ದಾವಣಗೆರೆ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸೋಂಕು ನಿಯಂತ್ರಣದ ಕುರಿತು ಚರ್ಚೆ ಮಾಡಬೇಕಾದ ಸಭೆಯಲ್ಲಿ ಸಂಸದ ಮತ್ತು ಶಾಸಕರು ವಾಗ್ವಾದ ನಡೆಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಇಲ್ಲಿನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಇಂದು ಸಚಿವ ಕೆ ಸುಧಾಕರ್ ಹಾಗೂ ಬಿ.ಎ. ಬಸವರಾಜ್ ನೇತೃತ್ವದಲ್ಲಿ ಸಭೆ ಸಭೆ ಸೇರಲಾಗಿತ್ತು. ಸ್ಥಳೀಯ ಸಂಸದ ಜಿ. ಎಂ. ಸಿದ್ದೇಶ್ವರ್ ಹಾಗೂ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದ್ದರು. ಈ ಸಭೆಯಲ್ಲಿ ಸಂಸದ ಸಿದ್ದೇಶ್ವರ್ ಮತ್ತು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಡುವೆ ವಾಗ್ವಾದ ನಡೆದಿದ್ದು, ಕೈ ಮಿಲಾಯಿಸುವ ಹಂತ ತಲುಪಿತ್ತು ಎಂದು ವರದಿಯಾಗಿದೆ.
ಉಚಿತವಾಗಿ ಶುದ್ದ ಕುಡಿಯುವ ಘಟಕದ ನೀರನ್ನು ನೀಡಬೇಕೆಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಒತ್ತಾಯಿಸಿದಾಗ ಹಣ ನಿಮ್ಮಪ್ಪನ ಮನೆಯಿಂದ ಕೊಡ್ತಿಯೇನೋ ಎಂದ ಸಂಸದ ಜಿ ಎಂ ಸಿದ್ದೇಶ್ವರ್ ಪ್ರಶ್ನೆ ಮಾಡಿದ್ದರು ಎನ್ನಲಾಗಿದೆ. ಸಂಸದರ ಮಾತಿಗೆ ಎದ್ದು ನಿಂತ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ನಿಮ್ಮಪ್ಪನ ಮನೆಯಿಂದ ಕೊಡ್ತಿಯಾ ಎಂದು ಮರು ಪ್ರಶ್ನಿಸಿದ್ದಾರೆ. ಮಾತಿಗೆ ಮಾತು ಬೆಳೆದು ಶಾಸಕ-ಸಂಸದ ಕೈ ಕೈ ಮಿಲಾಯಿಸಲು ನಿಂತಿದ್ದರು ಎನ್ನಲಾಗಿದೆ.
ಸಚಿವರಿಬ್ಬರ ಎದುರೇ ಇವರಿಬ್ಬರ ವಾಗ್ವಾದ ನಡೆಯುತ್ತಿದ್ದು, ತಕ್ಷಣ ಜಿಲ್ಲಾಧಿಕಾರಿ ಮತ್ತು ಎಸ್ ಪಿ ಮಧ್ಯಪ್ರವೇಶಿಸಿ ಜಗಳ ನಿಲ್ಲಿಸಿದ್ದಾರೆ ಎನ್ನಲಾಗಿದೆ.
ಸಮಸ್ಯೆ ಬಗೆಹರಿಸಬೇಕಾದ ಜನಪ್ರತಿನಿಧಿಗಳು ಏಕವಚನದಲ್ಲಿ ವಾಗ್ವಾದ ನಡೆಸುತ್ತಿದ್ದನ್ನು ವೀಡಿಯೋ ಮಾಡಿದ ಮಾಧ್ಯಮದವರನ್ನು ತಡೆದ ಪೊಲೀಸರು ವೀಡಿಯೋ ಡಿಲಿಟ್ ಮಾಡಿಸಿದ್ದಾರೆ. ಮಾಧ್ಯಮ ಪ್ರತಿನಿಧಿಯ ಮೊಬೈಲ್ ಕಸಿದುಕೊಂಡ ಪೊಲೀಸರು ವೀಡಿಯೋ ಡಿಲಿಟ್ ಮಾಡಿದ್ದಾರೆ.