ಬೆಂಗಳೂರು: ವಿಧಾನ ಪರಿಷತ್ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗಾಗಿ ಕರೆಯಲಾದ ಕಲಾಪವು ಹೊಡೆದಾಟ, ಎಳೆದಾಟ, ಪ್ರಜಾಪ್ರಭುತ್ವದ ಅಣಕಕ್ಕೆ ಸಾಕ್ಷಿಯಾಯಿತು. ವಿಧಾನ ಪರಿಷತ್ ಪೀಠ ಎನ್ನುವುದು ಜನಪ್ರತಿನಿಧಿಗಳ ಜಂಗೀಕುಸ್ತಿಯ ಕಣವಾದ ವಿಚಿತ್ರ ಘಟನೆ ಮಂಗಳವಾರ ನಡೆಯಿತು.
ಕಾಂಗ್ರೆಸ್ ಸದಸ್ಯರು ಸಭಾಪತಿಯವರು ಸದನದೊಳಗೆ ಆಗಮಿಸುವ ಮೊದಲೇ ಬೇರೊಬ್ಬ ಸದಸ್ಯರನ್ನು ಪೀಠದ ಮೇಲೆ ತಂದು ಕೂರಿಸಿದರು. ಇದಂದ ಸಿಟ್ಟಿಗೆದ್ದ ಬಿಜೆಪಿ ಸದಸ್ಯರು ಸಭಾಪತಿ ಪೀಠದ ಮೇಲೆ ಸಭಾಪತಿ ಅಥವಾ ಉಪಾಸಭಾಪತಿ ಕೂರಬೇಕು. ಸದಸ್ಯರಾದ ಚಂದ್ರ ಶೇಖರ್ ಪಾಟೀಲ್ ಅವರನ್ನು ತಂದು ಕೂರಿಸಿದ್ದಾರೆ. ಕೂಡಲೇ ಅವರನ್ನು ಕೆಳಗೆ ಇಳಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ನೂಕಾಟ- ಕಿತ್ತಾಟ ನಡೆಯಿತು. ಆಗ ಸಭಾಪತಿ ಪೀಠದ ಮುಂಭಾಗದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಅಳವಡಿಸಿದ್ದ ಗಾಜಿನ ಕವಚನ್ನು ಎಳೆದು ಹಾಕಿದರು. ಬಿಜೆಪಿಗೆ ಕಾಂಗ್ರೆಸ್ ಸದಸ್ಯರು ಧಿಕ್ಕಾರ ಕೂಗಿದರೆ, ಬಿಜೆಪಿ ಸದಸ್ಯರು ಸಭಾಪತಿ ವಿರುದ್ಧ ಘೋಷಣೆ ಕೂಗಿದರು.
ಇದನ್ನೂ ಓದಿ:ಗೋ ಹತ್ಯೆ ನಿಷೇಧ ವಿಧೇಯಕಕ್ಕೆ ಜೆಡಿಎಸ್ ವಿರೋಧ: ಬಿಜೆಪಿಗೆ ಎದುರಾಯಿತು ಸಂಕಷ್ಟ
ಆರಂಭದಲ್ಲಿ ಉಪಸಭಾಪತಿ ಧರ್ಮೇಗೌಡ ಅವರು ಕೂತಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಪೀಠದ ಮೇಲೆ ಏಕಾಏಕಿ ಪ್ರವೇಶ ಮಾಡಿದ್ದರಿಂದ ಉಪಸಭಾಪತಿ ಧರ್ಮೇಗೌಡ ಅವರನ್ನು ಕಾಂಗ್ರೆಸ್ ಸದಸ್ಯರು ಪೀಠದಿಂದ ಇಳಿಸಿ, ಚಂದ್ರಶೇಖರ್ ಪಾಟೀಲ್ ಅವರನ್ನು ಕೂರಿಸಿ, ಪ್ರತಿಪಕ್ಷದ ಮುಖ್ಯ ಸಚೇತಕ ನಾರಾಯಣಸ್ವಾಮಿ, ಸದಸ್ಯ ಎಸ್.ರವಿ ಪೀಠದ ಎರಡು ಭಾಗದಲ್ಲಿ ನಿಂತು ಯಾರು ಪ್ರವೇಶಿಸದಂತೆ ತಡೆದರು.
ಕಲಾಪ ಮುಂದೂಡಿಕೆ
ಗಲಾಟೆ ಹೆಚ್ಚಾಗುತ್ತಿದ್ದಂತೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಿದ್ದಾರೆ. ಪೀಠಕ್ಕೆ ಆಗಮಿಸಿ ಮುಂದೂಡಿಕೆ ಘೋಷಣೆ ಮಾಡಿ ಮಾರ್ಷಲ್ ಗಳ ಬೆಂಬಲದೊಂದಿಗೆ ಹೊರ ನಡೆದರು. ಆದರೂ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ಕೂಗಾಡ, ದೂಡಾಟ, ಕಿತ್ತಾಟ ನಿಲ್ಲಲಿಲ್ಲ.
ಸಭಾಪತಿ ವಿರುದ್ಧ ಅವಿಶ್ವಾಸ ಮಂಡನೆ ಮಾಡುವ ಬಿಜೆಪಿಯ ನಿರ್ಣಯಕ್ಕೆ ಈ ಘಟನೆಯಿಂದ ಹಿನ್ನಡೆಯಾಗಿದೆ. ಜೆಡಿಎಸ್ ಬೆಂಬಲ ಪಡೆದಿದ್ದ ಬಿಜೆಪಿ ಇಂದಿನ ಕಲಾಪದಲ್ಲಿ ನಿರ್ಣಯ ಮಂಡನೆ ಮಾಡುವ ಇರಾದೆ ಹೊಂದಿತ್ತು. ಆದರೆ ಕಾಂಗ್ರೆಸ್ ಸದಸ್ಯರಿಂದ ನಡೆದ ಅನಿರೀಕ್ಷಿತ ಬೆಳವಣಿಗೆಯಿಂದ ಸದ್ಯಕ್ಕೆ ಬಿಜೆಪಿಯ ಯೋಜನೆಗೆ ಹಿನ್ನಡೆಯಾಗಿದೆ.