ಕಲಬುರಗಿ: ರಾತ್ರಿ ವೇಳೆ ಕ್ಯಾಂಪಸ್ ನಿಂದ ಬೈಕಿನಲ್ಲಿ ಹೊರ ಹೋಗುತ್ತಿದ್ದ ವಿದ್ಯಾರ್ಥಿಯನ್ನು ಭದ್ರತಾ ಸಿಬ್ಬಂದಿ ಪ್ರಶ್ನೆ ಮಾಡುತ್ತಿರುವುದನ್ನು ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ವಿದ್ಯಾರ್ಥಿಯ ಮೇಲೆ ಇಲ್ಲಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಭದ್ರತಾಧಿಕಾರಿ ಹಲ್ಲೆ ನಡೆಸಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ
ಕೇರಳ ಮೂಲದ ವಿದ್ಯಾರ್ಥಿಯೊಬ್ಬ ರಾತ್ರಿ ಬೈಕ್‌ನಲ್ಲಿ ಹೊರಟಿದ್ದ. ಈ ಸಂದರ್ಭದಲ್ಲಿ ವಿ.ವಿ.ಯ ಮುಖ್ಯದ್ವಾರದ ಬಳಿ ಇದ್ದ ಭದ್ರತಾಧಿಕಾರಿ ಶಿವಾನಂದ ಕೋಳಿ ಹೊರಗಡೆ ಹೋಗಬೇಡಿ ಎಂದು ತಿಳಿಸಿದ್ದಾರೆ. ಈ ಮಾತಿಗೆ ಮಾತು ಬೆಳೆದಿದೆ. ರಾತ್ರಿ ಹೊರಗೆ ಹೋಗದಂತೆ ಸುತ್ತೋಲೆ ಏನಾದರೂ ಇದೆಯೇ ಎಂದು ವಿದ್ಯಾರ್ಥಿ ಪ್ರಶ್ನಿಸಿದ್ದಾನೆ. ಇದನ್ನೆಲ್ಲ ಇನ್ನೊಬ್ಬ ವಿದ್ಯಾರ್ಥಿ ಚಿತ್ರೀಕರಣ ಮಾಡುತ್ತಿದ್ದುದನ್ನು ಗಮನಿಸಿದ ಶಿವಾನಂದ, ಆ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳ ಗುಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರ ಮನೆಗೆ ತೆರಳಿ ದೂರು ಸಲ್ಲಿಸಿದೆ. ವಿದ್ಯಾರ್ಥಿಗಳು ಹಾಗೂ ಶಿವಾನಂದ ಕೋಳಿ ಅವರನ್ನು ಕರೆಸಿಕೊಂಡು ಸಂಧಾನ ಸಭೆ ನಡೆಸಿದ್ದಾರೆ.
ಇದನ್ನೂ ಓದಿ:ಉತ್ತರ ಪ್ರದೇಶದ ಮೊದಲ ಮಹಿಳಾ ಪೊಲೀಸ್ ಆಯುಕ್ತರಾಗಿ ಲಕ್ಷ್ಮೀ ಸಿಂಗ್ ನೇಮಕ
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜ ಡೋಣೂರ, ‘ಭದ್ರತಾಧಿಕಾರಿ ಶಿವಾನಂದ ಕೋಳಿಯವರೊಂದಿಗೆ ಮಾತನಾಡಿದ್ದೇನೆ. ವಿದ್ಯಾರ್ಥಿಗಳಿಂದಲೂ ಮಾಹಿತಿ ಪಡೆದಿದ್ದೇನೆ. ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿಲ್ಲ. ನಿಗದಿತ ಸಮಯ ಮೀರಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಮುಖ್ಯ ಗೇಟಿನ ಹೊರಗೆ ಹೋಗಲು ಯತ್ನಿಸಿದಾಗ ಭದ್ರತಾ ಸಿಬ್ಬಂದಿ ಅವರನ್ನು ತಡೆದಾಗ ತುಸು ಮಾತಿನ ಚಕಮಕಿ ನಡೆದಿದೆ. ಇಡೀ ಪ್ರಕರಣ ಕೂಲಂಕಷವಾಗಿ ಪರಿಶೀಲಿಸಲಾಗುವುದು. ಸಿ.ಸಿ. ಟಿವಿ ಫೂಟೇಜ್ ಕೂಡ ಪರಿಶೀಲಿಸಲಾಗುವುದು ಎಂದರು.
ಶಿವಾನಂದ ಕೋಳಿ ಅವರ ವರ್ತನೆಯ ಬಗ್ಗೆ ಪ್ರಾಧ್ಯಾಪಕ ವಲಯ ಹಾಗೂ ವಿದ್ಯಾರ್ಥಿಗಳಲ್ಲಿ ಅಸಮಾಧಾನವಿದೆ. ಈ ಬಗ್ಗೆ ವಿ.ವಿ. ಆಡಳಿತ ಮಂಡಳಿಗೆ ದೂರನ್ನೂ ನೀಡಲಾಗಿದೆ. ಆದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.