Advertisement

ಮಳೆಗಾಲದಲ್ಲಿ ಬಾವಿಗೆ ನೀರು ತುಂಬಿಸಿ, ಬೇಸಗೆಯಲ್ಲಿ ಬಳಸಿ

10:33 PM Jul 13, 2019 | mahesh |

ಸುಬ್ರಹ್ಮಣ್ಯ: ಇತ್ತೀಚಿನ ವರ್ಷಗಳಲ್ಲಿ ಎಲ್ಲಿ ನೋಡಿದರೂ ನೀರಿಗೆ ಅಲೆದಾಟ. ನಗರದಲ್ಲಿ ನೀರು ಇಲ್ಲ ಎಂಬ ಹಾಹಾಕಾರವಿತ್ತು. ಅದೀಗ ಹಳ್ಳಿಗೂ ವ್ಯಾಪಿಸಿದೆ. ಆದರೇ ಇಲ್ಲೊಬ್ಬ ಕೃಷಿಕರಿಗೆ ಕಡು ಬೇಸಗೆಯಲ್ಲೂ ನೀರಿಗೆ ಯಾವುದೇ ಬರ ಬಂದಿಲ್ಲ. ಇದಕ್ಕೆ ಕಾರಣ ಮಳೆಗಾಲದಲ್ಲಿ ಛಾವಣಿಯಿಂದ ಬಿದ್ದ ನೀರನ್ನು ವ್ಯರ್ಥಮಾಡದೆ ಬಾವಿಗೆ ಇಂಗಿಸಿ ಕೊಂಡಿದ್ದು. ಇದರ ಫ‌ಲವಾಗಿ ಎಲ್ಲ ಅವಧಿಗಳಲ್ಲೂ ಇವರಿಗೆ ಯಥೇತ್ಛ ನೀರು ದೊರಕುತ್ತದೆ.

Advertisement

ಹೊತ್ತು ತರಬೇಕಿತ್ತು
ಸುಬ್ರಹ್ಮಣ್ಯ-ಜಾಲೂರು ರಾಜ್ಯ ಹೆದ್ದಾರಿಯ ಗುತ್ತಿಗಾರು ಬಳಿಯ ಮಲ್ಕಜೆ ಎಂಬಲ್ಲಿ ಕೃಷಿಕ ಬಿಟ್ಟಿ ಬಿ. ನೆಡುನೀಲಂ ಅವರು ಇಂತಹದ್ದೊಂದು ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಹಿಂದೆಲ್ಲ ಬೇಸಗೆಯಲ್ಲಿ ಇವರ ಮನೆಯ ಬಾವಿಯಲ್ಲಿ ನೀರು ಬತ್ತಿ ಹೋಗಿ ಕುಡಿಯುವ ನೀರಿಗೂ ಪರದಾಟ ನಡೆಸಬೇಕಿತ್ತು. ಕೊನೆಗೆ ಕೊಳವೆ ಬಾವಿಯಿಂದ ಅಥವಾ ಸಮೀಪದ ಕೆರೆಯಿಂದ ತಂದು ನೀರು ಫಿಲ್ಟರ್‌ ಮಾಡಿ ಕುಡಿದು ದಣಿವಾರಿಸಿಕೊಳ್ಳುವ ಸ್ಥಿತಿ ಇತ್ತು.

ಕೊಡಗಿನಲ್ಲಿ ಕಂಡ ಪ್ರಯೋಗ
ಬಿಟ್ಟಿ ಅವರ ಕೃಷಿ ಚಟುವಟಿಕೆಗೂ ತೋಟಕ್ಕೂ ನೀರಿನ ಕೊರತೆ ಉಂಟಾಗುತ್ತಿತ್ತು. ಬೇಸಗೆಯಲ್ಲಿ ನೀರಿಗಾಗಿ ಭಾರೀ ಸಂಕಷ್ಟ ಅನುಭವಿಸುತಿದ್ದರು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಐದು ವರ್ಷಗಳ ಹಿಂದೆ ಕೊಡಗು ಪ್ರದೇಶದ ಕಡೆಗೆ ತೆರಳಿದ್ದಾಗ ಅವರ ಕಣ್ಣಿಗೆ ಕುತೂಹಲದ ವಿಚಾರ ಬಿದ್ದಿದೆ. ಅಲ್ಲಿಯ ಸಭಾಭವನ ಒಂದರಲ್ಲಿ ಛಾವಣಿ ನೀರನ್ನು ಬಾವಿಗೆ ಬಿಟ್ಟಿರುವುದು ಅವರ ಗಮನಕ್ಕೆ ಬಂದಿತ್ತು.

ಕಟ್ಟಡದ ಮಾಲಕರಲ್ಲಿ ವಿಚಾರಿಸಿದಾಗ, ನೀರಿನ ಸಮಸ್ಯೆ ಪರಿಹಾರಕ್ಕೆ ಇದನ್ನು ಅಳವಡಿಸಿಕೊಂಡಿದ್ದು, ಇದರಿಂದ ಲಾಭವಿದೆ ಎಂದು ತಿಳಿಸಿದ್ದರು. ಅವರಿಂದ ಇನ್ನಷ್ಟು ಮಾಹಿತಿ ಪಡೆದು, ಕಂಡ ಸಂಗತಿಯನ್ನು ಕೈಚೆಲ್ಲದೆ ಮರಳಿ ಊರಿಗೆ ಬಂದು ತಮ್ಮ ಮನೆಯಲ್ಲಿ ಅದೇ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

ಹೀಗಿದೆ ರೀಚಾರ್ಜ್‌ ಪ್ರಕ್ರಿಯೆ…
ಮನೆಯ ಛಾವಣಿ ನೀರನ್ನು 200 ಲೀಟರ್‌ ಬ್ಯಾರೆಲ್‌ಗೆ ಹಾಯಿಸಿ, ಅಲ್ಲಿ ನೀರನ್ನು ಮರಳು, ಜಲ್ಲಿ, ಮಸಿಯ ಮೂಲಕ ಸೋಸಿ ಬಾವಿಗೆ ರೀಚಾರ್ಜ್‌ ಮಾಡಲು ಆರಂಭಿಸಿದರು. ಮಳೆಗಾಲ ಅರ್ಧ ಭಾಗ ಪೂರ್ತಿ ಬಾವಿಯ ಮೂಲಕ ನೀರು ಅಂತರ್ಜಲಕ್ಕೆ ಸೇರ್ಪಡೆಯಾಗುತ್ತದೆ.

Advertisement

ಐದು ವರ್ಷಗಳಿಂದ ನಿರಂತರ ಈ ಪ್ರಯೋಗ ಮಾಡಿದ್ದರ ಫಲವಾಗಿ ಈ ವರ್ಷ ಬಾವಿಯಲ್ಲಿ ನೀರು ಬತ್ತಿ ಹೋಗಿಲ್ಲ. ಮನೆಯ ಸಮೀಪದ ಕೆರೆಯಲ್ಲೂ ಈಗ ಒಂದು ಗಂಟೆಗಳ ಕಾಲ ತೋಟಕ್ಕೆ ನೀರುಣಿಸಲು ಸಾಧ್ಯವಾಗುತ್ತಿದೆ. ಈ ಹಿಂದೆಲ್ಲ ಅರ್ಧ ಗಂಟೆಯಲ್ಲಿ ಖಾಲಿಯಾಗುತ್ತಿದ್ದ ನೀರು ಈ ಬಾರಿ ಒಂದು ಗಂಟೆ ಬಳಕೆಗೆ ಸಿಗುತ್ತಿದೆ. ಆಸುಪಾಸಿನ ಬಾವಿಗಳಲ್ಲೂ ನೀರು ಇದೆ.

ಈ ಬೇಸಗೆಯಲ್ಲಿ ನಮ್ಮ ಮನೆ ಬಾವಿಯಲ್ಲಿ ನೀರಿದೆ ಎಂದರೆ ಅದಕ್ಕೆ ಕಾರಣ ನಾವು 5 ವರ್ಷಗಳಿಂದ ಛಾವಣಿ ನೀರು ಬಾವಿಗೆ ರೀಚಾರ್ಜ್‌ ಮಾಡಿದ್ದರ ಪ್ರತಿಫಲ ಎಂಬು ಹೆಮ್ಮೆಯಿಂದ ಹೇಳುತ್ತಾರೆ ಬಿಟ್ಟಿ ಬಿ. ನೆಡುನೀಲಂ ಅವರು.

ಸರಳ ವಿಧಾನ
ನಮಗೆ ಈ ಬಾರಿ ಬೇಸಿಗೆ ಯಲ್ಲಿ ನೀರಿಗೆ ಬರ ಬಂದಿಲ್ಲ. ಸತತ 5 ವರ್ಷಗಳಿಂದ ಮನೆಯ ಬಾವಿಗೆ ಛಾವಣಿ ನೀರನ್ನು ರೀಚಾರ್ಜ್‌ ಮಾಡಿದ್ದೇ ಇದಕ್ಕೆ ಕಾರಣ. ಮಳೆಗಾ ಲದ ನೀರನ್ನು ಮನೆಯ ಒಂದು ಬಾವಿಗೆ ರೀಚಾರ್ಜ್‌ ಮಾಡಿದರೆ ಕೃಷಿ ಹಾಗೂ ದಿನ ಬಳಕೆಗೆ ಸಾಕಷ್ಟು ನೀರು ಸಿಗುತ್ತದೆ. ಪ್ರತಿಯೊಬ್ಬರೂ ಈ ಸರಳ ವಿಧಾನ ಅಳವಡಿಸಿ ಕೊಂಡರೆ ಅಂತರ್ಜಲ ಮಟ್ಟ ಏರಿಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಬಾರಿ ನಾವು ನೀರಿಗಾಗಿ ಅಲೆದಾಡುವುದು ತಪ್ಪಿದೆ.
– ಬಿಟ್ಟಿ ಬಿ. ನೆಡುನೀಲಂ, ಕೃಷಿಕ, ಗುತ್ತಿಗಾರು

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next