Advertisement

ಪಂಚ ತಂತ್ರದ ಕದನ ಕುತೂಹಲ

07:20 AM Dec 18, 2017 | Team Udayavani |

2014ರ ಲೋಕಸಭೆಯ ಚುನಾವಣೆಯ ನಂತರ ನಡೆದ ಅತ್ಯಂತ ಚರ್ಚಿತ ಹಾಗೂ ಕುತೂಹಲದ ಚುನಾವಣೆಗಳಲ್ಲಿ ಗುಜರಾತ್‌ ಚುನಾವಣೆಯೂ ಒಂದು. ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದ ನಂತರದಿಂದ ಹಲವು ಮಹತ್ವದ ವಿವಾದಗಳು, ಘಟನೆಗಳು ಹಾಗೂ ಆಸಕ್ತಿಕರ ಸಂಗತಿಗಳು ನಡೆದಿವೆ. ವಾಗ್ವಾದ, ವಾಗ್ಯುದ್ಧಗಳೂ ನಡೆದಿವೆ. ಹೊಸ ನಾಯಕರು ಹೊರಹೊಮ್ಮಿದ್ದಾರೆ. ಈ ಒಟ್ಟೂ ಅವಧಿಯಲ್ಲಿ ನಡೆದ ಘಟನೆಗಳ ಪ್ರಮುಖ ಐದು ಅಂಶಗಳ ಹಿನ್ನೋಟ ಇಲ್ಲಿದೆ….

Advertisement

ವಿವಾದಗಳು
ಚುನಾವಣೆ ಘೋಷಣೆ: ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳನ್ನು ಏಕಕಾಲಕ್ಕೆ ಘೋಷಣೆ ಮಾಡದೇ, ಹಿಮಾಚಲದಲ್ಲಿ ನವೆಂಬರ್‌ನಲ್ಲಿ, ಗುಜರಾತ್‌ ಚುನಾವಣೆಯನ್ನು ಡಿಸೆಂಬರ್‌ನಲ್ಲಿ ಘೋಷಿಸಿದ್ದು ವಿವಾದಕ್ಕೀಡಾಗಿತ್ತು. ಇದರಿಂದಾಗಿ ಗುಜರಾತ್‌ ಮತದಾರರನ್ನು ಸೆಳೆಯಲು ಸರ್ಕಾರಕ್ಕೆ ಅನುವು ಮಾಡಿಕೊಟ್ಟಂತಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಈ ನಿರ್ಧಾರವನ್ನು ಇಬ್ಬರು ನಿವೃತ್ತ ಚುನಾವಣಾಧಿಕಾರಿಗಳೂ ಆಕ್ಷೇಪಿಸಿದ್ದರು.

ರಾಹುಲ್‌ ಗಾಂಧಿ ಜಾತಿ ಯಾವುದು?: ನ.29ರಂದು ರಾಹುಲ್‌ ಗಾಂಧಿ ಸೋಮನಾಥ ದೇಗುಲಕ್ಕೆ ಭೇಟಿ ನೀಡಿದಾಗ ಹಿಂದುಯೇತರ ಪುಸ್ತಕದಲ್ಲಿ ಅವರು ಸಹಿ ಮಾಡಿದರು ಎಂಬುದರಿಂದ ಜಾತಿ ವಿವಾದ ಶುರುವಾಗಿತ್ತು. ದೇಗುಲಗಳಿಗೆ ಭೇಟಿ ನೀಡಿ ಹಿಂದೂ ಮತ ಸೆಳೆಯಲು ಯತ್ನಿಸುತ್ತಿದ್ದ ರಾಹುಲ್‌ಗೆ ಬಿಜೆಪಿ ಈ ವಿವಾದದಿಂದ ತಿರುಗೇಟು ನೀಡಿತು.

ಪಾಕ್‌ ಪ್ರವೇಶ: ಪಾಕ್‌ ಮಾಜಿ ಸಚಿವ ಖುರ್ಷಿದ್‌ ಕಸೂರಿ ಜತೆಗೆ ಔತಣ ಕೂಟದಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಭಾಗವಹಿಸಿದ್ದು ವಿವಾದಕ್ಕೀಡಾಗಿತ್ತು. ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಪಾಕಿಸ್ತಾನದ ಜತೆ ಸೇರಿ ಸಿಂಗ್‌ ಸಂಚು ಹೂಡಿದ್ದಾರೆ ಎಂದು ಮೋದಿ ಟೀಕಿಸಿದರೆ, ಈ ಮಾತಿನಿಂದ ನನಗೆ ತೀವ್ರ ನೋವಾಗಿದೆ ಎಂದು ಸಿಂಗ್‌ ಹೇಳಿದರು.

ನೀಚ ಮೋದಿ: ಮೋದಿ ನೀಚ ವ್ಯಕ್ತಿ ಎಂಬ ಕಾಂಗ್ರೆಸ್‌ ಮುಖಂಡ ಮಣಿಶಂಕರ್‌ ಅಯ್ಯರ್‌ರ ಹೇಳಿಕೆ ಭಾರಿ ಟೀಕೆಗೆ ತುತ್ತಾಯಿತು. 2014ರ ಲೋಕಸಭೆ ಚುನಾವಣೆಯಲ್ಲಿ ಚಾಯ್‌ವಾಲಾ ಎಂದು ಟೀಕಿಸಿದ್ದ ಅಯ್ಯರ್‌ರ ಈ ಹೇಳಿಕೆಗೆ, ಕ್ಷಮೆ ಕೇಳುವಂತೆ ರಾಹುಲ್‌ ಗಾಂಧಿ ಸೂಚಿಸಿದರು. ಅಷ್ಟೇ ಅಲ್ಲ, ಅವರನ್ನು ಪಕ್ಷದಿಂದಲೇ ಅಮಾನತು ಮಾಡಲಾಯಿತು.

Advertisement

ಕೈಬೀಸಿದ ಮೋದಿ: 2ನೇ ಹಂತದ ಮತದಾನದಲ್ಲಿ ಹಕ್ಕು ಚಲಾಯಿಸಿದ ಮೋದಿ ಸ್ವಲ್ಪ ದೂರದವರೆಗೆ ನಡೆದುಕೊಂಡು ಹೋಗಿ, ಜನರೆಡೆಗೆ ಕೈಬೀಸಿದ್ದೂ ವಿವಾದಕ್ಕೀಡಾಯಿತು. ಈ ಬಗ್ಗೆ ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ದೂರು ನೀಡಿತು.

ಹೇಳಿಕೆಗಳು:
ನಾನು ಚಹಾ ಮಾರಿದ್ದು ನಿಜ. ಆದರೆ ದೇಶವನ್ನು ಮಾರುವುದಿಲ್ಲ.
– ನರೇಂದ್ರ ಮೋದಿ, ಪ್ರಧಾನಿ

ಗುಜರಾತ್‌ ಸರ್ಕಾರವನ್ನು ಅಮಿತ್‌ ಷಾ ರಿಮೋಟ್‌ ಕಂಟ್ರೋಲ್‌ನಿಂದ ನಿಯಂತ್ರಿಸುತ್ತಾರೆ. ಅಲ್ಲಿ ಕೂತು ಬಟನ್‌ ಒತ್ತುತ್ತಿದ್ದಂತೆಯೇ ಸಿಎಂ ವಿಜಯ್‌ ರುಪಾನಿ ಪ್ರತ್ಯಕ್ಷವಾಗುತ್ತಾರೆ.
-ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ಈ ಬಾರಿಯೂ ನಾವು ಬಿಜೆಪಿಯನ್ನೇ ಗೆಲ್ಲಿಸಿದರೆ ಇತರ ರಾಜ್ಯದ ಜನರು ನಮ್ಮನ್ನು ಮೂರ್ಖ ಗುಜರಾತಿಗಳು ಎಂದು ಕರೆಯುತ್ತಾರೆ.
-ಹಾರ್ದಿಕ್‌ ಪಟೇಲ್‌, ಪಾಟಿದಾರ ಮುಖಂಡ

ಜೈಶ್ರೀರಾಂ ಎಂದು ಐದು ಬಾರಿ ಹೇಳುವುದಕ್ಕೂ ಮೊದಲು ನಾನು ಆರು ಬಾರಿ ಅಲ್ಲಾಹು ಅಕºರ್‌ ಹೇಳುತ್ತೇನೆ.
– ಜಿಗ್ನೇಶ್‌ ಮೆವಾನಿ, ದಲಿತ ಮುಖಂಡ

ಮೋದಿ ಮೊದಲು ನನ್ನಂತೆಯೇ ಕಪ್ಪಗಿದ್ದರು. ಬೆಳ್ಳಗಾಗಲು ಅವರು ನಿತ್ಯವೂ ತೈವಾನ್‌ನಿಂದ ತರಿಸಿದ 4 ಲಕ್ಷ ರೂ. ಮೌಲ್ಯದ ನಾಲ್ಕು ಅಣಬೆಗಳನ್ನು ತಿನ್ನುತ್ತಾರೆ. ಇಂತಹ ವ್ಯಕ್ತಿ ಬಡವರ ಬಗ್ಗೆ ಯೋಚಿಸಲಾರರು.
– ಅಲ್ಪೇಶ್‌ ಠಾಕೂರ್‌, ಒಬಿಸಿ ಮುಖಂಡ

ತಿರುವುಗಳು :
ಕೈ ಜೋಡಿಸಿದ ಹಾರ್ದಿಕ್‌ 
ಪಾಟೀದಾರರ ಮುಖಂಡ ಹಾರ್ದಿಕ್‌ ಪಟೇಲ್‌ ಚುನಾವಣೆಗೂ 2 ವರ್ಷಗಳ ಹಿಂದಿನಿಂದಲೇ ಪಾಟಿದಾರರ ಹೋರಾಟದ ಮೂಲಕ ತಯಾರಾಗಿದ್ದರೂ, ಚುನಾವಣೆ ಸಮೀಪಿಸಿದಾಗ ಕಾಂಗ್ರೆಸ್‌ ಜತೆ ಕೈಜೋಡಿಸಿದ್ದು ಮಹತ್ವದ ತಿರುವಿಗೆ ಕಾರಣವಾಯಿತು. ಪಾಟಿದಾರರಲ್ಲಿ ಹಾರ್ದಿಕ್‌ರ ಈ ನಿರ್ಧಾರ ಗೊಂದಲಕ್ಕೆ ಕಾರಣವಾಯಿತು.

ಧಾರ್ಮಿಕ ದೃಷ್ಟಿಕೋನ
ಹಿಂದೆಂದಿಗಿಂತಲೂ ಈ ಬಾರಿ ಗುಜರಾತ್‌ನಲ್ಲಿ ಜಾತಿ, ಧರ್ಮಗಳ ಓಲೈಕೆ ಅತಿಯಾಗಿ ನಡೆದಿದೆ. ಮುಸ್ಲಿಮರನ್ನೇ ತುಷ್ಟೀಕರಿಸುತ್ತಿದ್ದ ಕಾಂಗ್ರೆಸ್‌ ಇದೇ ಮೊದಲ ಬಾರಿಗೆ ನಾವು ಹಿಂದೂಗಳ ವಿರೋಧಿಯಲ್ಲ ಎಂದು ಸಾಬೀತುಪಡಿಸಲು ಹೊರಟಿತು. ರಾಹುಲ್‌ ಪ್ರತಿ ರ್ಯಾಲಿಗೂ ಮುನ್ನ ಹಾಗೂ ನಂತರ ಗುಜರಾತ್‌ ದೇಗುಲಗಳಿಗೆ ಭೇಟಿ ನೀಡಿದರು.

ಅಭಿವೃದ್ಧಿ ಪ್ರಸ್ತಾಪವೇ ಇಲ್ಲ
ಹಿಂದೆಂದಿಗಿಂತಲೂ ಈ ಬಾರಿ ಅಭಿವೃದ್ಧಿಯ ಹೊರತಾಗಿ ಇತರ ವಿಷಯಗಳ ಮೇಲೆಯೇ ಪ್ರಚಾರ ನಡೆಯಿತು. ಬಿಜೆಪಿಯನ್ನು ತೆಗಳುವುದನ್ನೇ ಕಾಂಗ್ರೆಸ್‌ ಅಸ್ತ್ರವನ್ನಾಗಿಸಿಕೊಂಡಿದ್ದರೆ, ಬಿಜೆಪಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ತನ್ನ ಪ್ರಣಾಳಿಕೆ ಬದಲಿಸಿತು. ನರ್ಮದಾ ನದಿ ಗುಂಟ ಸರ್ದಾರ್‌ ಸರೋವರಕ್ಕೆ ಕಟ್ಟಲಾದ ಆಣೆಕಟ್ಟೆ ಬಗ್ಗೆ ಪ್ರಸ್ತಾಪಿಸಿದರೆ, ಕಚ್‌ ಪ್ರಾಂತ್ಯದಲ್ಲಿ ಪಾಕಿಸ್ತಾನದ ವಿಷಯವನ್ನು ಎಳೆತರಲಾಯಿತು.

ಇವಿಎಂಗೆ ಬ್ಲೂಟೂತ್‌ ಸಂಪ ರ್ಕ?
ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಹಿಂದಿನಿಂದಲೂ ಆರೋಪ ಮಾಡುತ್ತಿದ್ದ ಕಾಂಗ್ರೆಸ್‌ ಈ ಬಾರಿ ಚುನಾವಣೆ ಸಮೀಪಿಸುತ್ತಿದ್ದಂತೆ ಆರೋಪವನ್ನು ಇನ್ನಷ್ಟು ಹೆಚ್ಚಿಸಿತು. ಇವಿಎಂಗಳಿಗೆ ಬ್ಲೂಟೂತ್‌ ಸಂಪರ್ಕಿಸಲಾಗುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದರೆ, ಚುನಾವಣಾ ಆಯೋಗ ಇದನ್ನು ತಿರಸ್ಕರಿಸಿತು. ಇದರಿಂದ ಜನರ ಮನಸಿನ ಮೂಲೆಯಲ್ಲಿ ಇವಿಎಂ ಬಗ್ಗೆ ಸಂದೇಹ ಮೂಡಲು ಕಾರಣವಾಯಿತು.

ಪಾಟಿದಾರ ಹೋರಾಟ
ಚುನಾವಣೆಗೂ ಸಾಕಷ್ಟು ಮುನ್ನವೇ ಶುರುವಾಗಿದ್ದ ಪಾಟೀದಾರರ ಮೀಸಲಾತಿ ಹೋರಾಟ ಈ ಬಾರಿ ಗುಜರಾತ್‌ ಚುನಾವಣೆಯ ಅತ್ಯಂತ ಪ್ರಮುಖ ತಿರುವು. ತನ್ನ ಭದ್ರಕೋಟೆ ಎಂದುಕೊಂಡಿದ್ದ ಬಿಜೆಪಿಯನ್ನೇ ಇದು ಬೆಚ್ಚಿಬೀಳಿಸುವಂತೆ ಮಾಡಿದ್ದು ಸುಳ್ಳಲ್ಲ.

ಹೀಗೂ ನಡೆಯಿತು: 
ಪಪ್ಪು ಅನ್ಬೇಡಿ!: ರಾಹುಲ್‌ ಗಾಂಧಿಯನ್ನು ಟಾರ್ಗೆಟ್‌ 
ಮಾಡಿ ಬಿಜೆಪಿ ಪ್ರಕಟಿಸಿದ್ದ ಜಾಹೀರಾತಿನಲ್ಲಿ ಪಪ್ಪು ಎಂದು ಉಲ್ಲೇಖೀಸಿದ್ದಕ್ಕೆ ಚುನಾವಣಾ ಆಯೋಗ ಆಕ್ಷೇಪಿಸಿತ್ತು. ಆಗ ರಾಹುಲ್‌ ಗಾಂಧಿ ಪಪ್ಪು ಹೌದೇ ಅಲ್ಲವೇ ಎಂಬ ಬಗ್ಗೆಯೇ ಭಯಂಕರ ಚರ್ಚೆ ನಡೆದಿತ್ತು!

ರಾಹುಲ್‌ ಜನಿವಾರ ಕಂಡಿತು: ರಾಹುಲ್‌ ಯಾವ ಜಾತಿಯವರು ಅಥವಾ ಧರ್ಮದವರು ಎಂಬುದು ಗುಜರಾತ್‌ ಚುನಾವಣೆಯವರೆಗೂ ಜನರಿಗೆ ತಿಳಿದಿರಲಿಲ್ಲ. ಆದರೆ ಸೋಮನಾಥ ದೇಗುಲದಲ್ಲಿ ಹಿಂದೂಯೇತರ ರಿಜಿಸ್ಟರಿನಲ್ಲಿ ಹೆಸರು ನಮೂದಿಸಿದ ವಿವಾದ ತಣ್ಣಗಾಗಿಸುವಾಗ ರಾಹುಲ್‌ರನ್ನು ಜನಿವಾರ ಧರಿಸಿದ ಬ್ರಾಹ್ಮಣ ಎಂಬುದಾಗಿ ಕಾಂಗ್ರೆಸ್‌ ವಕ್ತಾರರು ಹೇಳಿದ್ದರು.

ಸೀಪ್ಲೇನ್‌ ಸ್ಟಂಟ್‌: ಪ್ರಧಾನಿ ನರೇಂದ್ರ ಮೋದಿ ಒಂದಲ್ಲ ಒಂದು ಗಿಮಿಕ್‌ ಮಾಡುವುದರಲ್ಲಿ ಶುದ್ಧ ಹಸ್ತರು. ಈ ಬಾರಿ ಚುನಾವಣೆಯ ಕೊನೆಯ ದಿನ ಸೀಪ್ಲೇನ್‌ ಏರಿ ಮತದಾರರ ಗಮನ ಸೆಳೆಯುವ ಪ್ರಯತ್ನ ಮಾಡಿದರು.

ಚುನಾವಣೆಯಲ್ಲಿ ಬ್ಲೂವೇಲ್‌: ಗುಜರಾತ್‌ ಚುನಾವಣೆಯಲ್ಲಿ ಮಾರಕ ಬ್ಲೂವೇಲ್‌ ಆಟದ ಪ್ರಸ್ತಾಪವೂ ಬಂತು. ಒಂದು ರ್ಯಾಲಿಯಲ್ಲಿ ಬ್ಲೂವೇಲ್‌ ಬಗ್ಗೆ ಮಾತನಾಡಿದ ಮೋದಿ, ಈ ಚುನಾವಣೆ ಎಂಬ ಬ್ಲೂವೇಲ್‌ ಆಟದಲ್ಲಿ ಡಿ.18ಕ್ಕೆ ಕಾಂಗ್ರೆಸ್‌ನ ಕೊನೆಯ ಟಾಸ್ಕ್. ಅಂದು ಕಾಂಗ್ರೆಸ್‌ ಆತ್ಮಹತ್ಯೆ ಮಾಡಿಕೊಳ್ಳಲಿದೆ ಎಂದೂ ಚಟಾಕಿ ಹಾರಿಸಿದರು.

ಅಬ್ಬರಿಸಿದ ಗಬ್ಬರ್‌ ಸಿಂಗ್‌: ಹಿಂದಿ ಸಿನಿಮಾದ ವಿಲನ್‌ ಗಬ್ಬರ್‌ ಸಿಂಗ್‌ ಈ ಬಾರಿ ರಾಹುಲ್‌ ಗಾಂಧಿ ರೂಪದಲ್ಲಿ ಅವತರಿಸಿದ್ದ. ಜಿಎಸ್‌ಟಿಗೆ ಗಬ್ಬರ್‌ ಸಿಂಗ್‌ ಟ್ಯಾಕ್ಸ್‌ ಎಂದು ಹೆಸರಿಟ್ಟುಕೊಂಡ ರಾಹುಲ್‌, ಬಿಜೆಪಿಯನ್ನು ಇನ್ನಿಲ್ಲದಂತೆ ಹೋದಲ್ಲೆಲ್ಲ ಟೀಕಿಸಿದರು.

ಐವರು ನಾಯಕರು:
ಮೋದಿ
ಗುಜರಾತ್‌ ಸಿಎಂ ಸ್ಥಾನ ತ್ಯಜಿಸಿ ಪ್ರಧಾನಿಯಾದ ನಂತರ ತವರು ನೆಲದಲ್ಲಿನ ಮೊದಲ ಚುನಾವಣೆ ನರೇಂದ್ರ ಮೋದಿಗೆ. ಹೀಗಾಗಿ ಸಹಜವಾಗಿಯೇ ಇಡೀ ಚುನಾವಣೆಯ ಕೇಂದ್ರ ಬಿಂದು ಇವರು. ವ್ಯಾಪಕ ಚುನಾವಣಾ ರ್ಯಾಲಿಗಳನ್ನು ನಡೆಸಿ, ಪ್ರತಿಪಕ್ಷಗಳ ನಿದ್ದೆಗೆಡಿಸಿದರು.

ರಾಹುಲ್‌ 
ಕಾಂಗ್ರೆಸ್‌ ಈ ಬಾರಿ ಶತಾಯಗತಾಯ ಉತ್ತಮ ಸಾಧನೆ ಮಾಡಲೇಬೇಕೆಂದು ಹಠತೊಟ್ಟವರಂತೆ ರಾಜ್ಯದ ಉದ್ದಗಲಕ್ಕೂ ಸುತ್ತಾಡಿ ಪ್ರಚಾರ ರ್ಯಾಲಿ ನಡೆಸಿದವರು ರಾಹುಲ್‌ ಗಾಂಧಿ. ದೇಗುಲಗಳಿಗೆ ಭೇಟಿ ನೀಡುತ್ತಲೇ ಹಿಂದೂಗಳಲ್ಲಿ ವಿಶ್ವಾಸ ಮೂಡಿಸುವುದು, ಬಿಜೆಪಿಯ ಮೇಲೆ ಬೇಸರಿಸಿಕೊಂಡಿರುವ ಸಮುದಾಯಗಳನ್ನು ಓಲೈಸುವ ಪ್ರಯತ್ನವನ್ನೂ ಮಾಡಿದರು.

ಹಾರ್ದಿಕ್‌ ಪಟೇಲ್‌
ಚುನಾವಣೆ ಘೋಷಣೆಗೂ ಮೊದಲೇ ರಾಜಕೀಯವಾಗಿ ಮಹತ್ವ ಪಡೆದುಕೊಂಡ ನಾಯಕ ಹಾರ್ದಿಕ್‌. ಪಾಟೀದಾರರಿಗಾಗಿ ಮೀಸಲಾತಿ ಹೋರಾಟ ನಡೆಸಿದ ಇವರು ಚುನಾವಣೆಯ ದಿಕ್ಕನ್ನೇ ಬದಲಿಸುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಲೈಂಗಿಕ ಸಿಡಿ ವಿವಾದ ಹಾಗೂ ಕಾಂಗ್ರೆಸ್‌ ಜತೆ ಒಳ ಒಪ್ಪಂದದಿಂದಾಗಿ ಒಟ್ಟಾರೆ ಹಿನ್ನಡೆ ಅನುಭವಿಸಿದಂತಿದೆ.

ಜಿಗ್ನೇಶ್‌ ಮೆವಾನಿ
ದಲಿತ ಮುಖಂಡ ಎಂದೇ ಗುರುತಿಸಿಕೊಂಡ ಜಿಗ್ನೇಶ್‌ ಮೆವಾನಿ, ಉನಾದಲ್ಲಿ ದಲಿತ ಯುವಕನ ಮೇಲೆ ಹಲ್ಲೆಯಾದಾಗ ನಡೆಸಿದ ಪ್ರತಿಭಟನೆಯಿಂದ ಮುಂಚೂಣಿಗೆ ಬಂದರು. ಕಾಂಗ್ರೆಸ್‌ ಬೆಂಬಲದ ಮೂಲಕ ಇವರು ವಡಗಾಂವ್‌ನಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.

ಅಲ್ಪೇಶ್‌ ಠಾಕೂರ್‌
ಒಬಿಸಿ ಸಮುದಾಯದಲ್ಲಿ ಮದ್ಯವ್ಯಸನವನ್ನು ನಿರ್ಮೂಲನೆಗೊಳಿಸುವ ಹೋರಾಟದಿಂದ 
ವೃತ್ತಿ ಆರಂಭಿಸಿದ ಅಲ್ಪೇಶ್‌, ಪಾಟೀದಾರರ ಮೀಸಲಾತಿ ಹೋರಾಟದಲ್ಲೂ ಕಾಣಿಸಿಕೊಂಡವರು. ಈ ಬಾರಿ ಅಲ್ಪೇಶ್‌ ರಾಧನ್‌ಪುರದಲ್ಲಿ ಸ್ಪರ್ಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next