ಒಂದು ಲಕ್ಷ ರೂ. ನೆರವು ನೀಡುವುದಾಗಿ ಘೋಷಿಸಿತು.

ಇನ್ನೆರೆಡು ದಿನಗಳಲ್ಲಿ ಹುತಾತ್ಮ ಗುರು ಅವರ ಊರಿಗೆ ತೆರಳಿ, ಅವರ ಕುಟುಂಬದವರಿಗೆ ಸಾಂತ್ವನ ಹೇಳುವ ಜತೆಗೆ 1 ಲಕ್ಷ ರೂ.  ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಸಭೆಯಲ್ಲಿ ಮಂಡಳಿ ಅಧ್ಯಕ್ಷ ಚಿನ್ನೇಗೌಡ,  ಕೆಸಿಎನ್‌, ಚಂದ್ರಶೇಖರ್‌, ಸಾ.ರಾ.ಗೋವಿಂದು, ಕೆ.ವಿ.ಚಂದ್ರಶೇಖರ್‌, ಬಿ.ಆರ್‌. ಕೇಶವ್‌, ಸುನೀಲ್‌ಕುಮಾರ್‌ ಹಾಗೂ ಮಂಡಳಿ ಪದಾಧಿಕಾರಿಗಳು  ಭಾಗವಹಿಸಿದ್ದರು. 

ಬಂದ್‌ಗೆ ನೈತಿಕ ಬೆಂಬಲ: ಉಗ್ರರ ದಾಳಿ ಖಂಡಿಸಿ ಫೆ.19ರಂದು ಕರ್ನಾಟಕ ಬಂದ್‌ ಮಾಡುವ ವಾಟಾಳ್‌ ನಾಗರಾಜ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ  ಕರ್ನಾಟಕ ವಾಣಿಜ್ಯ ಮಂಡಳಿ, ಬಂದ್‌ಗೆ ನೈತಿಕ ಬೆಂಬಲ ನೀಡುವುದಾಗಿ ತಿಳಿಸಿದೆ.

ಈ ಬಗ್ಗೆ “ಉದಯವಾಣಿ’ ಜತೆ ಮಾತನಾಡಿದ ಮಂಡಳಿ ಗೌರವ  ಕಾರ್ಯದರ್ಶಿ ಭಾ. ಮ.ಹರೀಶ್‌, “ಉಗ್ರರ ದಾಳಿಗೆ ಸಂಬಂಧಿಸಿದಂತೆ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡಬೇಕಾದ ಕೆಲಸ ಮಾಡಿವೆ.  ದೇಶ, ವಿದೇಶದಿಂದಲೂ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಹಾಗಾಗಿ, 19ರಂದು ಚಿತ್ರೋದ್ಯಮದ ಮಂದಿ ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸುವ  ಮೂಲಕ ಬಂದ್‌ಗೆ ನೈತಿಕ  ಬೆಂಬಲ ನೀಡಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ಕರಿಯಪ್ಪ ಕಲೆಕ್ಷನ್‌ ಯೋಧನ ಕುಟುಂಬಕ್ಕೆ: ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು ಕುಟುಂಬಕ್ಕೆ ಅನೇಕರು ಸಹಾಯಹಸ್ತ  ಚಾಚುತ್ತಿದ್ದಾರೆ. ಚಿತ್ರರಂಗದ ಅನೇಕರು ಗುರು ಕುಟುಂಬದ ಸಹಾಯಕ್ಕೆ ಧಾವಿಸುತ್ತಿದ್ದಾರೆ. ಈಗ ಹೊಸಬರ ಚಿತ್ರತಂಡವೊಂದು ತಮ್ಮ ಸಿನಿಮಾದ ಒಂದು  ದಿನದ ಕಲೆಕ್ಷನ್‌ ಅನ್ನು ಹುತಾತ್ಮ ಯೋಧನ ಕುಟುಂಬಕ್ಕೆ ನೀಡಲು ನಿರ್ಧರಿಸಿದೆ.

ಹಾಗೆ ನೀಡಲು ನಿರ್ಧರಿಸಿರುವ ಚಿತ್ರ “ಕೆಮಿಸ್ಟ್ರಿ ಆಫ್ ಕರಿಯಪ್ಪ’. “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರತಂಡ, ತಮ್ಮ ಚಿತ್ರ ಬಿಡುಗಡೆಯಾಗಿರುವ ಚಿತ್ರಮಂದಿರಗಳಿಂದ ಬರುವ ಒಟ್ಟು ಕಲೆಕ್ಷನ್‌ ಮೊತ್ತವನ್ನು  ಹುತಾತ್ಮ ಗುರು ಅವರ ಕುಟುಂಬಕ್ಕೆ ಸೋಮವಾರ ನೀಡಲು ನಿರ್ಧರಿಸಿದೆ.

ಈ ಚಿತ್ರವನ್ನು ಎಂ ಸಿರಿ ಪ್ರೊಡಕ್ಷನ್ಸ್‌ನಡಿ ನಿರ್ಮಾಣ ಮಾಡಲಾಗಿದೆ. ಈ  ಹಿಂದೆಯೂ ಇದೇ ಬ್ಯಾನರ್‌ನಲ್ಲಿ ತಯಾರಾದ “ಸಂಯುಕ್ತ- 2′ ಚಿತ್ರದ ಮೊದಲ ದಿನದ ಕಲೆಕ್ಷನ್‌ ಅನ್ನು ಸೈನಿಕರ ಕಲ್ಯಾಣ ನಿಧಿಗೆ ನೀಡಲಾಗಿತ್ತು. “ಕೆಮಿಸ್ಟ್ರಿ  ಆಫ್ ಕರಿಯಪ್ಪ’ ಚಿತ್ರ ಒಂದು ಕಾಮಿಡಿ ಸಿನಿಮಾವಾಗಿದ್ದು, ನೋಡುಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next