ಹಾಸನ : ಕಾಂಗ್ರೆಸ್ ನಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಿಂದ ಮುಂಬರುವ ವಿಧಾನಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳಾಗಿರುವ ಎಚ್.ಕೆ.ಮಹೇಶ್ ಮತ್ತು ಬನವಾಸೆ ರಂಗಸ್ವಾಮಿ ಮೈಕ್ ಗಾಗಿ ಕಿತ್ತಾಡಿದ ಪ್ರಸಂಗ ಗುರುವಾರ ನಡೆಯಿತು.
ಹಾಸನದ ಉತ್ತರ ಬಡಾವಣೆಯಲ್ಲಿರುವ ಕಾರ್ಮಿಕ ಇಲಾಖೆ ಉಪ ಆಯುಕ್ತರ ಕಚೇರಿಯಲ್ಲಿ ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆಯ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಯಿತು. ಕಾರ್ಮಿಕರಿಗೆ ಹಂಚ ಬೇಕಾಗಿದ್ದ ಫುಡ್ ಕಿಟ್ ಗಳನ್ನು ಬಿಜೆಪಿ ಶಾಸಕ ಪ್ರೀತಂ ಗೌಡ ಬಿಜೆಪಿ ಬೆಂಬಲಿಗರಿಗೆ ಹಂಚಿಕೊಂಡಿದ್ದಾರೆ ಎಂದು ಪ್ರತಿಭಟನೆ ಮಾಡಿದ್ದ ಮಹೇಶ್ ಈ ದಿನ ಸಾಕಷ್ಟು ಕಾರ್ಮಿಕರನ್ನು ಕರೆಸಿದ್ದರು. ಆದರೆ ಕಿಟ್ ಗಳಿಗಿಂತ ಮೂರು ಪಟ್ಟು ಹೆಚ್ಚು ಕಾರ್ಮಿಕರು ಜಮಾಯಿಸಿದ್ದರಿಂದ ನೂಕು ನುಗ್ಗಲು ಉಂಟಾಯಿತು.
ಇದನ್ನೂ ಓದಿ:ಈ ಜನ್ಮದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ: ಈಶ್ವರಪ್ಪ
ಆ ಸಂದರ್ಭದಲ್ಲಿ ಕಾರ್ಮಿಕರನ್ನು ನಿಯಂತ್ರಿಸಲು ಮೈಕ್ ಬಳಸುವಾಗ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಬನವಾಸೆ ರಂಗಸ್ವಾಮಿ ಅಲ್ಲಿಗೆ ಬಂದು ಮೈಕ್ ತೆಗೆದುಕೊಂಡು ಮಾತನಾಡಲು ಮುಂದಾದಾಗ ಮಹೇಶ್ ಅವರು ಎಸಿ ಜಗದೀಶ್ ಮಾತಾಡಲು ಮೈಕ್ ಕೊಡು ಎಂದು ಹೇಳಿದರೂ ರಂಗಸ್ವಾಮಿ ಮೈಕ್ ಕೊಡಲಿಲ್ಲ. ಆ ಸಂದರ್ಭದಲ್ಲಿ ರಂಗಸ್ವಾಮಿ ನಡುವೆ ಮೈಕ್ ಗೆ ಕಿತ್ತಾಟ ನಡೆದು, ಸೇರಿದ್ದ ಜನರಿಗೆ ಪುಕ್ಕಟೆ ಮನರಂಜನೆ ನೀಡಿದರು. ಈ ನಡುವೆಯೂ ಕಾರ್ಮಿಕರ ನೂಕುನುಗ್ಗಲೂ ಮುಂದುವರಿದಿತ್ತು.