ಬಂಟ್ವಾಳ: ಹುಲಿವೇಷ ಹಾಕುತ್ತಿದ್ದ ಯುವಕರ ತಂಡ ಇಬ್ಭಾಗವಾಗಿ ಕಳೆದ ಕೆಲವು ದಿನಗಳ ಹಿಂದೆ ನಡೆದ ಜಗಳ ಮುಂದುವರಿದು ಅ. 26ರ ರಾತ್ರಿ ಚೂರಿ ಇರಿತ ಘಟನೆ ನಡೆದು ಮೂವರು ಗಾಯಗೊಂಡಿದ್ದಾರೆ. ಗಾಯಗೊಳಗಾದ ಮೂವರ ಪೈಕಿ ಇಬ್ಬರು ಚಿಕಿತ್ಸೆ ಪಡೆದು ತೆರಳಿದ್ದು, ಓರ್ವ ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೋಳಂಗಡಿ ನಿವಾಸಿಗಳಾದ ದೇವದಾಸ್, ಸಂದೀಪ್, ಶಂಕರ್ ಚೂರಿ ಇರಿತಕ್ಕೊಳಗಾಗಿದ್ದು, ಇವರ ಪೈಕಿ ದೇವದಾಸ್ ಮಂಗಳೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಬೋಳಂಗಡಿಯ ಶೋಧನ್, ಕಲ್ಲಡ್ಕ ನಿವಾಸಿ ಯತೀಶ್, ಮೆಲ್ಕಾರ್ ನಿವಾಸಿಗಳಾದ ಚೇತನ್, ಪ್ರಸನ್ನ, ಪ್ರದೀಪ್, ಪ್ರಕಾಶ್ ಅವರ ತಂಡ ಚೂರಿ ಇರಿದಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ.
ಪರಸ್ಪರ ಹೊಡೆದಾಡಿಕೊಂಡ ಯುವಕರ ತಂಡವು ಕೆಲವು ವರ್ಷಗಳ ಹಿಂದೆ ಜತೆಯಾಗಿಯೇ ಇದ್ದು, ಶಾರದೋತ್ಸವದ ವೇಳೆ ಹುಲಿವೇಷ ಹಾಕುತ್ತಿದ್ದರು. ಆದರೆ ಬಳಿಕ ತಂಡವು ಇಬ್ಭಾಗಗೊಂಡು ಎರಡು ತಂಡವಾಗಿ ಹುಲಿವೇಷ ಹಾಕುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಈ ತಂಡಗಳ ಮಧ್ಯೆ ಜಗಳ ನಡೆದಿದ್ದು, ಅ. 26ರ ರಾತ್ರಿ 9ರ ಸುಮಾರಿಗೆ ಬ್ಯಾನರ್ ತೆಗೆಯುವ ಸಂದರ್ಭ ಮತ್ತೆ ಜಗಳ ನಡೆದು ಚೂರಿ ಇರಿದುಕೊಂಡಿದ್ದಾರೆ ಎನ್ನಲಾಗಿದೆ.
ಘಟನೆಯ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.