ಹೊನ್ನಾಳಿ: ಅವಳಿ ತಾಲೂಕಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಕೋವಿಡ್ ವಿರುದ್ಧ ನಾವೆಲ್ಲರೂ ಸಮರ ಸಾರಲೇಬೇಕು ಎಂದು ತಹಶೀಲ್ದಾರ್ ತನುಜಾ ಸೌದತ್ತಿ ಹೇಳಿದರು.
ತಾಲೂಕು ಕಚೇರಿಯಲ್ಲಿ ನಡೆದ ಕೋವಿಡ್ ನಿರ್ವಹಣಾ ಸಭೆಯಲ್ಲಿ ಅವರು ಮಾತನಾಡಿದರು. ಸಾರ್ವಜನಿಕರಲ್ಲಿ ಕೋವಿಡ್ ಬಗ್ಗೆ ನಿರ್ಲಕ್ಷ್ಯ ಧೋರಣೆ ಇರುವುದರಿಂದ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಬಗ್ಗೆ ಮತ್ತಷ್ಟು ಜಾಗೃತಿ ಮೂಡಬೇಕಿದೆ. ಪ್ರತಿ ದಿನ ವಿಶೇಷವಾಗಿ ಗ್ರಾಮಾಂತರ ಪ್ರದೇಶದಲ್ಲಿ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗಂಟಲಿನ ಮಾದರಿ ಹಾಗೂ ರ್ಯಾಪಿಡ್ ಟೆಸ್ಟ್‌ಗಳನ್ನು ಹೆಚ್ಚೆಚ್ಚು ಮಾಡಬೇಕೆಂದು ಸೂಚಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ| ಕೆಂಚಪ್ಪ ಮಾತನಾಡಿ, ಅವಳಿ ತಾಲೂಕಿನಲ್ಲಿ 1972 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 317 ಪ್ರಕರಣಗಳು ಸಕ್ರಿಯವಾಗಿವೆ. ಅವರಲ್ಲಿ 54 ಜನ ಸೋಂಕಿತರು ಮೃತಪಟ್ಟಿದ್ದಾರೆ. ದಯಮಾಡಿ ತಾಲೂಕು ಮಟ್ಟದ ಅಧಿಕಾರಿಗಳು, ವಿಎ, ಪಿಡಿಒ ಸೇರಿದಂತೆ ಎಲ್ಲರೂ ಸೇರಿ ಜನರಲ್ಲಿ ಜಾಗೃತಿ ಮೂಡಿಸಿ ಕೋವಿಡ್ ಸೋಂಕು ಹೆಚ್ಚಾಗದಂತೆ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು.
ಸಿಪಿಐ ದೇವರಾಜ್ ಮಾತನಾಡಿ, ಮಾಸ್ಕ್ ಧರಿಸದ ಅವಳಿ ತಾಲೂಕಿನ 2042 ಜನರಿಗೆ 2.55 ಲಕ್ಷ ರೂ. ದಂಡ ವಿಧಿ ಸಿದ್ದೇವೆ. ಆದರೂ ಸಾರ್ವಜನಿಕರಲ್ಲಿ ಕೊರೊನಾ ವಿರುದ್ಧ ಜಾಗೃತಿ ಮೂಡದೇ ಇರುವುದು ವಿಷಾದನೀಯ. ಪೊಲೀಸರು ಪ್ರತಿದಿನ ಧ್ವನಿವರ್ಧಕದ ಮೂಲಕ ಹಾಗೂ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಪ್ರಮುಖ ಸ್ಥಳಗಳಲ್ಲಿ ಮಾಸ್ಕ್ ಧರಿಸುವಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು.
ಪಿಎಸ್‌ಐ ತಿಪ್ಪೇಸ್ವಾಮಿ, ನ್ಯಾಮತಿ ಪಿಎಸ್‌ಐ ಹನುಮಂತಪ್ಪ ಶೀರಿಹಳ್ಳಿ, ಉಪ ತಹಶೀಲ್ದಾರ್ ನಾಗರಾಜ್, ಸಿಡಿಪಿಒ ಮಹಾಂತೇಶ್ ಪೂಜಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರುದ್ರಪ್ಪ, ಸಮಾಜಕಲ್ಯಾಣ ಇಲಾಖೆ ಅ ಧಿಕಾರಿ ದೊಡ್ಡ ಬಸವರಾಜ್, ಇಸಿಒ ಮುದ್ದನಗೌಡ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂದಿನಿಂದ 15 ದಿನದವರೆಗೆ ಆಯ್ದ ಗ್ರಾಮಗಳಲ್ಲಿ ರ್ಯಾಪಿಡ್ ಮತ್ತು ಗಂಟಲಿನ ಮಾದರಿ ಪತ್ತೆ ಮಾಡಲು ಸಮಯ ಮತ್ತು ದಿನಾಂಕ ನಿಗದಿ ಮಾಡಲಾಗಿದೆ. ಇದಕ್ಕೆ ಎಲ್ಲಾ ಇಲಾಖೆ ಹಾಗೂ ಬಹು ಮುಖ್ಯವಾಗಿ ಪೊಲೀಸ್ ಇಲಾಖೆ ನಮಗೆ ಸಹಕಾರ ನೀಡಬೇಕು. –
ಡಾ| ಕೆಂಚಪ್ಪ, ತಾಲೂಕು ವೈದ್ಯಾಧಿಕಾರಿ