Advertisement

Fighter Movie Review; ಮಾಫಿಯಾ ವಿರುದ್ಧ ಭರ್ಜರಿ ಫೈಟ್

11:01 AM Oct 07, 2023 | Team Udayavani |

ಒಂದು ಕಡೆ ರೈತರ ಸಮಸ್ಯೆ, ಮತ್ತೂಂದು ಕಡೆ ಮೆಡಿಕಲ್‌ ಮಾಫಿಯಾ, ಇನ್ನೊಂದು ಕಡೆ ಫ್ಯಾಮಿಲಿ ಸೆಂಟಿಮೆಂಟ್‌…. ಈ ಮೂರು ವಿಷಯಗಳನ್ನಿಟ್ಟು ಕೊಂಡು ತೆರೆಗೆ ಬಂದಿರುವ ಚಿತ್ರ “ಫೈಟರ್‌’. ಇಡೀ ಸಿನಿಮಾದ ಮೂಲಕಥೆ ನಿಂತಿರೋದು ರೈತರ ಸಮಸ್ಯೆ ಸುತ್ತ. ಅದರಲ್ಲೂ ಇವತ್ತು ರಾಸಾಯನಿಕ ಗೊಬ್ಬರ ಬಳಕೆಯಿಂದ ಕೃಷಿ ಭೂಮಿ ಹೇಗೆ ಹಾಳಾಗುತ್ತಿದೆ, ಇದರ ಹಿಂದಿರುವ ಮಾಫಿಯಾ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು “ಫೈಟರ್‌’ನಲ್ಲಿ ಹೇಳಲಾಗಿದೆ. ಈ ಅಂಶವನ್ನು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಆಗಿ ಹೇಳುವ ಮೂಲಕ ಮಾಸ್‌ ಪ್ರಿಯರನ್ನು ಸೆಳೆಯುವ ಪ್ರಯತ್ನ ಮಾಡಿದೆ ಚಿತ್ರತಂಡ.

Advertisement

ಸಾವಯವ ಕೃಷಿ ಮೂಲಕ ಭೂಮಿಯ ಫ‌ಲವತ್ತತೆ ಕಾಪಾಡಬೇಕೆಂದು ಕನಸು ಕಂಡು ಅದನ್ನು ತನ್ನ ಸುತ್ತಮುತ್ತಲ ರೈತರಿಗೆ ಹೇಳಿ ಜಾಗೃತಿ ಮೂಡಿಸುವ ರೈತ ಮುಖಂಡ ಒಂದು ಕಡೆಯಾದರೆ, ರಾಸಾಯನಿಕ ಗೊಬ್ಬರದ ಮೂಲಕ ಭೂಮಿಯ ಫ‌ಲವತ್ತತೆಯನ್ನು ಕುಂಠಿತಗೊಳಿಸಲು ಪ್ರಯತ್ನಿಸುತ್ತಿರುವ “ಮಾಫಿಯಾ’ ಮತ್ತೂಂದೆಡೆ… ಈ ಮಧ್ಯೆ ನಡೆಯುವ ಒಂದು ಘಟನೆ, ಅಲ್ಲಿಂದ ಚಿತ್ರಕ್ಕೊಂದು ತಿರುವು… ಇದು “ಫೈಟರ್‌’ ಚಿತ್ರದ ಒನ್‌ಲೈನ್‌.

ನಿರ್ದೇಶಕ ನೂತನ್‌ ಉಮೇಶ್‌ ಚಿತ್ರಕಥೆಯಲ್ಲಿ ವೇಗ ಕಾಯ್ದುಕೊಳ್ಳುವ ಮೂಲಕ “ಫೈಟರ್‌’ ಓಟಕ್ಕೆ ಕಾರಣವಾಗಿದ್ದಾರೆ. ಮುಖ್ಯವಾಗಿ ಈ ಚಿತ್ರದ ಹೈಲೈಟ್‌ಗಳಲ್ಲಿ ಡೈಲಾಗ್ಸ್‌ ಕೂಡಾ ಒಂದು. ಪಡ್ಡೆ ಹುಡುಗರು ಶಿಳ್ಳೆ ಹಾಕುವಂತೆ ಡೈಲಾಗ್ಸ್‌ಗಳನ್ನು ನಾಯಕಿ ಬಾಯಿಂದ ಹೇಳಿಸಿದರೆ, ಇನ್ನೊಂದಿಷ್ಟು ಪಂಚಿಂಗ್‌ ಡೈಲಾಗ್ಸ್‌ ನಾಯಕನ ಪಾಲಾಗಿದೆ. ಒಂದು ಕಮರ್ಷಿಯಲ್‌ ಸಿನಿಮಾದಲ್ಲಿ ಇರಬೇಕಾದ ಎಲ್ಲಾ ಅಂಶಗಳು ಈ ಸಿನಿಮಾದಲ್ಲಿ ಇರುವ ಜೊತೆಗೆ ರೈತರ ಕುರಿತಾಗಿ ಒಂದಷ್ಟು ವಿಚಾರವನ್ನು ಹೇಳಿರುವುದು ಪ್ಲಸ್‌. ಸಿನಿಮಾದಲ್ಲಿ ಬರುವ ಒಂದಷ್ಟು ಸಸ್ಪೆನ್ಸ್‌ ಅಂಶವನ್ನು ಕೊನೆಯವರೆಗೆ ಕಾಯ್ದುಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಅಚ್ಚರಿಗೆ ಕಾರಣವಾಗಿದೆ.

ನಾಯಕ ವಿನೋದ್‌ ಪ್ರಭಾಕರ್‌ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಹಿಸಿದ್ದಾರೆ. ಅದರಲ್ಲೂ ಆ್ಯಕ್ಷನ್‌ನಲ್ಲಿ ಹೆಚ್ಚು ಗಮನ ಸೆಳೆಯುತ್ತಾರೆ. ಇನ್ನು ನಾಯಕಿ ಲೇಖಾಚಂದ್ರ ಲವಲವಿಕೆಯಿಂದ ನಟಿಸುವ ಮೂಲಕ ಭರವಸೆ ಮೂಡಿಸಿದ್ದಾರೆ. ನಾಯಕಿ ಪಾವನಾ ಇದ್ದಷ್ಟು ಹೊತ್ತು ಚೆಂದ. ಉಳಿದಂತೆ ನಿರೋಷಾ, ಕುರಿ ಪ್ರತಾಪ್‌, ಶರತ್‌ ಲೋಹಿತಾಶ್ವ ನಟಿಸಿದ್ದಾರೆ. ಚಿತ್ರದ ಒಂದು ಹಾಡು ಗುನುಗುವಂತಿದೆ.

ರವಿಪ್ರಕಾಶ್‌ ರೈ

Advertisement
Advertisement

Udayavani is now on Telegram. Click here to join our channel and stay updated with the latest news.

Next