Advertisement

Bangalore: ಸಾಕು ನಾಯಿ ವಿಚಾರಕ್ಕೆ ಹೊಡೆದಾಟ; ಪೊಲೀಸರ ರಾಜಿ ಸಂಧಾನದಲ್ಲಿ ಇತ್ಯರ್ಥ

11:27 AM Feb 05, 2024 | Team Udayavani |

ಬೆಂಗಳೂರು: ಸಾಕು ನಾಯಿ ವಿಚಾರಕ್ಕೆ ಫ್ಲ್ಯಾಟ್‌ ಮಾಲೀಕರು ಹಾಗೂ ಬಾಡಿಗೆದಾರರ ನಡುವೆ ಜಗಳ ನಡೆದಿದ್ದು, ಪರಸ್ಪರ ಹಲ್ಲೆ ಆರೋಪ ಮಾಡಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದ ಪ್ರಕರಣ ಕೊನೆಗೆ ರಾಜೀ ಸಂಧಾನದಲ್ಲಿ ಸುಖಾಂತ್ಯವಾಗಿದೆ.

Advertisement

ಪಂಜಾಬ್‌ ಮೂಲದ ಪೂಜಾ ಕುಟುಂಬದೊಂದಿಗೆ ಜೀವನಭೀಮಾನಗರದ ಪ್ರಮಿಳಾ ಎಂಬವರ ಅಪಾರ್ಟ್‌ ಮೆಂಟ್‌ನ ಫ್ಲ್ಯಾಟ್‌ವೊಂದರಲ್ಲಿ ಭೋಗ್ಯಕ್ಕೆ ಪಡೆದು ವಾಸವಾಗಿದ್ದರು. ಭೋಗ್ಯದ ವೇಳೆ ಮನೆಯಲ್ಲಿ ನಾಯಿ ಸಾಕುವಂತಿಲ್ಲ ಎಂದು ಮಾಲೀಕರು ಷರತ್ತು ವಿಧಿಸಿದ್ದರು. ಆದರೂ, ಪೂಜಾ ಮನೆಯಲ್ಲಿ ನಾಯಿ ಸಾಕಿದ್ದರು. ಇದೇ ವಿಚಾರವಾಗಿ ಫೆ.2ರ ತಡರಾತ್ರಿ ಪೂಜಾ ಮತ್ತು ಪ್ರಮಿಳಾ ಮನೆಯವರ ನಡುವೆ ಪರಸ್ಪರ ಜಗಳ ನಡೆದು ಹೊಡೆದಾಡಿಕೊಂಡಿದ್ದರು. ಬಾಡಿಗೆದಾರರಾದ ಪೂಜಾ, ಮನೆಯ ಮಾಲೀಕರಾದ ಪ್ರಮೀಳಾ ಹಾಗೂ ಅವರ ಸಹಚರರ ವಿರುದ್ಧ ಜೀವನಭೀಮಾನಗರ ಪೊಲೀಸ್‌ ಠಾಣೆಯಲ್ಲಿ ಹಲ್ಲೆ, ನಿಂದನೆ ಆರೋಪದಡಿ ದೂರು ನೀಡಿದ್ದರು.

ಇದರ ಬೆನ್ನಲ್ಲೇ ಮನೆ ಮಾಲೀಕರಾದ ಪ್ರಮೀಳಾ, ಬಾಡಿಗೆದಾರರಾದ ಪೂಜಾ ಹಾಗೂ ಅವರ ಕುಟುಂಬದ ವಿರುದ್ಧವೂ ಹಲ್ಲೆ ಆರೋಪದಡಿ ದೂರು ನೀಡಿದ್ದರು. ಎರಡು ಪ್ರಕರಣದಲ್ಲೂ ಪೊಲೀಸರು ಎನ್‌ಸಿಆರ್‌ ಮಾಡಿದ್ದಾರೆ. ಅಲ್ಲದೆ, ಎರಡೂ ಕಡೆಯವರನ್ನು ಕರೆಯಿಸಿ ವಿಚಾರಣೆ ಮಾಡಿದ್ದು, ಈ ವೇಳೆ ಇಬ್ಬರು ತಮ್ಮ ತಪ್ಪಿನ ಅರಿವಾಗಿ ರಾಜಿ ಮಾಡಿಕೊಳ್ಳುವುದಾಗಿ ತಿಳಿಸಿ ದೂರು ಹಿಂಪಡೆದಿದ್ದಾರೆ. ಇನ್ನು ಮುಂದೆ ಯಾವುದೇ ಜಗಳ ಮಾಡಿಕೊಳ್ಳದೆ ಹೊಂದಾಣಿಕೆಯಿಂದ ಇರುವುದಾಗಿ ಇಬ್ಬರೂ ಲಿಖಿತವಾಗಿ ಬರೆದುಕೊಟ್ಟು ಹೋಗಿದ್ದಾರೆ ಎಂದು ಪೊಲೀಸರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next