ರಟ್ಟಿಹಳ್ಳಿ: ಮಾಸೂರಿನ ವರಕವಿ ಸರ್ವಜ್ಞ ಪ್ರಾಧಿಕಾರಕ್ಕಾಗಿ ಆಗ್ರಹಿಸಿ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಾಮಾಜಿಕ ಹೋರಾಟಗಾರ, ನ್ಯಾಯವಾದಿ ಬಿ.ಡಿ. ಹಿರೇಮಠ ಹೇಳಿದರು. ಮಾಸೂರಿನ ಸರ್ವಜ್ಞ ಐಕ್ಯಸ್ಥಳಕ್ಕೆ ಬುಧವಾರ ಭೇಟಿ ನೀಡಿ, ಕುಮದ್ವತಿ ನದಿಯಲ್ಲಿ ಸ್ನಾನ ಮಾಡಿ, ಸರ್ವಜ್ಞನ ಸಮಾಧಿ ಬಳಿ ಲಿಂಗಪೂಜೆ ಕೈಗೊಂಡು ನಿರ್ಣಯ ಘೋಷಿಸಿದರು.
ಸರ್ವಜ್ಞನ ವಚನಗಳು ಗ್ರಂಥಾಲಯವಿದ್ದಂತೆ. ಅವುಗಳ ಉಳಿವಿಗೆ ಸರ್ಕಾರ ಚಿಂತನೆ ಮಾಡಬೇಕು. ಸರ್ವಜ್ಞನ ವಚನಗಳಿಗೆ ಸಂಬಂಧಿಸಿದಂತೆ ಅನೇಕ ದಾಖಲೆಗಳನ್ನು ಮಾಡಿದ್ದಾರೆ. ಸಾಕಷ್ಟು ಪುರಾವೆಗಳನ್ನು ಸಾಹಿತಿಗಳು ತಯಾರಿಸಿದ್ದಾರೆ ಪಿಎಚ್‌ಡಿ ಸಂಶೋಧನೆಗಳಾಗಿವೆ.
ಶತಮಾನಗಳಿಂದ ಜನರ ಬಾಯಿಂದ ಬಂದ ಜನವಾಣಿ ಇದ್ದು, ಸರ್ವಜ್ಞರ ವಚನಗಳು ಜನರ ನಾಲಿಗೆಯ ಮೇಲೆ ನಿರಂತರವಾಗಿ ಹಾದು ಬಂದಿವೆ. ಇವೆಲ್ಲವನ್ನು ಪರಿಗಣನೆ ಮಾಡಿ ನೋಡಿದಾಗ ಇದೇ ಮಾಸೂರು ಸರ್ವಜ್ಞನ ಮೂಲಸ್ಥಳ ಎಂಬುದು ಮನವರಿಕೆಯಾಗುತ್ತದೆ.
ಇದನ್ನೂ ಓದಿ:ಚರಗ ಚೆಲ್ಲಿ ಭೂತಾಯಿಗೆ ಭಕ್ತಿ ಸಮರ್ಪಣೆ : ರೈತ ಕುಟುಂಬಗಳಿಂದ ಸಡಗರದ ಎಳ್ಳ ಅಮಾವಾಸ್ಯೆ ಆಚರಣೆ
ಇವೆಲ್ಲವನ್ನು ಇಟ್ಟುಕೊಂಡು ಎಲ್ಲರಲ್ಲೂ ಒಂದೊಂದು ನುಡಿಗಲಿತು ವಿದ್ಯೆಯ ಪರ್ವತವೇ ಆದ ಸರ್ವಜ್ಞ ಎಂದು ಸರ್ವಜ್ಞ ಹೇಳಿದಂತೆ, ಬಿ.ಡಿ.ಹಿರೇಮಠ ಮಾತ್ರವಲ್ಲದೇ ಹೋರಾಟಗಾರರು ಎಲ್ಲರೂ ಒಗ್ಗೂಡಿ ಹೋರಾಟ ಪ್ರಾರಂಭಿಸೋಣ ಎಂದರು. ಈ
ಹೋರಾಟ ಅನಿವಾರ್ಯವಾಗಿದ್ದು, ಸರ್ಕಾರಕ್ಕೆ ಕಣ್ಣಿದ್ದು ಕಾಣುತ್ತಿಲ್ಲ, ಕಿವಿಯಿದ್ದರೂ ಕೇಳುತ್ತಿಲ್ಲ. ಏಕೆಂದರೆ ಎಲ್ಲಾ ರಾಜಕಾರಣವಾಗುತ್ತಿದೆ. ಅವರಿಗೆ ಸ್ವತ್ಛವಾಗಿ ಕಾಣುವ ರೀತಿಯಲ್ಲಿ, ನಿಚ್ಚಳವಾಗಿ ಕಾಣುವ ರೀತಿಯಲ್ಲಿ ಹೋರಾಟ ಮಾಡಲು ಸನ್ನದ್ಧರಾಗೋಣ ಎಂದು ಕರೆ ನೀಡಿದರು. ಮಾಸೂರು ರೈತ ಸಂಘದ ಅಧ್ಯಕ್ಷರಾದ ನಾಗನಗೌಡ ಪಾಟೀಲ್, ಮಲ್ಲೇಶಪ್ಪ ಗುತ್ತೆಣ್ಣನವರ, ಈರನಗೌಡ ಬೇವಿನಮರದ, ಚಂದ್ರಹಾಸ ನಾಗೇನಹಳ್ಳಿ ಇತರರಿದ್ದರು.