ಬೀದರ/ಯಾದಗಿರಿ: ಮಳೆಯಿಂದಾಗಿ ಜಿಲ್ಲೆಯ ಕೆರೆ ಕಟ್ಟೆಗಳಲ್ಲಿ ನೀರು ತುಂಬುತ್ತಿದ್ದು ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಬೀದರ್ -ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ
ಅಭಿಯಂತರರಿಗೆ ಸೂಚಿಸಿದ್ದಾರೆ. ಅಧಿಕಾರಿಗಳ ತಂಡ ರಚಿಸಿ, ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳಿಗೆ ಭೇಟಿ ನೀಡಬೇಕು. ಕೆರೆಗಳ ನೀರು ಸಂಗ್ರಹಣೆ ಸಾಮರ್ಥ್ಯ, ಹೆಚ್ಚುವರಿಯಾಗಿ ಬಂದ ನೀರು, ಕೆರೆಗಳಲ್ಲಿ ಬಿರುಕು ಬಿಟ್ಟಿರುವುದರ ಬಗ್ಗೆ ಮಾಹಿತಿ ಪಡೆದು, ಕೆರೆ ಪಕ್ಕದ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಗೋದಾವರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿದಿದ್ದರಿಂದ ಜಿಲ್ಲೆಯ ಕಾರಂಜಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಹಾನಿಯಾಗುವ ಸಾಧ್ಯತೆಗಳಿರುವುದರಿಂದ ಮುನ್ನೆಚ್ಚರಿಕೆ ವಹಿಸಲು ತಿಳಿಸಿರುವುದಾಗಿ ಹೇಳಿದ್ದಾರೆ.
ಹುಲಸೂರು ಮಾರ್ಗದಲ್ಲಿರುವ ಬ್ರಿಡ್ಜ್ ಕಂ ಬ್ಯಾರೇಜ್, ಬೆಳಕುಣಿ ಸೇತುವೆ, ದಾಡಗಿ ಸೇತುವೆ, ಬಗದಲ್ ಬಳಿಯ ಸೇತುವೆ ಸೇರಿದಂತೆ ಹಲವು ಕಡೆಗಳಲ್ಲಿ ಸೇತುವೆಗಳು ಮುಳುಗಿ ಸಂಚಾರಕ್ಕೆ ಸಮಸ್ಯೆಯಾಗಿರುವುದು ಮತ್ತು ಹುಲಸೂರು ಬಳಿಯ ಕೆರೆ ಒಡೆದು ಸಮೀಪದ ಹೊಲ ಮತ್ತು ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ.
ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ತಂಡ ರಚಿಸಿ, ಖುದ್ದು ಪರಿಶೀಲನೆಗೆ ಮುಂದಾಗಬೇಕು. ತಮ್ಮ ವ್ಯಾಪ್ತಿಯಲ್ಲಿ ಬರುವ ಕೆರೆ, ಬ್ರಿಜ್ ಕಂ ಬ್ಯಾರೇಜ್, ಬಾಂದಾರ ಮುಂತಾದ ಕಡೆ ಸಂಚರಿಸಿ ಹಾನಿಯ ಮಾಹಿತಿ ಕಲೆಹಾಕಬೇಕು. ಕೆರೆ ಒಡೆದು ಹೊಲಗಳಿಗೆ ನೀರು ನುಗ್ಗುವ ಸಂಭವ ಇದ್ದಲ್ಲಿ ಸೂಕ್ತ ಮುಂಜಾಗ್ರತೆ ವಹಿಸಬೇಕು ಎಂದಿದ್ದಾರೆ.
ಅಧಿಕಾರಿಗಳೇ ನೇರ ಹೊಣೆ ಅಧಿಕಾರಿಗಳು ಕೆರೆ ಪರಿಶೀಲನೆಗೆ ಹೋಗಿರುವ ಬಗ್ಗೆ ತಮ್ಮ ಮೊಬೈಲ್‌ಗೆ ವಾಟ್ಸ್‌ಆ್ಯಪ್ ಫೋಟೊ ಕಳುಹಿಸಬೇಕು. ಯಾವುದೇ ಕಾರಣಕ್ಕೂ ಕಚೇರಿಯಲ್ಲಿ ಕುಳಿತು ವರದಿ ತಯಾರಿಸಬಾರದು. ಅಧಿಕಾರಿಗಳ ನಿಷ್ಕಾಳಜಿಯಿಂದ ಎಲ್ಲಿಯಾದರೂ ಅನಾಹುತವಾದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು.
– ಪ್ರಭು ಚವ್ಹಾಣ, ಸಚಿವ