ಲಿಂಗಸುಗೂರು: ರೈತರ ಮೇಲೆ ನಿರಂತರ ನಡೆಯುತ್ತಿರುವ ಶೋಷಣೆ ವಿರುದ್ಧ ರೈತರು ಯೋಧರಂತೆ ಹೋರಾಡಬೇಕು ಎಂದು ದೆಹಲಿ ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ಹರನೇಕ್ ಸಿಂಗ್ ಹೇಳಿದರು.
ಪಟ್ಟಣದ ಶಾದಿ ಮಹಲ್ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೈತರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಹಸಿರುಕ್ರಾಂತಿ ಮಾಡುವ ರೈತರು ಇನ್ನೂ ಉದ್ಧಾರವಾಗಿಲ್ಲ. ಆದರೆ ಇದರಿಂದ ಉದ್ಧಾರವಾಗಿರುವುದು ಟ್ರ್ಯಾಕ್ಟರ್-ಗೊಬ್ಬರ ಕಂಪನಿಗಳು. ತಾನು ಬೆಳೆದ ಬೆಳೆಗೆ ಬೆಲೆ ನಿಗದಿ ಮಾಡುವ ಸಮಯ ಬರುತ್ತೆ ಅದಕ್ಕಾಗಿ ರೈತರು ಹೋರಾಟ ಮಾಡಬೇಕಾಗುತ್ತಿದೆ. ಪಂಜಾಬ್‌ನಲ್ಲಿ ಒಂದು ಅಡಿ ಭೂಮಿ ಸರ್ಕಾರಕ್ಕೆ ಅಥವಾ ಬ್ಯಾಂಕ್ ಗಳ ಹರಾಜಿಗೆ ನೀಡುವುದಿಲ್ಲ ಎಂದು ಅಲ್ಲಿನ ರೈತರು ಪ್ರಮಾಣ ಮಾಡಿದ್ದಾರೆ. ಇಲ್ಲಿಯೂ ಅದೇ ರೀತಿ ವಾತಾವರಣ ಸೃಷ್ಟಿಯಾಗಬೇಕು ಇದಕ್ಕಾಗಿ ರೈತರಲ್ಲಿ ಒಗ್ಗಟ್ಟು ಅಗತ್ಯ ಎಂದರು.
ಸಮಗ್ರ ನೀರಾವರಿ ಹಕ್ಕು ರಕ್ಷಣಾ ವೇದಿಕೆ ಮುಖಂಡ ಆರ್. ಮಾನಸಯ್ಯ ಮಾತನಾಡಿ, ಮಾಜಿ ಶಾಸಕ ಮಾನಪ್ಪ ವಜ್ಜಲ್ ನಂದವಾಡಗಿ ಯೋಜನೆ ರೂವಾರಿ ಎಂದು ಪ್ರಚಾರ ಪಡೆಯುತ್ತಿದ್ದಾರೆ. ಆದರೆ ಸ್ವಾತಂತ್ರ್ಯ ಹೋರಾಟಗಾರ ಕಾಶೀರಾವ್ ಪಾಟೀಲ್, ಹಿರಿಯ ಹೋರಾಟಗಾರ ಮಾರುತಿ ಮಾನ್ಪಡೆ ಈ ಯೋಜನೆ ಮುಖ್ಯ ರೂವಾರಿಗಳು. ಮಾನಪ್ಪ ವಜ್ಜಲ್ ನಂದವಾಡಗಿ ಕೊಂದ ರೂವಾರಿ ಎಂದು ಕರೆಸಿಕೊಳ್ಳಲು ಯೋಗ್ಯರು ಎಂದು ಕಿಡಿ ಕಾರಿದರು.
1800 ಕೋಟಿ ರೂ. ನಂದವಾಡಗಿ ಯೋಜನೆ ಕಾಮಗಾರಿ ಪೂರ್ಣಗೊಳ್ಳದೇ ಈಗಾಗಲೇ 970 ಕೋಟಿ ರೂ. ಬಿಲ್ ಮಾಡಲಾಗಿದೆ. ಈ ಬಗ್ಗೆ ಅಧಿಕಾರಿಗಳು, ಶಾಸಕರು, ರಾಜಕೀಯ ಮುಖಂಡರು ಏಕೆ ಮೌನ ವಹಿಸಿದ್ದಾರೆ ಎಂಬುದೇ ಪ್ರಶ್ನೆ. ನಂದವಾಡಗಿ ಯೋಜನೆ ಭ್ರಷ್ಟಾಚಾರ ಸಮಗ್ರ ತನಿಖೆ ಮಾಡಲು ಕಳೆದ 3 ತಿಂಗಳಿಂದ ಲಿಂಗಸುಗೂರಿನಲ್ಲಿ ಧರಣಿ ನಡೆಸಲಾಗುತ್ತಿದೆ. ಅಲ್ಲದೇ 98 ಗ್ರಾಮಗಳಲ್ಲಿ ಜಾಗೃತಿ ಸಭೆ ನಡೆಸಿ ಇಂದು ರೈತರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮುಂದಿನ ಹೋರಾಟದ ರೂಪುರೇಷೆ ಮಾಡಲಾಗುವುದು ಎಂದರು.
ಈ ವೇಳೆ ಕರ್ನಾಟಕ ಜನಶಕ್ತಿ ಸಿರಿಮನೆ ನಾಗರಾಜ, ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಅಮರಣ್ಣ ಗುಡಿಹಾಳ, ಅಮೀನ್ ಪಾಶಾ ದಿದ್ದಗಿ, ಅನೀಲ ಕುಮಾರ, ಹೈಮದ್ ಜಾವೂಸ್, ಸೈಯದ್ ಯೂನಸ್ ಖಾಸ್ಮಿ, ಲಿಂಗಪ್ಪ ಪರಂಗಿ, ಚಿನ್ನಪ್ಪ ಕೊಟ್ರಕಿ, ಶರಣಬಸವ ಈಚನಾಳ ಇತರರಿದ್ದರು.