Advertisement

ಆರೋಗ್ಯ ಕೆಡಿಸುವ ಕಾರ್ಖಾನೆ ವಿರುದ್ಧ ಹೋರಾಡಿ

07:30 AM Feb 20, 2019 | Team Udayavani |

ಚಾಮರಾಜನಗರ (ಚಾಮರಾಜ ಒಡೆಯರ್‌ ವೇದಿಕೆ): ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಬಣ್ಣದ ಕಾರ್ಖಾನೆಗಳಿಂದ ಇಲ್ಲಿನ ಜನತೆಗೆ ಯಾವುದೇ ಲಾಭವಿಲ್ಲ. ಬಣ್ಣ ತಯಾರಿಸುವ ಕಾರ್ಖಾನೆಗಳು ಸ್ಥಾಪನೆಯಾದರೆ ಇದರ ವಿರುದ್ಧ ಹೋರಾಟದ ರೂಪುರೇಷೆಗೆ ಮುಂದಾಗಬೇಕು ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ. ಜಿ.ಎಸ್‌. ಜಯದೇವ ಮನವಿ ಮಾಡಿದರು.

Advertisement

ನಗರದ ಜೆ.ಎಚ್‌. ಪಟೇಲ್‌ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಏರ್ಪಡಿಸಿದ್ದ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೇ ದಿನ ನಡೆದ ಗಡಿನಾಡು, ಶಿಕ್ಷಣ, ಅಭಿವೃದ್ಧಿ ಕುರಿತ ಗೋಷ್ಠಿಯಲ್ಲಿ ವಿಷಯ ಮಂಡಿಸಿ ಅವರು ಮಾತನಾಡಿದರು.

ಚಾಮರಾಜನಗರದ ಹೊರವಲಯದ ಬದನಗುಪ್ಪೆ, ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಬಣ್ಣದ ಕಾರ್ಖಾನೆಗಳು ಬರಲಿವೆ ಎಂಬ ಮಾಹಿತಿ ಲಭ್ಯವಾಗಿದೆ. ತಮಿಳುನಾಡಿನ ಜನತೆ ಪರಿಸರಮಾಲಿನ್ಯ ಮಾಡುವ ಕಾರ್ಖಾನೆಗಳು ಬೇಡ ಎಂದು ವಿರೋಧಿಸಿ ಹೋರಾಟ ಮಾಡಿ, ಅಲ್ಲಿ ಸ್ಥಾಪನೆ ಮಾಡುವುದನ್ನು ನಿಲ್ಲಿಸಿದ್ದಾರೆ. ಈಗ ಅಂತಹ ಕಾರ್ಖಾನೆಗಳು ನಮ್ಮ ನೆಲದಲ್ಲಿ ಸ್ಥಾಪನೆಯಾದರೆ ಪರಿಸರ ಹಾನಿಯಾಗುವ ಜತೆಗೆ ಜನರ ಆರೋಗ್ಯವು ಹಾಳಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. 

ಒಂದು ದೇಶದ ಅಭಿವೃದ್ಧಿಯನ್ನು ಶಿಕ್ಷಣದಿಂದ ಅಳೆಯಲಾಗುತ್ತದೆ. ಶಿಕ್ಷಣದಲ್ಲಿ ಹಿಂದುಳಿದಿರುವ ದೇಶಗಳು ಪ್ರಗತಿಯನ್ನು ಸಾಧಿಸಿರುವುದು ಅಪರೂಪ, ತಮಗೆ ತಾವೇ ಸಹಾಯ ಮಾಡಿಕೊಳ್ಳುವಂತಹ, ಸ್ವಾವಲಂಬಿ ಜೀವನ ಕಟ್ಟಿಕೊಳ್ಳುವಂತಹ ಗಡಿನೆಲದ ವಾಸ್ತವತೆಯನ್ನು ಅರಿತು ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ ಎಂದರು.

ಅಭಿವೃದ್ಧಿ ಎಂದರೆ  ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟುವುದು, ವಿಮಾನಗಳನ್ನು ಹಾರಿಸುವುದಲ್ಲ. ಮನುಷ್ಯರಲ್ಲಿ ಮನುಷ್ಯತ್ವದ ಗುಣ ಬೆಳೆಸುವುದು, ಶಿಕ್ಷಣ ನೀಡುವುದೇ ನಿಜವಾದ ಅಭಿವೃದ್ಧಿ. ಜನರು ಹಸಿವಿನಿಂದ ನರಳುತ್ತಿದ್ದರೂ ಭಾರತ ಬೆಳಗುತ್ತಿದೆ ಎಂದು ಘೋಷಣೆ ಮಾಡುವುದು ನಾಚಿಕೆಗೇಡಿನ ಸಂಗತಿ ಎಂದರು.

Advertisement

ಲಿಂಗಾನುಪಾತ ಕುಸಿತ: ಜಿಲ್ಲೆಯಲ್ಲಿ ಸುಮಾರು 10 ಲಕ್ಷ ಜನಸಂಖ್ಯೆಯಿದ್ದು, ಕಳೆದ ಬಾರಿ ನಡೆದ ಜನಗಣತಿ ಪ್ರಕಾರ 1 ಸಾವಿರ ಪುರುಷರಿಗೆ 989 ಮಹಿಳೆಯರು ಇದ್ದು, ಲಿಂಗಾನುಪಾತವು ಕುಸಿದಿದೆ. ಜಿಲ್ಲೆಯಲ್ಲಿನ ಉಪ್ಪಾರ ಸಮಾಜದಲ್ಲಿ ಹೆಚ್ಚಾಗಿರುವ ಬಾಲ್ಯವಿವಾಹ ಪದ್ಧತಿಯಿಂದಾಗಿ ಸಮಾಜ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಸಮುದಾಯವನ್ನು ಬದಲಾವಣೆ ಮಾಡುವಂತಹ ಶಿಕ್ಷಣ ನಮ್ಮ ಶಾಲೆಗಳಲ್ಲಿ ಸಿಗಬೇಕು ಎಂದು ಅವರು ಸಲಹೆ ನೀಡಿದರು.

ಪ್ರತ್ಯೇಕತೆ ಬೇಡ: ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ಎ.ಶಿವಣ್ಣ ಮಾತನಾಡಿ, ಸಮ್ಮೇಳನಗಳು ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ತಮ್ಮದೇ ಆದ ಪಾತ್ರ ನಿರ್ವಹಿಸಬೇಕು, ಪ್ರತ್ಯೇಕತೆ ಯಾರಲ್ಲೂ ಬಾರದಂತೆ ಎಚ್ಚರವಹಿಸಬೇಕು ಎಂದರು. ಗಡಿಯಲ್ಲಿನ ಜನರು ಮಾನವ ಸಂಬಂಧಗಳನ್ನು ಬೆಳೆಸಿಕೊಳ್ಳುವತ್ತ ಗಮನ ಹರಿಸಿದರೆ ಪ್ರೀತಿ ಹುಟ್ಟುತ್ತದೆ, ಅಭಿವೃದ್ಧಿಯಾಗಲು ಸಹಾಯಕವಾಗುತ್ತದೆ ಎಂದು ಅವರು ಹೇಳಿದರು. 

ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಎಸ್‌.ಶಿವರಾಜಪ್ಪ, ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್‌.ವಿನಯ್‌, ಸಾಹಿತಿ ಕೆ.ವೆಂಕಟರಾಜು, ನಗರದ ಸರ್ಕಾರಿ ಮಹಿಳಾ ಕಾಲೇಜಿನ ಕನ್ನಡವಿಭಾಗದ ಮುಖ್ಯಸ್ಥೆ ರುಕ್ಮಿಣಿ, ಮದ್ದೂರುಚಕ್ರವರ್ತಿ ಗೋಷ್ಠಿಯಲ್ಲಿ  ಹಾಜರಿದ್ದರು.

ಜಿಲ್ಲೆಯ ಫ‌ಲವತ್ತತೆ ಕಸಿದ ಶುಂಠಿ ಬೆಳೆ: ಗಡಿಭಾಗದಲ್ಲಿ ಬೇರೆ ರಾಜ್ಯಗಳಿಂದ ಬಂದ ಶ್ರೀಮಂತರು ಶುಂಠಿ ಬೆಳೆದು, ರಸಗೊಬ್ಬರಗಳೂ, ಕೀಟನಾಶಕಗಳನ್ನು ಹೇರಳವಾಗಿ ಬಳಸಿ ಭೂಮಿಯ ಫಲವತ್ತತೆಯನ್ನು ನಾಶ ಮಾಡುತ್ತಿದ್ದಾರೆ.

ಇದಕ್ಕೆ ನಿಯಂತ್ರಣ ಏರಬೇಕು ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ. ಜಿ.ಎಸ್‌. ಜಯದೇವ ಎಚ್ಚರಿಕೆ ನೀಡಿದರು. ಸೋಲಿಗ ಬುಡಕಟ್ಟು ಜನರು ವಾಸಿಸುವ ಪೋಡುಗಳಲ್ಲಿ  ಅವ್ಯಾವತವಾಗಿ ನಡೆಯುತ್ತಿರುವ ಮದ್ಯದ ಹಾವಳಿ ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.

ಕೌಶಲ್ಯಾಧಾರಿತ ತರಬೇತಿ ಕಲಿಸಿ: ಇಂಗ್ಲಿಷ್‌ ಅನ್ನದ ಭಾಷೆ ಎನ್ನುತ್ತಾರೆ. ದೇಶದಲ್ಲಿ ಶೇ 2 ರಷ್ಟು ಮಂದಿ ಮಾತ್ರ ಇಂಗ್ಲಿಷ್‌ ಕಲಿತಿದ್ದಾರೆ. ಶೇ 10ರಷ್ಟು ಮಂದಿಗೆ ಇಂಗ್ಲಿಷ್‌ ಪರಿಜ್ಞಾನವೇ ಇಲ್ಲ. ಅಸಂಘಟಿತ ವಲಯದಲ್ಲಿ 38 ಕೋಟಿ ಕಾರ್ಮಿಕರು ಇಂಗ್ಲಿಷ್‌ ಕಲಿತೇ ಇಲ್ಲ.

ಅವರು ಸ್ವಾವಲಂಬಿಯಾಗಿ ತಮಗಿರುವ ಕೌಶಲ್ಯದಿಂದ ಜೀವನ ಸಾಗಿಸುತ್ತಿದ್ದಾರೆ. ಇಂಗ್ಲಿಷ್‌ ಅನ್ನದ ಭಾಷೆ ಎನ್ನುವುದು ತಪ್ಪು, ಅನ್ನ ದೊರಕಿಸಿಕೊಳ್ಳಬೇಕಾದರೆ ಕೌಶಲ್ಯಾಧಾರಿತ ತರಬೇತಿ ಪಡೆದರೆ ಸಾಕು ಎಂದು ಜಯದೇವ್‌ ಅಭಿಪ್ರಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next