Advertisement

ಎಲ್ಲ ಠಾಣೆಗಳಲ್ಲಿಯೂ ಸೈಬರ್‌ ಪ್ರಕರಣ ದಾಖಲು

12:06 AM May 26, 2024 | Team Udayavani |

ಮಂಗಳೂರು: ಆನ್‌ಲೈನ್‌ ವಂಚನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಪೊಲೀಸ್‌ ಠಾಣೆಗಳ ಲ್ಲಿಯೂ ಸೈಬರ್‌ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಎಲ್ಲ ಠಾಣೆಗಳನ್ನು ಸಜ್ಜುಗೊಳಿಸಲಾಗುತ್ತಿದ್ದು, ಇನ್ನು ಸಾರ್ವಜನಿಕರು ಸೈಬರ್‌ ಸಂಬಂಧಿತ ಪ್ರಕರಣಗಳಿಗೆ ಸೈಬರ್‌ ಠಾಣೆಗೇ ಹೋಗಬೇಕಿಲ್ಲ.

Advertisement

ಎಲ್ಲ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 1 ಸೆನ್‌ (ಸೈಬರ್‌, ಎಕನಾಮಿಕ್‌ ಆ್ಯಂಡ್‌ ನಾರ್ಕೊಟಿಕ್‌) ಪೊಲೀಸ್‌ ಠಾಣೆ ಇದೆ. ಪೊಲೀಸ್‌ ಕಮಿಷನರೆಟ್‌ ಇರುವ ಕಡೆಗಳಲ್ಲಿ ನಗರ ಸೆನ್‌ ಠಾಣೆ ಕೂಡ ಇರುತ್ತದೆ. ಇದುವರೆಗೆ ಸೆನ್‌ ಪೊಲೀಸ್‌ ಠಾಣೆಗಳಲ್ಲಿ ಮಾತ್ರವೇ ಸೈಬರ್‌ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿತ್ತು. ಆದರೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದರಿಂದ ಸೆನ್‌ ಠಾಣೆಗಳ ಮೇಲೆ ಒತ್ತಡ ಉಂಟಾಗುತ್ತಿದೆ. ಅಲ್ಲದೆ ಸಾರ್ವಜನಿಕರು ತಮ್ಮ ದೂರು ದಾಖಲಿಸಲು ಸೆನ್‌ ಪೊಲೀಸ್‌ ಠಾಣೆಗೆ ತೆರಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸೈಬರ್‌ ಪೊಲೀಸ್‌ ಠಾಣೆಯ ಜತೆಗೆ ಇತರೆ ಸ್ಥಳೀಯ ಠಾಣೆಗಳಲ್ಲಿಯೂ ದೂರು ದಾಖಲಿಸಲು ಅವಕಾಶ ನೀಡಲಾಗಿದೆ.

ನಿರ್ವಹಣೆಗೆ ಸಜ್ಜು : ಎಲ್ಲ ಪೊಲೀಸ್‌ ಠಾಣೆಗಳ ಅಧಿಕಾರಿ, ಸಿಬಂದಿಗೂ ಸೈಬರ್‌ ತಜ್ಞರಿಂದ ಸೈಬರ್‌ ಠಾಣೆಯ ಅಧಿಕಾರಿಗಳಿಂದ ತರಬೇತಿ ನೀಡಲಾಗಿದೆ. ಮಂಗಳೂರು ಪೊಲೀಸ್‌ ಕಮಿಷನರೆಟ್‌ನಲ್ಲಿಯೂ ಸೈಬರ್‌ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಸೆನ್‌ ಠಾಣೆಯಲ್ಲಿ ಅಧಿಕಾರಿ, ಸಿಬಂದಿಯ ಬಲ ಹೆಚ್ಚಿಸಲಾಗಿದೆ. ಇತರ ಪೊಲೀಸ್‌ ಠಾಣೆಗಳಲ್ಲಿಯೂ ಸೈಬರ್‌ ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸಲು ಸೂಚಿಸಲಾಗಿದೆ. ಅಲ್ಲದೆ ಹೊಸದಾಗಿ ನೇರವಾಗಿ ನೇಮಕಗೊಳ್ಳುವ ಪಿಎಸ್‌ಐಗಳು ಕನಿಷ್ಠ 2 ಸೈಬರ್‌ ಪ್ರಕರಣಗಳನ್ನು ಕಡ್ಡಾಯವಾಗಿ ತನಿಖೆ ನಡೆಸುವಂತೆ ಆದೇಶಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

ದೊಡ್ಡ ಪ್ರಕರಣ ಸೆನ್‌ಗೆ: ತುಂಬಾ ಕ್ಲಿಷ್ಟಕರ ಮತ್ತು ದೊಡ್ಡಮಟ್ಟದ ಸೈಬರ್‌ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಎಲ್ಲವನ್ನು ಸ್ಥಳೀಯ ಠಾಣೆಗಳಲ್ಲಿಯೇ ದಾಖಲಿಸಿ ತನಿಖೆ ನಡೆಸಲು ಸೂಚಿಸಲಾಗಿದೆ. ಸೈಬರ್‌ ತಜ್ಞರಿಂದ ಸೂಕ್ತ ತರಬೇತಿ ಕೂಡ ನೀಡಲಾಗಿದೆ. ಸಾರ್ವಜನಿಕರು ತಮಗೆ ಸೈಬರ್‌ ವಂಚನೆಯಾದ ಕೂಡಲೇ ಸ್ಥಳೀಯ ಠಾಣೆಗೆ ದೂರು ನೀಡಬಹುದು ಎಂದು ದ.ಕ. ಎಸ್‌ಪಿ ಸಿಬಿ ರಿಷ್ಯಂತ್‌ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿಯು ಸೆನ್‌ ಠಾಣೆ ಮಾತ್ರವಲ್ಲದೆ ಇತರ ಠಾಣೆಗಳಲ್ಲಿಯೂ ಸೈಬರ್‌ ಸಂಬಂಧಿ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಲಾಗಿದೆ ಎಂದು ಉಡುಪಿ ಎಸ್‌ಪಿ ಡಾ| ಕೆ. ಅರುಣ್‌ ತಿಳಿಸಿದ್ದಾರೆ.

Advertisement

285 ಪ್ರಕರಣ: ಮಂಗಳೂರು ಕಮಿಷನರೆಟ್‌ ವ್ಯಾಪ್ತಿಯಲ್ಲಿ ಎರಡೂವರೆ ವರ್ಷಗಳಲ್ಲಿ 285 ಸೈಬರ್‌ ಅಪರಾಧ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಪಾರ್ಟ್‌ ಟೈಮ್‌ ಜಾಬ್‌ ಹೆಸರಿನಲ್ಲಿ ನಡೆದಿರುವ ವಂಚನೆಗಳು 72. ವೈವಾಹಿಕ/ಉಡುಗೊರೆ ವಂಚನೆಗೆ ಸಂಬಂಧಿಸಿ 58 ಪ್ರಕರಣಗಳು ದಾಖಲಾಗಿವೆ. ಹೂಡಿಕೆ ಮಾಡಿಸಿ ವಂಚಿಸಿರುವ ಬಗ್ಗೆ 10 ಮತ್ತು ಡೆಬಿಟ್‌/ಕ್ರೆಡಿಟ್‌ ಕಾರ್ಡ್‌/ಟಿಪಿ ವಂಚನೆ ಪ್ರಕರಣಗಳು 26 ದಾಖಲಾಗಿವೆ.

ಅಸಲಿ ಅಧಿಕಾರಿಗಳು ಬ್ಯಾಂಕ್‌
ಮಾಹಿತಿ ಕೇಳುವುದಿಲ್ಲ
ಸೈಬರ್‌ ವಂಚನೆಯ ಬಗ್ಗೆ ವೀಡಿಯೋ, ಬುಕ್‌ಲೆಟ್‌ಗಳ ಮೂಲಕ ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಸುಲಭವಾಗಿ ಹಣ ಗಳಿಸುವ ಆಮಿಷಕ್ಕೆ ಸಾರ್ವಜನಿಕರು ಒಳಗಾಗಬಾರದು. ಕಸ್ಟಮ್ಸ್‌, ಆದಾಯ ತೆರಿಗೆ, ಸಿಬಿಐ ಸೇರಿದಂತೆ ಯಾವುದೇ ಅಧಿಕಾರಿಗಳು ಪೋನ್‌ನಲ್ಲಿ ಅಥವಾ ಇ-ಮೇಲ್‌ನಲ್ಲಿ ಬ್ಯಾಂಕ್‌ ಖಾತೆಯ ಮಾಹಿತಿ ಕೇಳುವುದಿಲ್ಲ. ವಂಚನೆ ಗೊತ್ತಾದ ಕೂಡಲೇ ಪಕ್ಕದ ಠಾಣೆಗೆ ಅಥವಾ 1930 ಸಹಾಯವಾಣಿಗೆ ತಿಳಿಸಬೇಕು ಎಂದು ಆಯುಕ್ತರು ತಿಳಿಸಿದ್ದಾರೆ.

ಸೈಬರ್‌ ಪ್ರಕರಣಗಳ ಪರಿಣಾಮ ಕಾರಿ, ತ್ವರಿತ ತನಿಖೆ, ಎಲ್ಲ ಪೊಲೀಸರೂ ಸೈಬರ್‌ ಪ್ರಕರಣಗಳಲ್ಲಿ ಅನುಭವ ಪಡೆಯುವಂತಾಗಲು ಹಾಗೂ ಸಾರ್ವಜನಿಕರಿಗೆ ಶೀಘ್ರ ಸ್ಪಂದನೆ ನೀಡುವ ಉದ್ದೇಶದಿಂದ ಸೆನ್‌ ಮಾತ್ರವಲ್ಲದೆ ಇತರ ಎಲ್ಲ ಠಾಣೆಗಳಲ್ಲಿಯೂ ಸೈಬರ್‌ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತದೆ. ಇದಕ್ಕಾಗಿ
ಮಾರ್ಗಸೂಚಿ (ಎಸ್‌ಒಪಿ) ನೀಡಲಾಗಿದೆ. ವಂಚನೆ ಗೊತ್ತಾದ ಕೂಡಲೇ 1930 ಸಹಾಯವಾಣಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರೆ ಕಳೆದುಕೊಂಡ ಹಣ ವಾಪಸ್‌ ಪಡೆಯಲು ಸಾಧ್ಯವಿದೆ. ಈ ರೀತಿ ಶೇ. 20 ಹಣ ವಂಚಕರ ಖಾತೆಯಿಂದ ವಾಪಸ್‌ ಪಡೆದುಕೊಳ್ಳಲಾಗಿದೆ.
-ಅನುಪಮ್‌ ಅಗರ್‌ವಾಲ್‌, ಪೊಲೀಸ್‌ ಆಯುಕ್ತರು, ಮಂಗಳೂರು

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next