ಪಣಜಿ: ದಕ್ಷಿಣ ಏಷ್ಯಾದ ಅಂತಾರಾಷ್ಟ್ರೀಯ ಸಿನಿಮಾ ಬಜಾರ್ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (NFDC)ದ ಫಿಲ್ಮ್ ಬಜಾರ್ ನ 15 ನೇ ಆವೃತ್ತಿ ಗೋವಾದ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸೆರಗಿನಲ್ಲೇ ಹೋಟೆಲ್ ಮೆರಿಯಟ್ ನಲ್ಲಿ ಆರಂಭವಾಗಿದೆ.
2007 ರಲ್ಲಿ ಅರಂಭವಾದ ಫಿಲ್ಮ್ ಬಜಾರ್ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗುತ್ತಿದೆ. ದಕ್ಷಿಣ ಏಷ್ಯಾದ ಬೃಹತ್ ಸಿನಿಮಾ ಬಜಾರ್ ಅಗಿ ಬೆಳೆಯುತ್ತಿದೆ. ಇದರಲ್ಲಿ ಸ್ಕ್ರಿಪ್ಟ್ ಲ್ಯಾಬ್, ವರ್ಕ್ ಇನ್ ಪ್ರೊಗ್ರೆಸ್ ಮತ್ತಿತರ ವಿಭಾಗಗಳಿವೆ. ಈ ಮೂಲಕ ದಕ್ಷಿಣ ಏಷ್ಯಾದ ಉದಯೋನ್ಮುಖ ಸಿನಿಮಾಕರ್ತರಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತಿದೆ.
ಹೊಸ ಚಿತ್ರ ನಿರ್ದೇಶಕರಿಗೆ ಹೂಡಿಕೆದಾರರನ್ನು ಹುಡುಕುವ ಹಾಗೂ ದಕ್ಷಿಣ ಏಷ್ಯಾದ ಸಿನಿಮಾಗಳ ಮಾರಾಟಕ್ಕೆ ವೇದಿಕೆಯನ್ನು ಕಲ್ಪಿಸುತ್ತಿರುವ ಫಿಲ್ಮ್ ಬಜಾರ್, ಲಂಚ್ ಬಾಕ್ಸ್, ಚೌತಿಕೂಟ್, ತಿಥಿ, ತಿತ್ಲಿ, ಕೋರ್ಟ್, ಮಿಸ್ ಲವ್ಲಿ, ಆನ್ಹೆ ಗೋಡೆ ದಾ ದಾನ್ ಮುಂತಾದ ಚಿತ್ರಗಳು ಬೇರೆ ಬೇರೆ ಚಿತ್ರೋತ್ಸವಗಳಲ್ಲಿ ವೇದಿಕೆ ಕಲ್ಪಿಸಿದೆ. ಹಾಗಾಗಿ ಇದೊಂದು ಹೊಸ ಪ್ರತಿಭೆಗಳ ಶೋಧನೆ, ಬೆಂಬಲ, ವಿತರಣೆಯ ಜತೆಗೆ ದಕ್ಷಿಣ ಏಷ್ಯಾದ ಸಿನಿಮಾಗಳ ಪ್ರವರ್ಧನೆಯನ್ನೂ ಫಿಲ್ಮ್ ಬಜಾರ್ ಕೈಗೊಂಡಿದೆ.
ಇದರ 15 ನೇ ಆವೃತ್ತಿಗೆ ಚಾಲನೆ ನೀಡಿದ್ದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ ಠಾಕೂರ್, ದಕ್ಷಿಣ ಏಷ್ಯಾದ ಸಿನಿಮಾಗಳಿಗೆ ಇದೊಂದು ಉತ್ತಮ ವೇದಿಕೆ. ವಿವಿಧ ದೇಶಗಳ ಸಿನಿಮಾಕರ್ತರು ಇಲ್ಲಿಗೆ ಬಂದು ಭಾರತೀಯ ಸಿನಿಮಾ ಕ್ಷೇತ್ರದೊಂದಿಗೆ ಸಹಯೋಗಕ್ಕೆ ಮುಂದಾಗುವಂತೆ ಪ್ರೇರೇಪಿಸುತ್ತಿದೆ ಎಂದರು.
ಭಾರತವು ಜಾಗತಿಕವಾಗಿ ಸಿನಿಮಾ ಉದ್ಯಮಕ್ಕೆ ಅತ್ಯಂತ ಸೂಕ್ತ ತಾಣವನ್ನಾಗಿ ರೂಪಿಸುವುದು ನಮ್ಮ ಗುರಿ. ಈ ಹಿನ್ನೆಲೆಯಲ್ಲಿ ಎಲ್ಲ ಬಗೆಯ ಬೆಂಬಲ ಒದಗಿಸಲಾಗುತ್ತಿದೆ. ಇಫಿ ಹಾಗೂ ಫಿಲ್ಮ್ ಬಜಾರ್ ಅಂಥ ವೇದಿಕೆಗಳು. ಭಾರತವನ್ನು ಮುಂದಿನ ವರ್ಷಗಳಲ್ಲಿ ಚಿತ್ರ ನಿರ್ಮಾಣ ಹಾಗೂ ಮಾರಾಟದ ಸಶಕ್ತ ಕೇಂದ್ರವನ್ನಾಗಿಸಲಾಗುವುದು ಎಂದು ಹೇಳಿದರು.
ಈ ಬಾರಿ ಇಫಿ ಹಾಗೂ ಫಿಲ್ಮ್ ಬಜಾರ್ ಎರಡರಲ್ಲೂ ಸಾಕಷ್ಟು ಹೊಸ ಕ್ರಮಗಳನ್ನು ಕೈಗೊಳ್ಳಲಾಗಿದೆ. ಫಿಲ್ಮ್ ಬಜಾರ್ ನಲ್ಲಿ ಕಾನ್ ಚಿತ್ರೋತ್ಸವ ಮಾದರಿಯಲ್ಲಿ ವಿವಿಧ ದೇಶಗಳ ಪೆವಿಲಿಯನ್ ಗಳನ್ನೂ ನಿರ್ಮಿಸಲಾಗಿದೆ. ಅದರೊಂದಿಗೆ ವ್ಯೂವಿಂಗ್ ರೂಮ್ ಇತ್ಯಾದಿ ಅವಕಾಶಗಳಿವೆ. ಫಿಲ್ಮ್ ಬಜಾರ್ ನವೆಂಬರ್ 24 ರವರೆಗೆ ನಡೆಯಲಿದೆ.