Advertisement

ತುಂಬುತ್ತಿದೆ ಪರ್ಯಾಯ ಉಗ್ರಾಣ

04:43 PM Jan 16, 2018 | |

ಉಡುಪಿ: ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ  ದ್ವಿತೀಯ ಪರ್ಯಾಯ ಮಹೋತ್ಸವಕ್ಕೆ  ಸಿದ್ಧತೆಗಳು ಭರದಿಂದ ಸಾಗುತ್ತಿದೆ.  ಒಂದೆಡೆ ನಗರ  ಈ ಉತ್ಸವಕ್ಕೆ  ಶೃಂಗಾರಗೊಂಡರೆ,   ಪರ್ಯಾಯ ಮಹೋತ್ಸವಕ್ಕೆ ವಿವಿಧೆಡೆಗಳಿಂದ  ಬರುವ  ಹೊರೆಕಾಣಿಕೆಯ ಮೆರವಣಿಗೆಯ ಸಂಭ್ರಮ ಆರಂಭಗೊಂಡಿದೆ.  ಹೊರೆಕಾಣಿಕೆಯಿಂದ ಬಂದ ಸಾಮಗ್ರಿಗಳನ್ನು  ಸಂಗ್ರಹಿಸಿಡುವ  ಗೋದಾಮು ಈಗ ದವಸ ಧಾನ್ಯಗಳಿಂದ ತುಂಬಿರುವುದು ಭಕ್ತಾದಿಗಳಿಗೆ ಆಕರ್ಷಣೆಯ ಕೇಂದ್ರವಾಗಿದೆ.   

Advertisement

ಶ್ರೀಕೃಷ್ಣ ಮಠದ  ಪಾರ್ಕಿಂಗ್‌ ಪ್ರದೇಶದಲ್ಲಿ  ಪರ್ಯಾಯ ಉಗ್ರಾಣವನ್ನು ನಿರ್ಮಿಸಲಾಗಿದೆ.  ಜ.7ರಿಂದ ರಾಜ್ಯಾದ್ಯಂತ ವಿವಿಧ ಸಂಘಟನೆಗಳು, ದೇವಸ್ಥಾನಗಳಿಂದ ಹೊರೆ ಕಾಣಿಕೆಯನ್ನು ಸಮರ್ಪಿಸಲಾಗುತ್ತದೆೆ.  ಉಗ್ರಾಣದಲ್ಲಿ ಪ್ರತಿಯೊಂದು ಸಾಮಗ್ರಿಗಳನ್ನು ವಿಂಗಡಿಸಿ ಪ್ರತ್ಯೇಕ  ವಿಭಾಗವನ್ನು ತೆರೆದು ದಾಸ್ತಾನು ಇಡಲಾಗಿದೆ. ಈ  ಸಾಮಗ್ರಿಗಳನ್ನು  ವಿಂಗಡಿಸಿ ಇಟ್ಟಿರುವುದು ಒಂದು ಕಲೆಯೇ ಆಗಿದೆ.  ಬ್ರಾಹ್ಮಣ ಯುವ ಪರಿಷತ್‌ ಉಗ್ರಾಣ ಕಚೇರಿ ನಿರ್ವಹಣೆಯನ್ನು ಮಾಡಿದರೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ವಿಶೇಷವಾಗಿ ಜೋಡಣೆ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು  ವಹಿಸಿಕೊಂಡಿದೆ. ಹೊರೆ ಕಾಣಿಕೆ  ಜ.16ರತನಕವೂ ಹರಿದು ಬರಲಿದೆ.

ಹರಿದು ಬಂದ ಅಕ್ಕಿ-ಕಾಯಿ
ಪರ್ಯಾಯ ಮಹೋತ್ಸವಕ್ಕೆ  ತರಕಾರಿ ಕಾಯಿಪಲ್ಲೆಯೊಂದಿಗೆ  ಅಕ್ಕಿ ಹಾಗೂ ಕಾಯಿ ಅತಿ ಹೆಚ್ಚು ಪ್ರಮಾಣದಲ್ಲಿ ಹೊರೆ ಕಾಣಿಕೆ ರೂಪದಲ್ಲಿ  ಬಂದಿದ್ದು ,  ರಾಯಚೂರು ಭಕ್ತರಿಂದ (ಮಂತ್ರಾಲಯ) 1,300 ಚೀಲ ಅಕ್ಕಿ ಹೊರೆಕಾಣಿಕೆ ರೂಪದಲ್ಲಿ ಬಂದಿರುವುದು ವಿಶೇಷವಾಗಿದೆ. ಉಗ್ರಾಣದಲ್ಲಿ   ಈ ತನಕ ಸುಮಾರು 3,840 ಚೀಲ ಅಕ್ಕಿ, 17 ಸಾವಿರ ತೆಂಗಿನ ಕಾಯಿ, 5,000 ಕೆ.ಜಿ.ಬೆಲ್ಲ, 2,000 ಕೆ.ಜಿ. ಬೇಳೆ, 1,000 ಕೆ.ಜಿ. ಸಕ್ಕರೆ , ಸಿಪ್ಪೆಕಾಯಿ,  ದವಸದಾನ್ಯ , ತರಕಾರಿಗಳಲ್ಲಿ ಮುಖ್ಯವಾಗಿ ಮಟ್ಟುಗುಳ್ಳ,  ಕುಂಬಳಕಾಯಿ, ಸೌತೆಕಾಯಿ, ಮರಗೆಣಸು, ಗಡ್ಡೆಗಳು,  ಸಿಯಾಳ, ಬಾಳೆ ಹಣ್ಣಿನ ಗೊನೆಗಳು  ಹೊರೆಕಾಣಿ ಕಾಣಿಕೆ ರೂಪದಲ್ಲಿ ಬಂದಿವೆ.  

ಅಲಂಕೃತ ತರಕಾರಿಗಳು 
ಉಗ್ರಾಣದ  ನಿರ್ವಹಣೆಯನ್ನು ಹೊತ್ತ ಶ್ರೀ ಧರ್ಮಸ್ಥಳ ಗ್ರಾಮೀಣಅಭಿವೃದ್ಧಿ  ಯೋಜನೆಯ ಸದಸ್ಯರು  ಹೊರೆಕಾಣಿಕೆ ಬಂದ ತರಕಾರಿಗಳನ್ನು ಅಲಂಕೃತವಾಗಿ ಜೋಡಿರುವುದು  ಜನಾಕರ್ಷನೆಯ ಕೇಂದ್ರವಾಗಿದೆ.  ಪಾರಂಪರಿಕ ಸೊಗಡನ್ನು ಹೊತ್ತ ಭತ್ತದ ತಿರಿ ಇಲ್ಲಿ ಜನರನ್ನು ಆಕರ್ಷಿಸಿದರೆ, ವಿಶೇಷವಾಗಿ ಜೋಡಿಸಿಟ್ಟ  ಕುಂಬಳಕಾಯಿ ಹಾಗೂ ಸೌತೆಕಾಯಿಗಳು ಭಕ್ತಾದಿಗಳ ಆಕರ್ಷಿಸುತ್ತಿದೆ.  ಎತ್ತಿನ ಬಂಡಿಯಲ್ಲಿ  ತರಕಾರಿಗಳು ವಿಶೇಷ ವಿನ್ಯಾಸದಲ್ಲಿ  ಜೋಡಿಸಲ್ಪಟ್ಟಿವೆ.  ಸಿಪ್ಪೆ ಇದ್ದ  ತೆಂಗಿನ ಕಾಯಿ ಹಾಗೂ  ಅಕ್ಕಿಯನ್ನು ಈ ಗೋದಾಮಿನಲ್ಲಿ  ಸಂಗ್ರಹಿಸಲು ಜಾಗ ಸಾಕಾಗದೇ ಇರುವುದರಿಂದ ಇನ್ನೊಂದು ನಾಲ್ಕೈದು ಸಾವಿರ ಚದರಡಿಯ ಉಗ್ರಾಣವನ್ನು  ಬೇರೆಯಾಗಿಯೇ ನಿರ್ಮಿಸಲಾಗಿದೆ.

ಸರ್ವಧರ್ಮೀಯರಿಂದ ಹೊರೆ ಕಾಣಿಕೆ
ಈ ಬಾರಿಯ ಪರ್ಯಾಯ ಮಹೋತ್ಸವಕ್ಕೆ   ಮುಸ್ಲಿಂ ಹಾಗೂ ಕ್ರಿಶ್ಚಿಯನ್‌ ಬಾಂಧವರು ಸಹ  ಹೊರೆಕಾಣಿಕೆಯನ್ನು ಸಮರ್ಪಿಸಿರುವುದು ವಿಶೇಷವಾಗಿತ್ತು. ಹೊರೆಕಾಣಿಕೆಯನ್ನು  ವಿವಿಧ ವಾಹನದಲ್ಲಿ ತೆಗೆದುಕೊಂಡು ಬಂದ ಭಕ್ತಾದಿಗಳಿಗೆ  ಶ್ರೀ ಅದಮಾರು ಶ್ರೀಗಳು ಮಂತ್ರಾಕ್ಷತೆ ನೀಡಿ  ಆಶೀರ್ವಚಿಸಿದರೆ,  ಹೊರೆಕಾಣಿಕೆ ತಂದವರಿಗೆ  ಉಪಾಹಾರವನ್ನು ನೀಡುವ ಕಾರ್ಯ ಅಚ್ಚಕಟ್ಟಾಗಿ ನಡೆದುಬಂದಿದೆ. 

Advertisement

ಉದಯ ಆಚಾರ್‌ ಸಾಸ್ತಾನ

Advertisement

Udayavani is now on Telegram. Click here to join our channel and stay updated with the latest news.

Next