Advertisement

ಮೈದುಂಬಿದ ಲಕ್ಷ್ಮಣತೀರ್ಥ: ಹನಗೋಡು ಡ್ಯಾಂ ಭರ್ತಿ

09:43 PM Jul 13, 2019 | Lakshmi GovindaRaj |

ಹುಣಸೂರು: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬ್ರಹ್ಮಗಿರಿ ತಪ್ಪಲಿನ ಇರ್ಪು ಬಳಿ ಸುರಿಯುತ್ತಿರುವ ಮಳೆಯಿಂದ ಲಕ್ಷ್ಮಣತೀರ್ಥ ಮೈದುಂಬಿ ತುಂಬಿ ಹರಿಯುತ್ತಿದೆ. ಇದರಿಂದ ಹನಗೋಡು ಅಣೆಕಟ್ಟೆ ಮೇಲೆ ಒಂದೂವರೆ ಅಡಿ ನೀರು ಹರಿಯುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

Advertisement

ಅಣೆಕಟ್ಟೆ ಮೇಲೆ 980ಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಹರಿಯುತ್ತಿದೆ. ಅಣೆಕಟ್ಟೆಯನ್ನು ಆಧುನೀಕರಣಗೊಳಿಸಿರುವುದರಿಂದ ಕೋಡಿ ನೀರು ಅಂದ ಚೆಂದವಾಗಿ ಕಾಣುತ್ತಿದೆ. ನಿತ್ಯ ಸಹಸ್ರಾರು ಮಂದಿ ನೀರು ಹರಿಯುವ ಮನ ಮೋಹಕ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಕೊಚ್ಚಿಹೋದ ಕೊಳಚೆ ನೀರು: ಕಳೆದ ಇಪ್ಪತ್ತು ದಿನಗಳಿಂದ ಅಣೆಕಟ್ಟೆ ಮೇಲೆ ನೀರು ಹರಿಯುತ್ತಿದ್ದು, ಹುಣಸೂರು ನಗರದ ಮಧ್ಯ ಭಾಗದಲ್ಲಿ ಹರಿಯುವ ನದಿಗೆ ಚರಂಡಿ ನೀರು ಸೇರಿ ಸಂಪೂರ್ಣ ಕಲುಷಿತಗೊಂಡಿತ್ತಲ್ಲದೇ ಇಡೀ ನದಿಯನ್ನೇ ಆವರಿಸಿಕೊಂಡಿದ್ದ ಅಂತರಗಂಗೆಯನ್ನು (ಹಸಿರೆಲೆ ಬಳ್ಳಿ )ಇದೀಗ ನದಿ ನೀರು ಕೊಚ್ಚಿಕೊಂಡು ಹೋಗಿದ್ದು, ಕಟ್ಟೆಮಳಲವಾಡಿ ಅಣೆಕಟ್ಟೆಯ ಬಳಿ ಸಂಗ್ರಹಗೊಂಡಿದೆ. ದೊಡ್ಡ ಪ್ರಮಾಣದಲ್ಲಿ ನೀರು ಬಂದರಷ್ಟೆ ಅಂತರಗಂಗೆ ಸಂಪೂರ್ಣ ಹೊತ್ತೂಯ್ಯಲಿದೆ. ನದಿಯಲ್ಲಿ ಪ್ರವಾಹದ ನೀರು ಹರಿಯುತ್ತಿದ್ದಂತೆ ದುರ್ವಾಸನೆ ಸಹ ಬೀರುತ್ತಿದೆ.

ನಾಲೆಗೆ ನೀರು ಹರಿಸಿ: ಅಣೆಕಟ್ಟೆ ಮೇಲೆ ಸಾಕಷ್ಟು ನೀರು ಹರಿಯುತ್ತಿದ್ದರೂ ಕಾವೇರಿ ನಿರ್ವಹಣಾ ಮಂಡಳಿ ಆದೇಶ ನೀಡಿಲ್ಲವೆಂಬ ನೆಪವನ್ನಿಟ್ಟುಕೊಂಡು ಹಾರಂಗಿ ಎಂಜಿನಿಯರುಗಳು ನಾಲೆಗೆ ನೀರು ಹರಿಸದ ಪರಿಣಾಮ ರೈತರು ಆಕ್ರೋಶಗೊಂಡಿದ್ದರೆ. ಮುಖ್ಯ ನಾಲೆ ಸೇರಿದಂತೆ ಬಹುತೇಕ ನಾಲೆಗಳು ಆಧುನಿಕರಣಗೊಂಡಿದ್ದು, ನೀರು ಬಿಟ್ಟರೆ ವೇಗವಾಗಿ ಕೊನೆ ಭಾಗದ ಅಚ್ಚುಕಟ್ಟು ಪ್ರದೇಶಕ್ಕೂ ತಲುಪಲಿದೆ. ನೀರಿಗಾಗಿ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇನ್ನೂ ತಡವಾದರೆ ಅಣೆಕಟ್ಟೆ ನೀರಿನಿಂದಲೇ 40 ಕ್ಕೂ ಹೆಚ್ಚು ಕೆರೆ-ಕಟ್ಟೆಗಳು ತುಂಬ ಬೇಕಿದ್ದು, ಈ ಸಾರಿ ಈ ಬಯಲು ನೀರಾವರಿ ಆಗುವುದೇ ಎಂಬ ಅನುಮಾನ ಕಾಡುತ್ತಿದೆ.

ಡ್ಯಾಂ ನೀರು ಹರಿಸದಿದ್ದರೆ ಪ್ರತಿಭಟನೆ: ಹನಗೋಡು ಅಣೆಕಟ್ಟು ಭರ್ತಿಯಾಗಿದ್ದರೂ ಕಾಮಗಾರಿ ನೆಪದಲ್ಲಿ ನಾಲೆಗಳಿಗೆ ನೀರು ಹರಿಸದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ತಕ್ಷಣವೇ ನೀರು ಹರಿಸದಿದ್ದಲ್ಲಿ ಜು.16 ರಂದು ಹಾರಂಗಿ ಕಚೇರಿ ಎದುರು ರಾಜ್ಯ ರೈತಸಂಘವು ಅಚ್ಚುಕಟ್ಟದಾರ ರೈತರೊಂದಿಗೆ ಪ್ರತಿಭಟನೆ ನಡೆಸುವುದಾಗಿ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಕೊಡಗಿನಲ್ಲಿ ಕಳೆದ 20 ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಲಕ್ಷ್ಮಣತೀರ್ಥ ನದಿಯ ಹನಗೋಡು ಅಣೆಕಟ್ಟೆ ಭರ್ತಿಯಾಗಿ ನದಿಯಲ್ಲಿ ಸಾಕಷ್ಟು ನೀರು ಹರಿದು ಹೋಗುತ್ತಿದ್ದರೂ ಕಾಮಗಾರಿ ನೆಪದಲ್ಲಿ ಹನುಮಂತಪುರ ನಾಲಾ ಹಾಗೂ ಉದ್ದೂರು ಕಾವಲು ನಾಲೆಗಳಿಗೆ ನೀರು ಹರಿಸದ ಪರಿಣಾಮ ಕೆರೆಗಳು ಬತ್ತಿ ಹೋಗಿವೆ. ನಾಲಾ ವ್ಯಾಪ್ತಿಯಲ್ಲಿ ತಾಲೂಕಿನ ಸುಮಾರು 28 ಸಾವಿರ ಎಕರೆ ಇದ್ದು, ಅದಕ್ಕಿಂತ ಮಿಗಿಲಾಗಿ 42 ಕೆರೆಗಳಿಗೆ ನೀರನ್ನು ತುಂಬಿಸದೆ ನಿರ್ಲಕ್ಷ್ಯವಹಿಸಲಾಗಿದೆ. ತಕ್ಷಣವೇ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾದ 156 ಕೋಟಿ ವೆಚ್ಚದ ಹನಗೋಡು ಅಣೆಕಟ್ಟೆ ಹಾಗೂ ನಾಲಾ ಆಧುನೀಕರಣ ಕಾಮಗಾರಿ ನಡೆಯುತ್ತಿದ್ದು, ಹಲವೆಡೆ ಅಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕಾಮಗಾರಿ ನಡೆಸುವ ಸಲುವಾಗಿ ಎಂಜಿನಿಯರ್‌ಗಳು ನೀರು ಬಿಡಲು ಸಬೂಬು ಹೇಳುತ್ತಿದ್ದಾರೆ. ಕಾಮಗಾರಿ ನಡೆಯುವ ವೇಳೆ ಮುಚ್ಚಿ ಹೋಗಿರುವ ತೂಬು, ಉಪನಾಲೆಗಳನ್ನು ಸರಿಪಡಿಸಿ, ಬೇಗ ನೀರು ಹರಿಸಿ ಮೊದಲು ಕೆರೆ-ಕಟ್ಟೆಗಳನ್ನು ತುಂಬಿಸಬೇಕೆಂದು ಒತ್ತಾಯಿಸಿದರು.

ಈ ಹಿಂದೆಲ್ಲಾ ಅಣೆಕಟ್ಟೆ ತುಂಬಿದ ತಕ್ಷಣ ನೀರು ಬಿಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಕಾವೇರಿ ನಿರ್ವಹಣಾ ಪ್ರಾಧಿಕಾರದ ಅನುಮತಿ ಬೇಕಿದೆ. ಈಗಾಗಲೇ ನೀರು ಬಿಡಲು ಮುಖ್ಯ ಎಂಜಿನಿಯರ್‌ಗೆ ಅನುಮತಿ ಕೋರಲಾಗಿದ್ದು, ಆದೇಶ ಬಂದ ತಕ್ಷಣ ಕಾಲುವೆಗೆ ನೀರು ಹರಿಸಲಾಗುವುದು.
-ಶಶಿಕುಮಾರ್‌, ಹಾರಂಗಿ ಎಇಇ

Advertisement

Udayavani is now on Telegram. Click here to join our channel and stay updated with the latest news.

Next