Advertisement

ಜಾನರ್‌ ಗೊತ್ತಿಲ್ಲ

06:00 AM Aug 31, 2018 | Team Udayavani |

“ತನ್ನ ಸಿನಿಮಾ ಬಗ್ಗೆ ನಿರ್ದೇಶಕ ಸಾವಿರ ಹೇಳಬಹುದು. ಆದರೆ, ಚಿತ್ರಮಂದಿರದಿಂದ ಹೊರಬಂದ ಪ್ರೇಕ್ಷಕ ಹೇಳುವ ಮಾತೇ ಅಂತಿಮ. ನಾನು ಇಷ್ಟು ದಿನ ನನ್ನ ಚಿತ್ರ ನೋಡಿ ಹೊರಬಂದವರು ಆ ಕ್ಷಣಕ್ಕೆ  ಮುಗ್ಧರಾಗುತ್ತಾರೆ ಅನ್ನುತ್ತಿದ್ದೆ. ನಾನು ಹೇಳಿದ ಮಾತನ್ನೇ ಚಿತ್ರ ನೋಡಿದವರೂ ಹೇಳುತ್ತಿದ್ದಾರೆ. ಅದೇ ಕಥೆಗೆ ಸಿಕ್ಕ ಗೆಲುವು. ನಾವು ಹೇಳಿದ ಮಾತನ್ನೇ ಪ್ರೇಕ್ಷಕರೂ ಹೇಳಿದರೆ ಅದೇ ಸಿನಿಮಾದ ಯಶಸ್ಸು…’  ಹೀಗನ್ನುತ್ತಲೇ ಸಣ್ಣ ಖುಷಿಯೊಂದಿಗೆ ಮಾತು ಮುಂದುವರೆಸಿದರು ನಿರ್ದೇಶಕ ಸತ್ಯಪ್ರಕಾಶ್‌.

Advertisement

“”ಒಂದಲ್ಲಾ ಎರಡಲ್ಲಾ’ ಚಿತ್ರ ನೋಡಿ ಹೊರಬಂದ ಎಲ್ಲರಿಗೂ ಆ ಸಮೀರ ಜೊತೆಗಿರುತ್ತಾನೆಂಬ ಭಾವ. ಒಂದು ರೀತಿಯ ಸಮೀರನಾಗುವ ತವಕ. ಇಲ್ಲಿ ನೋಡುಗನಿಗೆ ಇಷ್ಟವಾಗಿದ್ದು ಸೌಹಾರ್ದ. ಕಳೆದುಕೊಂಡಿದ್ದರ ಹುಡುಕಾಟ, ಆ ಹುಡುಕಾಟದಲ್ಲಿ ಸಿಗುವ ಒಂದಷ್ಟು ರೋಮಾಂಚನ, ಹಿಡಿಯಷ್ಟು ನಿರೀಕ್ಷೆಗಳ ಜೊತೆಗೆ ಎಲ್ಲೋ ಒಂದು ಕಾರಣಕ್ಕೆ ಕಳೆದುಕೊಳ್ಳುತ್ತಿರುವ ಸೌಹಾರ್ದ ಸೆಲೆ ಮತ್ತು ಸಮೀರನ ಮುಗ್ಧತೆ, ಅವನ ಜೊತೆ ಸಹಜವಾಗಿ ಬದುಕುವ ಪಾತ್ರಗಳು, ಧರ್ಮದಾಚೆಗಿನ ಪರಿಶುದ್ಧ ಸಂಬಂಧದ ಗುಣಗಳು ನೋಡುಗನ ಮನಸ್ಸಿಗೆ ತಟ್ಟಿವೆ. ಇದೊಂದೇ ಕಾರಣಕ್ಕೆ “ಒಂದಲ್ಲಾ ಎರಡಲ್ಲಾ’ ಪ್ರಯೋಗಕ್ಕೆ ಮೆಚ್ಚುಗೆ ಸಿಕ್ಕಿದೆ’ ಎಂಬುದು ಸತ್ಯಪ್ರಕಾಶ್‌ ಅಭಿಪ್ರಾಯ.

“ನಾನು ಹೆಣೆದಿರುವ ಕಥೆಯ ಕ್ಯಾನ್ವಾಸ್‌ ಎಲ್ಲರ ಮನಸ್ಸನ್ನು ತಟ್ಟಲು ಕಾರಣ ಮತ್ತದೇ ಮುಗ್ಧತೆ. ಈ ಚಿತ್ರದಲ್ಲೊಂದು ಚಲನಶೀಲತೆ ಇದೆ. ಬಹುಶಃ ಅದೇ ಚಿತ್ರದ ಶಕ್ತಿ ಎಂದು ಭಾವಿಸುತ್ತೇನೆ. ನನ್ನ ಮೊದಲ ನಿರ್ದೇಶನದ “ರಾಮಾ ರಾಮಾ ರೇ’ ಚಿತ್ರದಲ್ಲೂ ಚಲನಶೀಲತೆ ಇತ್ತು. ಅದು ಇಲ್ಲೂ ಮುಂದುವರೆದಿದೆ. ನನ್ನ ಚಿತ್ರದ ಸಮೀರ ಒಂದೇ ಕಡೆ ನಿಲ್ಲುವುದಿಲ್ಲ. ಅಂತೆಯೇ ಕಥೆ ಕೂಡ ಸಮೀರನಂತೆಯೇ ಸಾಗುತ್ತ ನೋಡುಗರ ಕಣ್ಣು ತೇವವಾಗಿಸುತ್ತಾ ಹೋಗುತ್ತೆ. ಅದೂ ಕೂಡ ಮೆಚ್ಚುಗೆ ಕಾರಣವೆಂದೇ ಅರಿತಿದ್ದೇನೆ. ಮೆಚ್ಚುಗೆಯಂತೂ ಸಿಕ್ಕಿದೆ. ಜನ ನುಗ್ಗಿ ಬರಬೇಕಷ್ಟೇ. ಒಂದು ಪ್ರಯತ್ನ ಮತ್ತು ಪ್ರಯೋಗಕ್ಕೆ ಯಾವುದೇ ಧಕ್ಕೆಯಾಗಿಲ್ಲ ಎಂಬ ಸಮಾಧಾನ ನನ್ನದು …’

“ನಾನು ಸುಮ್ಮನೆ ಕಥೆ ಬರೆಯೋದಿಲ್ಲ. ಒಂದೇ ಜಾನರ್‌ಗೆ ಫಿಕ್ಸ್‌ ಆಗುವುದೂ ಇಲ್ಲ. ಒಳ್ಳೆಯ ಥಾಟ್‌ ಸಿಕ್ಕರೆ ಅದನ್ನು ಮೊದಲು ಯೋಚಿಸುತ್ತೇನೆ. ಅದು ಯುನಿರ್ವಸಲ್‌ ಆಗಿದೆಯಾ, ಅಂತಹ ಕಂಟೆಂಟ್‌ ಕಥೆಯಲ್ಲಿ ಸಿಗುತ್ತಾ ಎಂಬುದನ್ನು ಯೋಚಿಸುತ್ತೇನೆ. ನಾನು ಮಾಡುವ ಕಥೆಯಲ್ಲಿ ಬದುಕು, ಹಸಿವು, ನೋವು, ಸಂತೋಷ ಇರಬೇಕು. ಪ್ರಪಂಚದ ಎಲ್ಲರಿಗೂ ತಟ್ಟುವ ಅಂಶಗಳಿವು. ಇಂತಹ ಅಂಶಗಳಿದ್ದರೆ, ಅಲ್ಲಿ ಆಟ ಆಡೋಕೆ ಜಾಗ ಇದೆಯಾ ಅಂತ ಚೆಕ್‌ ಮಾಡ್ತೀನಿ. ಅದು ನನಗೆ ಮೊದಲು ಧೈರ್ಯ ಕೊಟ್ಟರೆ ಮಾತ್ರ ಅದನ್ನು ಬಳಸಿಕೊಂಡು ಹೋಗ್ತಿàನಿ. ಅದು ಬಿಟ್ಟರೆ, ನನಗೆ ಟ್ರೆಂಡ್‌, ಜಾನರ್‌ ಅಂತೆಲ್ಲಾ ಗೊತ್ತಿಲ್ಲ. ಅದು ನನ್ನ ಕೈಯಲ್ಲೂ ಇಲ್ಲ. ನಾನು ಹೇಳುವ ಕಥೆ ನೋಡುಗರಿಗೆ ಇಷ್ಟವಾಗಬೇಕು. ಸಾಧ್ಯವಾದಷ್ಟು ಅವರಿಗೆ ಕನ್ವಿನ್ಸ್‌ ಮಾಡೋಕೆ ಪ್ರಯತ್ನಿಸುತ್ತೇನಷ್ಟೇ’ ಎನ್ನುತ್ತಾರೆ ಸತ್ಯ.

ಈ ಚಿತ್ರ ಮುಗಿಸಿ, ಎಡಿಟಿಂಗ್‌ ಟೇಬಲ್‌ ಮತ್ತು ಹಿನ್ನೆಲೆ ಸಂಗೀತ ಕೆಲಸದ ವೇಳೆ ಕೂತಾಗ ಏನೇನೋ ಅನಿಸುತ್ತಿತ್ತು. ನಾನು ಬರೆಯುವ ಟೈಮಲ್ಲೇ ಇದು ವರ್ಕ್‌ ಆಗುತ್ತಾ, ಇಲ್ಲವೋ ಎಂಬ ಚಿಕ್ಕ ಚಿಕ್ಕ ಪಾಯಿಂಟ್‌ ಅನುಮಾನಕ್ಕೆ ಕಾರಣವಾಗುತ್ತಿತ್ತು. ಈಗ ಚಿತ್ರ ಬಿಡುಗಡೆಯಾಗಿ, ಯಾವಾಗ ಜನ ಮಾತಾಡೋಕೆ ಶುರು ಮಾಡಿದ್ದಾರೋ, ಆಗಲೇ ನನಗನ್ನಿಸಿದ್ದು, ನಾನು ಅಂದುಕೊಂಡಿದ್ದು ಸರಿ ಅಂತ. ಇಲ್ಲಿ ತೀರಾ ಹೊಸದಾಗಿ ಪ್ರಯತ್ನ ಪಟ್ಟಿದ್ದೇನೆ. ಒಂದೊಂದು ಸಲ ಯಾವ ಸೀನ್‌ ಹೇಗೆ ವಕೌìಟ್‌ ಆಗುತ್ತೆ, ಯಾವ ಸೀನ್‌ನಲ್ಲಿ ಸ್ಪೀಡ್‌ ಇದೆ, ಇಲ್ಲ ಅನ್ನೋದು ನಮಗೂ ಗೊತ್ತಿರಲ್ಲ. ಚಿತ್ರ ನೋಡಿದಾಗಲಷ್ಟೇ ಸರಿ, ತಪ್ಪುಗಳು ಕಾಣೋದು. “ರಾಮಾ ರಾಮ ರೇ’ ಚಿತ್ರದಲ್ಲೂ ಅಂತಹ ತಪ್ಪುಗಳಿದ್ದವು. ಆದರೆ, ಅದೊಂದು ಪ್ರಯೋಗವಾಗಿ ನೋಡಿದಾಗ ಎಲ್ಲವೂ ಮರೆಯಾಗುತ್ತವೆ. “ರಾಮಾ ರಾಮ ರೇ’ ಚಿತ್ರದಲ್ಲಿ ಮಾಡಿದ ತಪ್ಪನ್ನು, “ಒಂದಲ್ಲಾ ಎರಡಲ್ಲಾ’ ಚಿತ್ರದಲ್ಲಿ ಸರಿಪಡಿಸಿಕೊಂಡಿದ್ದೇನೆ. ಈ ಚಿತ್ರದಲ್ಲಾದ ತಪ್ಪನ್ನು ಮುಂದಿನ ಚಿತ್ರದಲ್ಲಿ ಸರಿಪಡಿಸಿಕೊಳ್ತೀನಿ. ಬರವಣಿಗೆಯಲ್ಲಿರುವುದೇ ಬೇರೆ, ಅದು ಸ್ಕ್ರೀನ್‌ ಮೇಲೆ ಬರುವ ಹೊತ್ತಿಗೆ ಆಗುವುದೇ ಬೇರೆ. ನಾವು ಬರೆದದ್ದು, ಶೇ.50ರಷ್ಟು ಸ್ಕ್ರೀನ್‌ ಮೇಲೆ ಬಂದರೆ ಅದೇ ಅಚೀವ್‌ ಮಾಡಿದಂತೆ. ಎಷ್ಟೇ ಎಚ್ಚರವಹಿಸಿದ್ದರೂ, ಸಣ್ಣ ಸಣ್ಣ ತಪ್ಪುಗಳು ಸಾಮಾನ್ಯ’ ಎಂಬುದು ಸತ್ಯಪ್ರಕಾಶ್‌ ಗ್ರಹಿಕೆ.

Advertisement

ಸತ್ಯ ಹೇಳುವಂತೆ “ರಾಮಾ ರಾಮ ರೇ’ ಚಿತ್ರಕ್ಕೂ ಸ್ಲೋ ಪಿಕಪ್‌ ಇತ್ತಂತೆ. “ಇದು ಎಲ್ಲರ ಮೆಚ್ಚುಗೆ ಪಡೆದಿದೆ. ಒಳ್ಳೆಯ ಮಾತುಗಳು ಬರುತ್ತಿವೆ. ಆದರೆ, ಇನ್ನಷ್ಟು ಜನ ಮಾತಾಡಬೇಕಿದೆ. ನಾನಂದುಕೊಂಡಷ್ಟು ರೀಚ್‌ ಆಗಿಲ್ಲ ಎಂಬ ಸಣ್ಣ ಭಯವಿದೆ. ನೋಡೋಣ, ಒಳ್ಳೇ ಮನಸ್ಸಿಂದ ಮಾಡಿದ ಚಿತ್ರಕ್ಕೆ ಸಿನಿಮಾ ನೋಡುವ ಮನಸ್ಸುಗಳು ಬೆನ್ನುತಟ್ಟುತ್ತವೆ ಎಂಬ ನಂಬಿಕೆ ಇದೆ. ಕಥೆ ಬರೆಯುವಾಗಲೂ ಹೋರಾಟವಿತ್ತು, ಸಿನಿಮಾ ಮಾಡುವಾಗಲೂ ಹೋರಾಟವಿತ್ತು. ಈಗ ಜನರನ್ನು ತಲುಪಿಸಲು ಹೋರಾಟ ಮಾಡಬೇಕಿದೆ. ಅದಕ್ಕೊಂದು ಜಯ ಸಿಗುತ್ತೆ ಎಂಬ ಅದಮ್ಯ ವಿಶ್ವಾಸ ನನ್ನದು’ ಎನ್ನುತ್ತಲೇ ಮಾತು ಮುಗಿಸುತ್ತಾರೆ ಸತ್ಯಪ್ರಕಾಶ್‌.

ವಿಜಯ್‌ ಭರಮ ಸಾಗರ

Advertisement

Udayavani is now on Telegram. Click here to join our channel and stay updated with the latest news.

Next