ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಹೆಚ್ಚಳವಾಗುತ್ತಿರುವ ಮಧ್ಯೆಯೇ ಬೆಡ್ ಬ್ಲಾಕಿಂಗ್ ಹಗರಣ ಅನಾವರಣವಾಗಿದೆ. ಅದರಲ್ಲೂ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ಶಾಸಕರಾದ ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ ಅವರು, ಕೊರೊನಾ ವಾರ್ ರೂಂಗಳ ಮೇಲೆ ದಾಳಿ ಮಾಡಿ ಬೆಡ್ ಬ್ಲಾಕಿಂಗ್ ದಂಧೆ ಅನಾವರಣ ಮಾಡಿದ್ದಾರೆ. ಒಂದು ರೀತಿಯಲ್ಲಿ ಜನಪ್ರತಿನಿಧಿಗಳು ಮಾಡಬಹುದಾದ ಒಳ್ಳೆಯ ಕೆಲಸವಿದು.
ಬೆಂಗಳೂರಿನಲ್ಲಂತೂ ಇತ್ತೀಚಿನ ದಿನಗಳಲ್ಲಿ ಕೋವಿಡ್ ರೋಗಿಗಳಿಗೆ ಬೆಡ್‌ಗಳು ಸಿಗುತ್ತಲೇ ಇಲ್ಲ. ಸ್ವತಃ ಸಚಿವರು, ಶಾಸಕರು, ಸಂಸದರು ಕರೆ ಮಾಡಿ ಬೆಡ್‌ಗಾಗಿ ಮನವಿ ಸಲ್ಲಿಸಿದರೂ ಯಾವುದೇ ಉಪಯೋಗವಾಗುತ್ತಿರಲಿಲ್ಲ. ಬೆಡ್ ಸಿಗದೇ, ವೆಂಟಿಲೇಟರ್, ಹಾಸಿಗೆ ಸಿಗದೇ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆಸ್ಪತ್ರೆಗಳಲ್ಲಿ ನಿಜಕ್ಕೂ ಇಂಥ ಸಮಸ್ಯೆ ಇದೆಯೇ ಎಂಬುದನ್ನು ಪರಿಶೀಲನೆ ಮಾಡುವ ಸಲುವಾಗಿಯೇ ತೇಜಸ್ವಿ ಸೂರ್ಯ ಮತ್ತವರ ಟೀಂ ಕೆಲಸ ಮಾಡಿತ್ತು. ಇದರಲ್ಲಿ ಬೆಡ್ ಬ್ಲಾಕಿಂಗ್ ದಂಧೆ ಕಂಡು ಬಂದಿತ್ತು. ಹೀಗಾಗಿ ದಿಢೀರನೇ ಕೋವಿಡ್ ವಾರ್ ರೂಂಗಳ ಮೇಲೆ ದಾಳಿ ಮಾಡಿ, ಬ್ಲಾಕ್ ಮಾಡಲಾಗಿದ್ದ ಬೆಡ್‌ಗಳನ್ನು ತೆರವು ಮಾಡಲಾಗಿತ್ತು.
ಈ ಘಟನೆಯ ಅನಂತರ ಇಡೀ ಪ್ರಕರಣದ ಬಗ್ಗೆ ಸಿಸಿಬಿ ತನಿಖೆ ನಡೆಸುತ್ತಿದೆ. ಆಗಲೇ ಇಬ್ಬರನ್ನು ಬಂಧಿಸಿ ವಿಚಾರಣೆಯನ್ನೂ ನಡೆಸಲಾಗಿದೆ. ಈ ಎಲ್ಲ ಘಟನಾವಳಿಗಳು ಒಂದು ರೀತಿಯಲ್ಲಿ ಸಾರ್ವಜನಿಕರಿಗೆ ಉಪಯೋಗಕ್ಕೆ ಬರುವಂಥವೇ ಆಗಿವೆ.
ರಾಜ್ಯದಲ್ಲಿ 28 ಸಂಸದರು ಮತ್ತು 224 ಮಂದಿ ಶಾಸಕರಿದ್ದಾರೆ. ಸಂಸದರು ತಮ್ಮ ಜಿಲ್ಲೆಗಳಲ್ಲಿನ ಕೊರೊನಾ ಸ್ಥಿತಿಗತಿ ಬಗ್ಗೆ ಮತ್ತು ಆಸ್ಪತ್ರೆಗಳಲ್ಲಿನ ವ್ಯವಸ್ಥೆ ಬಗ್ಗೆ ಕಣ್ಣು ಆಡಿಸಿದರೆ ಸಾಕು. ಹಾಗೆಯೇ ತಾಲೂಕುಗಳ 224 ಶಾಸಕರು ಕೂಡ ತಮ್ಮ ವ್ಯಾಪ್ತಿಯಲ್ಲಿ ಆಸ್ಪತ್ರೆಗಳು, ಬೆಡ್‌ಗಳ ಬಗ್ಗೆ ಆಗಾಗ ಪರಿಶೀಲನೆ ನಡೆಸಬೇಕು. ಜನಪ್ರತಿನಿಧಿಗಳು ತಮ್ಮ ಮೇಲೆ ಕಣ್ಣಿಟ್ಟಿದ್ದಾರೆ ಎಂಬುದು ಆಸ್ಪತ್ರೆಗಳಿಗೆ ಮತ್ತು ಹಾಸಿಗೆ ಹಂಚಿಕೆ ಮಾಡುವ ಕೊರೊನಾ ವಾರ್ ರೂಂ ಸಿಬಂದಿ ಗಮನಕ್ಕೆ ಹೋದರೆ, ಅವರು ತಪ್ಪು ಮಾಡಲಾರರು. ಇದರಿಂದ ಜನರಿಗೂ ಅನುಕೂಲವಾಗುತ್ತದೆ, ಹಾಗೆಯೇ ಜನಪ್ರತಿನಿಧಿಗಳು ನಮ್ಮೊಂದಿಗಿದ್ದಾರೆ ಎಂಬ ಭಾವನೆಯೂ ಜನರಲ್ಲಿ ಮೂಡುತ್ತದೆ.
ಇನ್ನು ಬೆಡ್‌ಬ್ಲಾಕಿಂಗ್ ದಂಧೆ ಅನಂತರ ರಾಜಕೀಯ ವಾಕ್ಸಮರವೂ ಜೋರಾಗಿದೆ. ಕೋವಿಡ್ ಸಂದರ್ಭದಲ್ಲಿ ಇಂಥ ರಾಜಕೀಯಗಳು ಯಾರಿಗೂ ಶೋಭೆ ತರುವಂಥದ್ದಲ್ಲ. ಹಾಗೆಯೇ ಸಮುದಾಯಗಳನ್ನು ಗುರಿಯಾಗಿಸಿ, ಇಂಥವರಿಂದಲೇ ಸಮಸ್ಯೆಯಾಗುತ್ತಿದೆ ಎಂದು ದೂರುವುದರಲ್ಲೂ ಅರ್ಥವಿಲ್ಲ. ಒಂದು ಜನಪ್ರತಿನಿಧಿಗಳು ಮಾಡುವ ಕೆಲಸದಿಂದ ಜನರಿಗೆ ಅನುಕೂಲವಾಗಬೇಕೇ ಹೊರತು, ಇಂಥ ಕಷ್ಟಕಾಲದಲ್ಲೂ ರಾಜಕೀಯ ಮಾಡುತ್ತಿದ್ದಾರಲ್ಲಪ್ಪ ಎಂದು ಅಸಹ್ಯ ಮೂಡಬಾರದು. ಈ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕಾದದ್ದು ಮುಖ್ಯ.
ಒಟ್ಟಾರೆಯಾಗಿ ಯಾರೇ ಒಳ್ಳೆಯ ಕೆಲಸ ಮಾಡಲಿ, ಅವರ ಬೆನ್ನು ತಟ್ಟುವ ಕೆಲಸವಾಗಬೇಕು. ಅದು ಆಡಳಿತ ಪಕ್ಷವಾಗಲಿ ಅಥವಾ ವಿಪಕ್ಷವಾಗಲಿ, ಯಾರೇ ಮಾಡಿದರೂ ಅವರಿಗೆ ಬೆಂಬಲ ನೀಡುವ ಕೆಲಸವನ್ನು ಮಾಡಬೇಕು ಅಷ್ಟೇ.