ಹೊಸದಿಲ್ಲಿ : ಭಯೋತ್ಪಾದನೆ ವಿರುದ್ದದ ಹೋರಾಟ ಇಸ್ಲಾಂ ವಿರುದ್ಧದ ಹೋರಾಟ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ ಮತ್ತು ಭಾರತ ಭೇಟಿಯಲ್ಲಿರುವ ಜೋರ್ಡಾನ್ ದೊರೆ ಎರಡನೇ ಅಬ್ದುಲ್ಲಾ ಅವರು ಇಂದು ಗುರುವಾರ ಭಯೋತ್ಪಾದನೆ ವಿರುದ್ಧ ಜಂಟಿಯಾಗಿ ಹೋರಾಡುವ ದೃಢ ಸಂಕಲ್ಪವನ್ನು ತಳೆದರಲ್ಲದೇ ಈ ಹೋರಾಟವು ಇಸ್ಲಾಂ ಅಥವಾ ಬೇರೆ ಯಾವುದೇ ಧರ್ಮದ ವಿರುದ್ಧದ ಹೋರಾಟ ಅಲ್ಲ, ಬದಲು ಅಮಾಯಕ ಯುವಕರನ್ನು ತಪ್ಪು ದಾರಿಗೆಳೆಯುವವರ ವಿರುದ್ಧದ ಹೋರಾಟವಾಗಿದೆ ಎಂದು ಹೇಳಿದರು.
ಜಗತ್ತಿನಲ್ಲಿ ಶಾಂತಿಯನ್ನು ಪುನರ್ ಸ್ಥಾಪಿಸುವ ದಿಶೆಯಲ್ಲಿ ಭಾರತ ಮತ್ತು ಜೋರ್ಡಾನ್ ಜತೆಗೂಡಿ ಹೊಣೆಗಾರಿಕೆಯನ್ನು ಹಂಚಿಕೊಳ್ಳಲು ಉಭಯ ನಾಯಕರು ಒಪ್ಪಿಕೊಂಡರು.
ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಅವರು, “ಯುವಕರು ಇಸ್ಲಾಮಿನ ಮಾನವೀಯ ಅಂಶಗಳನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಆಧುನಿಕ ವಿಜ್ಞಾನದ ಪರಿಣಾಮಕಾರಿ ಬಳಕೆಯ ಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕು’ ಎಂದು ಕರೆ ನೀಡಿದರು. ಭಾರತವು ವಿಶ್ವದ ಎಲ್ಲ ಪ್ರಮುಖ ಧರ್ಮಗಳ ತೊಟ್ಟಿಲಾಗಿದೆ ಎಂದು ಮೋದಿ ಹೇಳಿದರು.
ಜೋರ್ಡಾನ್ ದೊರೆ ಮಾತನಾಡಿ “ಜಗತ್ತಿನ ಎಲ್ಲ ಮತಧರ್ಮಗಳು ಇಡಿಯ ಮನುಕುಲವನ್ನು ಒಗ್ಗೂಡಿಸುತ್ತವೆ’ ಎಂದು ಹೇಳಿದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ಮೋದಿ ಅವರು ಜೋರ್ಡಾನ್ ದೊರೆಯನ್ನು ಆರಂಭದಲ್ಲಿ ಬರಮಾಡಿಕೊಂಡು ಆತ್ಮೀಯ ವಿಧ್ಯುಕ್ತ ಸ್ವಾಗತ ನೀಡಿದರು.