Advertisement
ಹೋಬಳಿಯ ಸುತ್ತಮುತ್ತಲಿನ ಗ್ರಾಮಸ್ಥರು ಆಧಾರ್ ಸೇವಾ ಕೇಂದ್ರಕ್ಕೆ ಹೋದರೆ ವಿದ್ಯುತ್ ಇಲ್ಲ.. ಸರ್ವರ್ ಬ್ಯುಸಿ.. ಇಂಟರ್‌ನೆಟ್ ಇಲ್ಲ ಎಂಬ ಮಾತುಗಳು ಸಾಮಾನ್ಯವಾಗಿವೆ. ಹೀಗಾಗಿ ತಾಲೂಕು ಕೇಂದ್ರಕ್ಕೆ ಗ್ರಾಮೀಣ ಭಾಗದ ಜನರು ಆಗಮಿಸುವುದು ಹೆಚ್ಚಾಗಿದೆ. ಆದರೆ, ಇಲ್ಲಿನ ಮಿನಿವಿಧಾನ ಸೌಧ ಆವರಣದಲ್ಲಿರುವ ಆಧಾರ್ ಸೇವಾ ಕೇಂದ್ರದಲ್ಲಿ ಹೋಬಳಿ ಭಾಗಕ್ಕಿಂತ ಭಿನ್ನವಾಗಿ ಏನು ಇಲ್ಲ..! ತಾಲೂಕು ಕೇಂದ್ರದಲ್ಲಿರುವ ಆಧಾರ್ ಸೇವಾ ಕೇಂದ್ರದಲ್ಲಿ ಆಧಾರ್ ನೋಂದಣಿಗಾಗಿಯೇ ವಾರದ ಮೊದಲು ಟೋಕನ್ ಪಡೆದುಕೊಳ್ಳಬೇಕಿದೆ. ಪಡೆದ ನಂತರ ಸರದಿ ಸಾಲಿನಲ್ಲಿ ನಿಂತು ಸಾರ್ವಜನಿಕರು ನೋಂದಾಯಿಸಲು ಮಂದಾದರೂ ಪ್ರತಿಯೊಬ್ಬರಿಗೂ ದೊರೆಯುವುದಿಲ್ಲ. ಕೂಲಿನಾಲಿ ಬಿಟ್ಟು ಬರುವ ಕೂಲಿಕಾರ್ಮಿಕರು ಪೆಚ್ಚು ಮೋರೆ ಹಾಕಿಕೊಂಡು ಮನೆಗಳತ್ತ ಬಂದ ದಾರಿಗೆ ಸುಂಕವಿಲ್ಲದಂತೆ ತೆರಳ ಬೇಕಾದ ಸನ್ನೀವೇಶ ಸೃಷ್ಠಿಯಾಗಿದೆ. ಆಧಾರ್ ಸೇವಾ ಕೇಂದ್ರದಲ್ಲಿ ದಿನವೊಂದಕ್ಕೆ ಸರಿ ಸುಮಾರು 15ರಿಂದ 20 ಮಂದಿಗೆ ಮಾತ್ರ ಆಧಾರ್ ನೋಂದಣಿಗೆ ಅವಕಾಶ ದೊರೆಯುತ್ತಿದೆ. ಉಳಿದವರು ಮರುದಿನ ಮತ್ತೆ ಸರದಿಯ ಸಾಲಿನಲ್ಲಿ ನಿಲ್ಲಬೇಕು. ಆಧಾರ್ ಕಾರ್ಡ್ ಇಲ್ಲವಾದರೆ ಉದ್ಯೋಗಖಾತ್ರಿ ಯೋಜನೆಯಡಿ ಕೂಲಿ ಇಲ್ಲ ಎನ್ನುವ ಮಾತುಗಳು ಅಧಿಕಾರಿಗಳಿಂದ ಬರುತ್ತಿವೆ. ನಿರ್ಮಿಸಿರುವ ಮನೆಯ ಬಿಲ್ ಪಾವತಿಗೂ ಆಧಾರ್ ಕಾರ್ಡ್ ಕೇಳುತ್ತಿದ್ದಾರೆ. ಕೂಲಿ ಕೆಲಸ ಬಿಟ್ಟು ಆಧಾರ್ ಕಾರ್ಡ್ ನೋಂದಾಯಿಸಲು ಬೆಳಗ್ಗೆಯಿಂದ ಸರದಿ ಸಾಲಿನಲ್ಲಿ ನಿಂತರು ಕೂಡಾ ನೋಂದಣಿ ಸಾಧ್ಯವಾಗುತ್ತಿಲ್ಲ ಆಧಾರ್ ಸೇವಾ ಸಿಬ್ಬಂದಿಗಳೂ ಇನ್ನೊಂದು ವಾರ ಬಿಟ್ಟು ಬನ್ನಿ ಎನ್ನುತ್ತಿದ್ದಾರೆ ಎಂದು ನೋಂದಣಿಗೆ ಆಗಮಿಸುವ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಐಡಿ, ಮೊಬೈಲ್ ಸಂಖ್ಯೆ, ಭಾವಚಿತ್ರಗಳಲ್ಲಿ ಬದಲಾವಣೆ, ವಿಳಾಸ ಬದಲಾವಣೆ, ಆಧಾರ್ ಕಾರ್ಡ್‌ನಲ್ಲಾಗಿರುವ ತಪ್ಪುಗಳ ತಿದ್ದಪಡಿಗೆ ಸಾಕಷ್ಟು ನಾಗರಿಕರು ಬಂದು ಹೋಗುತ್ತಿದ್ದಾರೆ. ತಾಲೂಕಿನಲ್ಲಿ ಆಧಾರ್ ನೋಂದಣಿಗೆ ಸಮಸ್ಯೆ ಎದುರಾಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೇ ನಿರ್ಲಕ್ಷ ವಹಿಸಿದ್ದಾರೆ. ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಅರಿತು ಆಧಾರ್ ಸೇವಾ ಕೇಂದ್ರಕ್ಕೆ ಬೇಕಾಗುವ ಸೌಲಭ್ಯಗಳನ್ನು ಒದಗಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
Related Articles
ಹೋಬಳಿ ಕೇಂದ್ರದಲ್ಲಿರುವ ಆಧಾರ್ ನೋಂದಣಿಗೆ ಪ್ರತ್ಯೇಕ ಕೌಂಟರ್ ತೆರೆದಿಲ್ಲ. ಬದಲಿಗೆ ಕಂದಾಯ ಇಲಾಖೆ ನೀಡುವ ಇತರೆ ಸೇವೆಗಳ ಜತೆಗೆ ಆಧಾರ್ ಸೇವೆ ನೀಡಲಾಗುತ್ತಿದೆ. ಕಾರ್ಯಾಭಾರ ಇದ್ದಾಗ ನೋಂದಣಿಗೆ ಸ್ವಲ್ಪ ತೊಂದರೆಯಾಗುತ್ತದೆ. ಹೀಗಾಗಿ ನಾಗರಿಕರು ಜಗಳೂರು ತಾಲೂಕು ಕೇಂದ್ರಕ್ಕೆ ಬರುತ್ತಿದ್ದಾರೆ. ಜನರಿಂದ ತುಂಬಿ ಹೋಗುತ್ತಿರುವುದರಿಂದ ಟೋಕನ್ ಸಿಸ್ಟಮ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇನ್ನೊಂದು ವಾರದೊಳಗೆ ಆಧಾರ್ ನೋಂದಾವಣೆಗಾಗಿಯೇ ಮುಕ್ತ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು.
ಶ್ರೀಧರಮೂರ್ತಿ, ತಹಶೀಲ್ದಾರ್, ಜಗಳೂರು.
Advertisement
25 ರೂ. ಕೊಟ್ಟರೆ ಆಧಾರ್ಕಾರ್ಡ್ನಲ್ಲಾಗಿರುವ ತಪ್ಪುಗಳನ್ನು ಸರಿಮಾಡಿಕೊಡುತ್ತಾರೆ ಎಂದು ಹೇಳಿದ್ದರಿಂದ ಅಂಚೆ ಕಚೇರಿಗೆ ಬಂದಿದ್ದೇವೆ. ಸಿಬ್ಬಂದಿಗಳು ಇನ್ನು ಕಾರ್ಯಾರಂಭವಾಗಿಲ್ಲ ಎನ್ನುತ್ತಿದ್ದಾರೆ. ತಾಲೂಕಿನ ಆಧಾರ್ ಸೇವಾ ಕೇಂದ್ರಕ್ಕೆ ಹೋದರೆ ಕರೆಂಟ್ ಇಲ್ಲ.. ಸರ್ವರ್ ಸರಿಯಿಲ್ಲ ಎನ್ನುತ್ತಾರೆ.
ನೀಲಮ್ಮ, ದೊಡ್ಡಬೊಮ್ಮನಹಳ್ಳಿ ರೈತ ಮಹಿಳೆ.