Advertisement
ಸಬ್‌ಜೈಲಿನ ಕೈದಿಗಳ ಬ್ಯಾರಕ್‌ನಲ್ಲಿ 30-35 ಮಂದಿ ಇದ್ದರು. ರವಿವಾರ ರಾತ್ರಿ ಮುಂಬೈ ಇಂಡಿಯನ್ಸ್ ಹಾಗೂ ಪುಣೆ ತಂಡಗಳ ಮಧ್ಯೆ ಐಪಿಎಲ್ ಕ್ರಿಕೆಟ್ ಮ್ಯಾಚ್ ಇತ್ತು. ಕೈದಿಗಳೆಲ್ಲರೂ ಮ್ಯಾಚ್ ನೋಡುತ್ತಿದ್ದರು. ಟಿ.ವಿ. ರಿಮೋಟ್ ವಿಚಾರಕ್ಕೆ ಸಂಬಂಧಿಸಿ ಹಲ್ಲೆ ನಡೆಸಲಾಗಿದೆ. ಮ್ಯಾಚ್ ಮುಗಿದ ಬಳಿಕ ಟಿ.ವಿ. ಸೌಂಡ್ ಜಾಸ್ತಿ ಇಟ್ಟದ್ದಕ್ಕಾಗಿ ಹೊಡೆದಾಟ ಪ್ರಾರಂಭವಾಗಿದೆ ಎಂದು ಹೇಳಲಾಗಿದೆ. ಟೋನಿ ಹೇಳುವ ಪ್ರಕಾರ ಟಿವಿ ಚಾನಲ್‌ನಲ್ಲಿ ಮ್ಯಾಚ್ ನೋಡಿದ ಬಳಿಕ ಇತರ ಕೈದಿಗಳ ಜತೆಗೆ ತನ್ನತ್ತ ಆಗಮಿಸಿದ ಸಹಕೈದಿ ಪ್ರಶಾಂತ್, ಇದು ನಮ್ಮ ರಾಜ್ಯ ಕರ್ನಾಟಕ. ನನ್ನನ್ನು ಅಣ್ಣಾ ಎಂದು ಕರೆಯಬೇಕು. 10 ಸಾವಿರ ರೂ. ಕೊಡಬೇಕು ಎಂದಾಗ ನಾನು ಒಪ್ಪಲಿಲ್ಲ. ಆಗ ಆತ ಮತ್ತು ಹಲವರು ಸೇರಿ ಕೇರಮ್ ಬೋರ್ಡ್, ಚೆಂಬು ಮತ್ತಿತರ ಸೊತ್ತುಗಳಿಂದ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದಿದ್ದಾನೆ.
ಹಲವು ಪ್ರಕರಣಗಳ ಆರೋಪಿ ಟೋನಿ ವಿಚಿತ್ರ ವ್ಯಕ್ತಿತ್ವದ ಕೈದಿಯಾಗಿದ್ದ. ಕೇರಳ ಸಹಿತ ವಿವಿಧೆಡೆಗಳಲ್ಲಿ ಈತನ ಮೇಲೆ ಪ್ರಕರಣಗಳು ದಾಖಲಾಗಿದ್ದವು. ಶಿವಮೊಗ್ಗ, ಧಾರವಾಡ, ಬೆಳಗಾವಿ, ಮಂಗಳೂರು ಮೊದಲಾದ ಜೈಲುಗಳಲ್ಲಿ ಆತ ಇದ್ದ. 2012ರಲ್ಲಿ ಹಿರಿಯಡಕ ಸಬ್‌ಜೈಲಿನಲ್ಲಿ ವಿನೋದ್ ಶೆಟ್ಟಿಗಾರ್ ಹತ್ಯೆಯ ಆರೋಪಿ ಸಂತೋಷ್ ಪೂಜಾರಿಯ ಮೇಲೆ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಮೇ 31ಕ್ಕೆ ಉಡುಪಿ ಕೋರ್ಟ್‌ನಲ್ಲಿ ವಿಚಾರಣೆ ಇತ್ತು. ಹಾಗಾಗಿ ಕಳೆದೊಂದು ತಿಂಗಳಿನಿಂದ ಮಂಗಳೂರು ಜೈಲಿನಲ್ಲಿದ್ದ ಟೋನಿಯನ್ನು ಮೇ 19ರಂದು ಹಿರಿಯಡಕ ಅಂಜಾರಿನ ಸಬ್‌ಜೈಲಿಗೆ ಸ್ಥಳಾಂತರಿಸಲಾಗಿತ್ತು. ಅದಕ್ಕೂ ಮೊದಲು ಆತ ಬೆಳಗಾವಿ ಜೈಲಿನಲ್ಲಿದ್ದ. ವಿವಿಧ ಕಡೆಗಳ ಜೈಲುಗಳಲ್ಲಿ ಸಹಕೈದಿಗಳೊಂದಿಗೆ ಗಲಾಟೆ ನಡೆಸುವುದು ಆತನ ಖಯಾಲಿಯಾಗಿತ್ತೆಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.