ಹೊಸದಿಲ್ಲಿ: ಮುಂದಿನ ತಿಂಗಳು ನಡೆಯಲಿರುವ ಎಫ್ಐಎಚ್ ವಿಶ್ವಕಪ್‌ಗೆ ಮಂಗಳವಾರ ಹಾಕಿ ಇಂಡಿಯಾವು 18 ಸದಸ್ಯರ ಭಾರತೀಯ ತಂಡವನ್ನು ಪ್ರಕಟಿಸಿದೆ.
ಇನ್ನೂ ಪರಿಪೂರ್ಣ ಫಿಟ್‌ನೆಸ್‌ಗೆ ಮರಳಬೇಕಿರುವ ಮಾಜಿ ನಾಯಕಿ ಮತ್ತು ಖ್ಯಾತ ಸ್ಟ್ರೈಕರ್ ರಾಣಿ ರಾಂಪಾಲ್ ಭಾರತೀಯ ತಂಡದಲ್ಲಿ ಸ್ಥಾನ ಪಡೆಯಲಿಲ್ಲ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ವನಿತಾ ತಂಡವು ಐತಿಹಾಸಿಕ ನಾಲ್ಕನೇ ಸ್ಥಾನ ಪಡೆಯುವಲ್ಲಿ ರಾಣಿ ಪ್ರಮುಖ ಪಾತ್ರ ವಹಿಸಿದ್ದರು. ಮಂಡಿ ನೋವಿನಿಂದ ಚೇತರಿಸಿಕೊಂಡ ಬಳಿಕ ಅವರು ಬೆಲ್ಜಿಯಂ ಮತ್ತು ನೆದರ್ಲೆಂಡ್‌ನಲ್ಲಿ ನಡೆದ ಎಫ್ಐಎಚ್ ಪ್ರೊ ಲೀಗ್ ಪಂದ್ಯಗಳಲ್ಲಿ ಆಡಿದ್ದರು. ಆದರೆ ಯುರೋಪ್‌ನಲ್ಲಿ ನಡೆದ ಪ್ರೊ ಲೀಗ್‌ನ ಮೊದಲ ನಾಲ್ಕು ಪಂದ್ಯಗಳಲ್ಲಿ ಅವರು ಆಡಿರಲಿಲ್ಲ, ಇದರಿಂದ ಅವರ ಫಿಟ್‌ನೆಸ್ ಬಗ್ಗೆ ಸಂಶಯ ಎದ್ದಿದ್ದವು. ಈ ಕಾರಣದಿಂದಾಗಿ ಅವರನ್ನು ಕೈಬಿಡಲಾಗಿದೆ.
ರಾಣಿ ಅವರನ್ನು ಹೊರತುಪಡಿಸಿ ತಂಡದಲ್ಲಿ ಆಶ್ಚರ್ಯ ಹುಟ್ಟಿಸುವ ಹೆಚ್ಚಿನ ಬದಲಾವಣೆ ಇಲ್ಲ. ಗೋಲ್‌ಕೀಪರ್ ಸವಿತಾ ಪೂನಿಯಾ ತಂಡವನ್ನು ಮುನ್ನಡೆಸಲಿದ್ದಾರೆ. ದೀಪ್ ಗ್ರೇಸ್ ಎಕ್ಕ ಉಪನಾಯಕಿಯಾಗಿ ಇರಲಿದ್ದಾರೆ. ಬಿಚು ದೇವಿ ಖರಿಬಮ್ ಗೋಲ್‌ಕೀಪರ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ನದರ್ಲೆಂಡ್ ಮತ್ತು ಸ್ಪೇನ್‌ನ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್ ಹಾಕಿ ಕೂಟವು ಜುಲೈ 1ರಿಂದ 17ರ ವರೆಗೆ ನಡೆಯಲಿದೆ. ಭಾರತವು “ಬಿ’ ಬಣದಲ್ಲಿದೆ. ಈ ಬಣದಲ್ಲಿ ಭಾರತವಲ್ಲದೇ ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಚೀನ ಇರಲಿದೆ. ಜುಲೈ 3ರಂದು ಇಂಗ್ಲೆಂಡ್ ವಿರುದ್ಧ ಆಡುವ ಮೂಲಕ ಭಾರತ ತನ್ನ ಅಭಿಯಾನ ಆರಂಭಿಸಲಿದೆ.