ಲಂಡನ್: ಭಾರತ ಸಂಪದ್ಭರಿತ ರಾಷ್ಟ್ರವಾಗಿದ್ದ ಕಾಲದಲ್ಲಿ ಒಳಪ್ರವೇಶಿಸಿದ್ದ ಬ್ರಿಟಷರು, ಇಲ್ಲಿನ ಸಂಪತ್ತನ್ನು ಲೂಟಿ ಹೊಡೆದಿದ್ದರು ಎನ್ನುವುದು ಹಳೆಯ ವಿಷಯ. ಆದರೀಗ ಬ್ರಿಟಿಷರು ಭಾರತದ ರಾಜಮನೆತನಗಳ ಒಡವೆ-ವಸ್ತ್ರಗಳನ್ನು ಮಾತ್ರವಲ್ಲ, ಕುದುರೆಗಳ ಮೇಲಿನ ಚಿನ್ನದ ಹೊದಿಕೆಯನ್ನು ಲೂಟಿ ಹೊಡೆದಿದ್ದರೆಂಬುದಕ್ಕೆ ಪುರಾವೆ ಸಿಕ್ಕಿದೆ. ಬ್ರಿಟಿಷ್ ರಾಜಮನೆತನ ಕೊಳ್ಳೆಹೊಡೆದ ಭಾರತದ ಒಡವೆಗಳ ಮಾಹಿತಿ ಹೊಂದಿರುವ 1912ರ ದಶಕದ ಫೈಲ್ ಪತ್ತೆಯಾಗಿದೆ.
ಬ್ರಿಟಿಷ್ ರಾಜನಾಗಿ 3ನೇ ಚಾರ್ಲ್ಸ್ ಮುಂದಿನ ತಿಂಗಳು ಪಟ್ಟಾಭಿಷಿಕ್ತನಾಗುತ್ತಿರುವ ಹಿನ್ನೆಲೆಯಲ್ಲಿ ದಿ ಗಾರ್ಡಿಯನ್ ಪತ್ರಿಕೆಯು ರಾಜಮನೆತನದ ಸಂಪತ್ತಿನ ಕುರಿತಂತೆ “ಕಾಸ್ಟ್ ಆಫ್ ದಿ ಕ್ರೌನ್’ ಎನ್ನುವ ಸರಣಿ ವರದಿಯನ್ನು ನೀಡುತ್ತಿದೆ. ಇದೇ ಸರಣಿಯ ಭಾಗವಾಗಿ ಇತ್ತೀಚೆಗಷ್ಟೇ ಸಂಸ್ಥೆ, ಬ್ರಿಟನ್ ಇಂಡಿಯಾ ಆಫೀಸ್‌ನಲ್ಲಿ ಪತ್ತೆಯಾದ 46 ಪುಟಗಳ ಫೈಲ್‌ನ ಮಾಹಿತಿಯನ್ನು ಬಹಿರಂಗಪಡಿಸಿದೆ. ರಾಣಿ 2ನೇ ಎಲಿಜಿಬತ್ ಅವರ ಅಜ್ಜಿ, ರಾಣಿ ಮೇರಿ ಅವರ ಕಾಲದಿಂದಲೂ ರಾಜಮನೆತನ ಹೊಂದಿರುವ ಭಾರತದ ಒಡವೆಗಳ ಸಂಪೂರ್ಣ ವರದಿಯನ್ನು ಈ ಫೈಲ್ ಒಳಗೊಂಡಿದೆ. ಇದರಲ್ಲಿ ಕೊಹಿನೂರ್ ವಜ್ರ, 325 ಕ್ಯಾರೆಟ್ ಸ್ಪಿನರ್ ರೂಬಿ ನೆಕ್ಲೇಸ್ (ಮಾಣಿಕ್ಯದ ಸರ), 224 ದೊಡ್ಡ ಮುತ್ತುಗಳನ್ನು ಪೋಣಿಸಿದ ಹಾರವೂ ಸೇರಿದೆ ಎಂದು ಉಲ್ಲೇಖೀಸಲಾಗಿದೆ.
ರಣಜಿತ್ ಸಿಂಗ್ ಅಶ್ವಶಾಲೆಯ ಕುದುರೆಗಳಿಗೆ ಚಿನ್ನಾಭರಣ!
ಬ್ರಿಟಿಷ್ ರಾಜಮನೆತನ ಹೊಂದಿರುವ ಭಾರತದ ಒಡೆವೆ ವಸ್ತ್ರಗಳ ಪೈಕಿ, ಪಂಜಾಬ್‌ನ ರಾಜ ರಣಜಿತ್ ಸಿಂಗ್‌ನ ಅಶ್ವಶಾಲೆಯ ಕುದುರೆಗಳ ಚಿನ್ನದ ಹೊದಿಕೆಯು ಇದೆ. ಅಶ್ವಗಳನ್ನು ಸಿಂಗರಿಸಲು ಚಿನ್ನದಿಂದ ಮಾಡಿದ ಹೊದಿಕೆ, ಆಭರಣಗಳನ್ನು ಬಳಸುತ್ತಿದ್ದರು. 1837ರಲ್ಲಿ ಪಂಜಾಬ್‌ಗ ಭೇಟಿ ನೀಡಿದ್ದ ಬ್ರಿಟಿಷ್ ಫ್ಯಾನಿ ಈಡನ್ (ಬ್ರಿಟಿಷ್ ಸೊಸೈಟಿ ಡೈರಿ ನಿರ್ವಹಿಸುತ್ತಿದ್ದಾಕೆ), ರಣಜಿತ್ ಸಿಂಗ್‌ನ ಅಶ್ವಶಾಲೆಯ ಬಗ್ಗೆ ತನ್ನ ವರದಿಯಲ್ಲಿ ಉಲ್ಲೇಖೀಸಿದ್ದಾರೆ, “ಪಂಜಾಬನ್ನು ಲೂಟಿ ಮಾಡಲು ನಮಗೆ ಅನುಮತಿಸಿದೆ ನಾನು ನೇರವಾಗಿ ಅಶ್ವಶಾಲೆಗೆ ಹೋಗುತ್ತೇನೆ’ ಎಂದಿದ್ದರಂತೆ. ಸ್ವತಃ 3ನೇ ಚಾರ್ಲ್ಸ್ ತಮ್ಮ ಸೊಂಟೆR ಸುತ್ತಿಕೊಳ್ಳುವ ಹಸಿರುಹರಳುಗಳಿರುವ ಪಟ್ಟಿಯೂ ಭಾರತದ್ದೇ ಎಂದು ಫೈಲ್‌ನಲ್ಲಿ ಹೇಳಲಾಗಿದೆ.