ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ಯರದೇಹಳ್ಳಿ ಸಮೀಪದ ಡಿ 26 ಹೇಮಾವತಿ ಉಪನಾಲೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ಈ ಭಾಗದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಶಾಸಕ ಮಸಾಲಜಯರಾಂ ಚಾಲನೆ ನೀಡಿದರು.
ನಂತರ ಮಾತನಾಡಿ, ಕಳೆದ 20 ವರ್ಷ ಗಳಿಂದ ಯಾವೊಬ್ಬ ಜನಪ್ರತಿನಿಧಿಯೂ ಈ ಭಾಗದ ಕೆರೆಗಳಿಗೆ ಹೇಮಾವತಿ ನೀರು ಹರಿಸದೆ ಬರಪೀಡಿತ ಪ್ರದೇಶವಾಗಿತ್ತು. ರೈತರು ಯಾವುದೇ ಬೆಳೆ ಬೆಳೆದರೂ ಉತ್ತಮ ಫಸಲು ಸಿಗುತ್ತಿರಲಿಲ್ಲ. ಜೊತೆಗೆ ಸಾವಿರಾರು ಅಡಿಗಳ ಕೊಳವೆ ಬಾವಿ ಕೊರೆಸಿದರು ಒಂದು ಹನಿ ನೀರು ಬರುತ್ತಿರಲಿಲ್ಲ. ಇದನ್ನರಿತು ಮಾಯಸಂದ್ರ ಹೋಬಳಿಯ ರೈತರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಬಳಿ ನಿಯೋಗ ಹೋಗಿ ಈ ಭಾಗದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗಿತು. ಅದರಂತೆ ಮಾಯಸಂದ್ರ ಹೋಬಳಿ ಭಾಗದ ಉಪನಾಲೆಗಳಲ್ಲಿನ ಕಸಕಟ್ಟಿಗಳನ್ನು ತೆರವುಗೊಳಿಸಲು 40 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು.
ಸಿಎಸ್‌ಪುರ ಮತ್ತು ಮಾಯಸಂದ್ರ ಹೋಬಳಿ ಹಾಗೂ ಕ್ಷೇತ್ರದ ವಿವಿಧ ಭಾಗದ ಕೆರೆಗಳಿಗೆ ನೀರು ಬಿಡುವ ಕೆಲಸವನ್ನು ಬಿಜೆಪಿ ಸರ್ಕಾರ ಹೊರತು ಪಡಿಸಿ ಮತ್ತ್ಯಾವ ಸರ್ಕಾರಗಳು ಮಾಡಲಿಲ್ಲ. ಹಾಗಾಗಿ ಹಂತ ಹಂತವಾಗಿ ತಾಲೂಕಿನ ಎಲ್ಲ ಕೆರೆ ಕಟ್ಟೆಗಳನ್ನು ತುಂಬಿಸುವೆ. ಡಿಸೆಂಬರ್ ಅಂತ್ಯದವರೆಗೂ ಹೇಮಾವತಿ ನಾಲಾ ನೀರು ಹರಿಯುವುದರಿಂದ ಯಾವ ರೈತರೂ ಗೊಂದಲಕ್ಕೆ ಒಳಗಾಗದಿರೆಂದು ಭರವಸೆ ನೀಡಿದರು.
ಮಾಯಸಂದ್ರ ಹೋಬಳಿಯ ಗುಡ್ಡೇನ ಹಳ್ಳಿ ರೈತರ ತೆಂಗಿನ ಸಸಿಗಳನ್ನು ಶಾಸಕ ಮಸಾಲ ಜಯರಾಂ ಕೀಳಿಸಿದ್ದಾರೆಂಬ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿ ಪಾದಯಾತ್ರೆ ಮಾಡುವ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಈ ವಿಚಾರದಲ್ಲಿ ನನ್ನ ಪಾತ್ರವೇನಿಲ್ಲ. ಈ ಬಗ್ಗೆ ರೈತರಲ್ಲಿ ತಪ್ಪು ಗ್ರಹಿಕೆ ಬೇಡ. ನಾಳೆಯೇ ಗುಡ್ಡೇನಹಳ್ಳಿ ಗ್ರಾಮದಲ್ಲಿ ತಹಶೀಲ್ದಾರ್ ಹಾಗೂ ಉಪಭಾಗಾಧಿಕಾರಿ ಸಮ್ಮುಖದಲ್ಲಿ ರೈತ ಸಂವಾದ ನಡೆಸಿ ಕಾನೂನಾತ್ಮಕವಾಗಿ ರೈತರಿಗೆ ನ್ಯಾಯ ಒದಗಿಸಿಕೊಡುವೆ. ಈ ವಿಚಾರದಲ್ಲಿ ರೈತರು ಬೇರೆಯವರ ಮಾತಿಗೆ ಕಿವಿಗೊಟ್ಟರೆ ಅವರೆ ಜವಾಬ್ದಾರರು ಎಂದರು.
ಜಿಪಂ ಸದಸ್ಯೆ ಜಯಲಕ್ಷ್ಮೀ ಜಯರಾಂ, ಮಾಜಿ ಸದಸ್ಯ ಶ್ರೀನಿವಾಸ್, ತಾಪಂ ಸದಸ್ಯ ಮಹಲಿಂಗಯ್ಯ ಇದ್ದರು.