ಸೊರಬ: ಶರಾವತಿ ನದಿ ನೀರನ್ನು ಲಿಂಗನಮಕ್ಕಿ ಜಲಾಶಯದಿಂದ ಸೊರಬ ತಾಲೂಕಿಗೆ ಹರಿಸಿ ಎಲ್ಲಾ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಸರ್ಕಾರ ರೂಪಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶ್ರೀಧರ್ ಆರ್.ಹುಲ್ತಿಕೊಪ್ಪ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕು ನಂಜುಂಡಪ್ಪ ವರದಿಯಂತೆ ಹಿಂದುಳಿದ ಹಣೆಪಟ್ಟಿಯಲ್ಲಿದೆ. ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಕೆರೆಗಳನ್ನು ಹೊಂದಿದ ತಾಲೂಕಿನಲ್ಲಿ 1300ಕ್ಕೂ ಹೆಚ್ಚು ಕೆರೆಗಳಿದ್ದೂ, ಇವುಗಳನ್ನು ಅಭಿವೃದ್ಧಿಪಡಿಸಿ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವಲ್ಲಿ ಇದುವರೆಗೂ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಲ್ಲ. ಆನವಟ್ಟಿ, ಜಡೆ ಹೋಬಳಿಗಳೂ ಭೀಕರ ಬರಗಾಲಕ್ಕೆ ತುತ್ತಾಗುತ್ತವೆ. ಅಲ್ಲದೆ ತಾಲೂಕಿನಲ್ಲಿ ಪ್ರತೀ ವರ್ಷ ಕುಡಿಯಲು ಹಾಗೂ ಕೃಷಿಗೆ ನೀರಿನ ಅಭಾವ ದಟ್ಟವಾಗುತ್ತಿದೆ. ಈ ಸಮಸ್ಯೆ ಸರ್ಕಾರ ಮನಗಂಡು ಲಿಂಗನಮಕ್ಕಿ ಜಲಾಶಯದಿಂದ ಸೊರಬ ತಾಲೂಕಿಗೆ ನೀರು ಹರಿಸುವ ಯೋಜನೆ ರೂಪಿಸಬೇಕು. ಇದರಿಂದ ಕೆರೆಗಳು ತುಂಬಿ ಅಂತರ್ಜಲ ಹೆಚ್ಚಳವಾಗಿ ಬೋರ್‌ವೆಲ್ಗಳು ರೀಚಾರ್ಜ್ ಆಗುತ್ತವೆ. ಅಲ್ಲದೆ ತಾಲೂಕಿನ ಅಭಿವೃದ್ಧಿಯಾಗುತ್ತದೆ. ಈ ಸಂಬಂಧ ತಾಲೂಕು ಕಾಂಗ್ರೆಸ್ ವತಿಯಿಂದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದೇವೆ ಎಂದರು.
ಶಾಸಕ ಕುಮಾರ್ ಬಂಗಾರಪ್ಪ ಲಾಭಕ್ಕಾಗಿ ಅಧಿಕಾರಿಗಳನ್ನು ಬೆದರಿಸಿಕೊಂಡು ಅವರ ಜತೆ ಗುಪ್ತ ಸಭೆ ನಡೆಸದೆ ಅನುದಾನ ತಂದು ಅಭಿವೃದ್ಧಿಪಡಿಸಲಿ. ಶಾಲಾ-ಕಾಲೇಜುಗಳ ಮೂಲ ಸಮಸ್ಯೆಗಳ ಬಗ್ಗೆ ಅರಿವಿಲ್ಲದೆ ಹಿಂಬಾಲಕರೊಂದಿಗೆ ತರಗತಿಯೊಳಗೆ ನುಗ್ಗುವುದಲ್ಲದೆ ಜವಾಬ್ದಾರಿಯುತವಾಗಿ ನಡೆದುಕೊಳ್ಳದೆ ಪಾಠ-ಪ್ರವಚನಗಳಿಗೆ ಅಡ್ಡಿ ಪಡಿಸುವ ಜತೆಗೆ ವೀಡಿಯೋ ಮಾಡಿಸುವ ಸಣ್ಣತನಕ್ಕೆ ಇಳಿಯುವುದು ಸರಿಯಲ್ಲ. ತಾಲೂಕಿನ ಜನ ಎಚ್ಚರವಾಗಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಶಿವಾನಂದಪ್ಪ ಮಾತನಾಡಿ, ತಾಲೂಕು ಕಾಲದ ಸ್ಥಿತ್ಯಂತರಕ್ಕೆ ಅನುಗುಣವಾಗಿ ಅಭಿವೃದ್ಧಿಯಾಗಬೇಕಿತ್ತು. ಇಲ್ಲಿನ ಸಮಸ್ಯೆ ಅರಿತು ಅಭಿವೃದ್ಧಿಗೆ ಶ್ರಮಿಸಬೇಕಾದ ಜನಪ್ರತಿನಿಗಳಿಗೆ ಇಚ್ಛಾಶಕ್ತಿಯ ಕೊರತೆಯಿಂದ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆ. ಈಗಿನ ಶಾಸಕ ಕುಮಾರ್ ಬಂಗಾರಪ್ಪ ಅಧಿಕಾರಿಗಳ ಮೇಲೆ, ಸಂಘ-ಸಂಸ್ಥೆಯವರ ಮೇಲೆ ಹರಿಹಾಯುವುದನ್ನು ಬಿಟ್ಟು ಅಭಿವೃದ್ಧಿಯ ಚಿಂತನೆ ಮಾಡಲಿ. ತಾಲೂಕಿಗೆ ನೀರಾವರಿ ಮಾಡಿಯೇ ತೀರುತ್ತೇನೆ ಎಂದು ಜನರಿಗೆ ಸುಳ್ಳು ಆಶ್ವಾಸನೆ ಕೊಟ್ಟು ಗೆದ್ದ ಕುಮಾರ್ ಬಂಗಾರಪ್ಪ ನೀರಾವರಿ ಬಗ್ಗೆ ಮಾತನಾಡಿಲ್ಲ. ಅಂತಹವರಿಂದ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದರು.
ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುದ್ರಗೌಡ ಸಿ.ಪಾಟೀಲ್ ಮಾತನಾಡಿ, ತಾಲೂಕಿನಲ್ಲಿ ಕಾಂಗ್ರೆಸ್ ಸಕ್ರಿಯವಾಗಿದೆ. ಪಕ್ಷದ ಚಿಹ್ನೆಯಲ್ಲಿ ಗೆಲುವು ಸಾಧಿಸಿ, ಬಿಜೆಪಿಯಲ್ಲಿ ಗುರುತಿಸಿಕೊಂಡು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ನಾಗರಾಜ್, ಹನುಮಂತಪ್ಪ ಹಾಗೂ ಮೀನಾಕ್ಷಮ್ಮ ಅವರನ್ನು ಕಾಂಗ್ರೆಸ್‌ನಿಂದ ಉಚ್ಛಾಟನೆ ಮಾಡಲಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷ ಲಕ್ಷ್ಮಿಕಾಂತ್ ಚಿಮನೂರು, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕಲ್ಲಪ್ಪ ಚಿತ್ರಟ್ಟೆಹಳ್ಳಿ, ಪಪಂ ಸದಸ್ಯ ಡಿ.ಎಸ್.ಪ್ರಸನ್ನಕುಮಾರ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜೈಶೀಲಪ್ಪ, ಸೇವಾದಳದ ಶಿವಪ್ಪ ನಡಹಳ್ಳಿ ಇದ್ದರು.