Advertisement

ಕೋವಿಡ್‌ 19 ಹೊಡೆದೋಡಿಸಲು ಮತ್ತೂಂದು ಜತೆಯಾಟ ಅಗತ್ಯ: ಪ್ರಧಾನಿ ಮೋದಿ ಟ್ವೀಟ್‌

12:24 AM Mar 22, 2020 | Sriram |

ಹೊಸದಿಲ್ಲಿ: 2002ರ ನಾಟ್‌ವೆಸ್ಟ್‌ ಏಕದಿನ ಸರಣಿಯ ಫೈನಲ್‌ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದುಕೊಡಲು ಛಲ ಬಿಡದೆ ಆಡಿದ್ದ ಯುವರಾಜ್‌ ಸಿಂಗ್‌ ಹಾಗೂ ಮೊಹಮದ್‌ ಕೈಫ್ ಅವರ ಆಟವನ್ನು ನೆನಪಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಅದೇ ರೀತಿಯಲ್ಲಿ ದೇಶದ ಪ್ರತಿಯೊಬ್ಬರೂ ಜನತಾ ಕರ್ಫ್ಯೂಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

Advertisement

ಕೋವಿಡ್‌ 19 ಸೋಂಕಿನ ಬಗ್ಗೆ ಎಚ್ಚರದಿಂದ ಇರುವಂತೆ ಹೇಳಿದ ಮೋದಿ, ರವಿವಾರ ಜನತಾ ಕರ್ಫ್ಯೂಗೆ ಈಗಾಗಲೇ ಕರೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿದ್ದ ಮೊಹಮ್ಮದ್‌ ಕೈಫ್, “ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವೈರಸ್‌ ವಿರುದ್ಧ ಹೋರಾಡಲು ಕರೆ ನೀಡಿದ್ದಾರೆ. ಮುಂಬರುವ ಸವಾಲುಗಳನ್ನು ಜನತಾ ಕರ್ಫ್ಯೂ ಮೂಲಕ ಎದುರಿಸಬೇಕು. ನಮ್ಮ ಪ್ರೀತಿಪಾತ್ರರು ಹಾಗೂ ದೇಶದ ಜನರಿಗಾಗಿ ನಾವೆಲ್ಲ ಜವಾಬ್ದಾರಿ ತೆಗೆದುಕೊಳ್ಳಬೇಕಾದ ಸಮಯ ಇದಾಗಿದೆ’ ಎಂದಿದ್ದರು.

ಒಂದಾಗಿ ನಿಲ್ಲೋಣ…
ಇದಕ್ಕೆ ಪ್ರತಿಕ್ರಿಯೆ ನೀಡಿದ ಮೋದಿ, “ಇಬ್ಬರು ಅತ್ಯುತ್ತಮ ಕ್ರಿಕೆಟಿಗರು ಇಲ್ಲಿದ್ದಾರೆ. ನಿಮ್ಮ ಜತೆಯಾಟವನ್ನು ಎಂದೂ ಮರೆಯಲಾಗದು. ಈಗ ಅವರು ಹೇಳಿದಂತೆ, ಮತ್ತೂಂದು ಜತೆಯಾಟಕ್ಕೆ ಸಮಯ ಎದುರಾಗಿದೆ. ಈ ಬಾರಿ ಭಾರತ ಕೊರೊನಾ ವೈರಸ್‌ ವಿರುದ್ಧ ಸಂಪೂರ್ಣ ಒಂದಾಗಿ ನಿಲ್ಲಬೇಕಿದೆ’ ಎಂದು ಹೇಳಿದ್ದಾರೆ.

326 ರನ್‌ ಚೇಸಿಂಗ್‌
ಅಂದಿನ ಇಂಗ್ಲೆಂಡ್‌ ಎದುರಿನ ಫೈನಲ್‌ ಮುಖಾಮುಖೀಯಲ್ಲಿ 326 ರನ್‌ ಚೇಸ್‌ ಮಾಡುವ ವೇಳೆ ಭಾರತ 146ಕ್ಕೆ 5 ವಿಕೆಟ್‌ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಬಳಿಕ ಯುವರಾಜ್‌ ಕೈಫ್ 121 ರನ್‌ ಜತೆಯಾಟ ದಾಖಲಿಸಿ ಭಾರತಕ್ಕೆ ಅಮೋಘ ಗೆಲುವು ಒದಗಿಸಿದ್ದರು. ಭಾರತ 3 ಎಸೆತಗಳಿರುವಾಗ 2 ವಿಕೆಟ್‌ ಅಂತರದ ಜಯ ಸಾಧಿಸಿತ್ತು. ಯುವರಾಜ್‌ 69, ಕೈಫ್ ಅಜೇಯ 87 ರನ್‌ ಬಾರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next