Advertisement

Fig Fruit: ಆದಾಯ ಹೆಚ್ಚಿಸಿಕೊಂಡ ಅಂಜೂರ ಬೆಳೆಗಾರ; ಡ್ರೈ ಫ್ರುಟ್‌ನಿಂದ ಆದಾಯ ವೃದ್ಧಿ

05:59 PM Sep 04, 2023 | Team Udayavani |

ಕುಷ್ಟಗಿ: ತಾಲೂಕಿನ ಕಂದಕೂರು ಗ್ರಾಮದ ರೈತ ಶರಣಗೌಡ ಪಾಟೀಲ ಅವರು, ಅಂಜೂರ ಕೃಷಿಯಿಂದ ಹಣ್ಣು ಮಾತ್ರವಲ್ಲದೇ ಡ್ರೈ ಫ್ರುಟ್‌ ಆದಾಯ ಜೊತೆಗೆ ಗೂಟಿ ಪದ್ಧತಿಯಲ್ಲಿ ಸಸ್ಯಾಭಿವೃದ್ಧಿಯಿಂದ ಆದಾಯದ ಮೂಲ ಹೆಚ್ಚಿಸಿಕೊಂಡಿದ್ದಾರೆ.

Advertisement

ಕಂದಕೂರು ಗ್ರಾಮ ವ್ಯಾಪ್ತಿಯ 1 ಎಕರೆಯಲ್ಲಿ ಡಯಾನಾ ತಳಿಯ 250 ಅಂಜೂರ ಸಸಿಗಳನ್ನು ನಾಟಿ ಮಾಡಲಾಗಿದೆ. ಗುಂಡಿ, ಸಸಿಗಳ ಖರ್ಚು ಸೇರಿದಂತೆ ಎಕರೆಗೆ 25ರಿಂದ 30 ಸಾವಿರ ರೂ. ಖರ್ಚಾಗಿದೆ. ಹನಿ ನೀರಾವರಿ ಪದ್ಧತಿಯಾಗಿದ್ದರೆ ಹೆಚ್ಚುವರಿ 20 ಸಾವಿರ ರೂ. ವೆಚ್ಚವಾಗಲಿದೆ. ಏಳೆಂಟು ತಿಂಗಳಿಗೆ ಫಲ ಆರಂಭವಾಗುತ್ತಿದ್ದು, ಗಿಡಗಳ ಬೆಳವಣಿಗೆ ದೃಷ್ಟಿಯಿಂದ ಆರಂಭದಲ್ಲಿ
ಹಣ್ಣುಗಳನ್ನು ಒಂದು ವರ್ಷದವರೆಗೆ ಕಿತ್ತು ಹಾಕಿದ್ದಾರೆ.

ಹಣ್ಣುಗಳಿಗೆ ಹಕ್ಕಿಗಳ ಹಾವಳಿ, ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದ ಹಿನ್ನೆಲೆಯಲ್ಲಿ ಅಂಜೂರ ಹಣ್ಣಿನ ಜೊತೆಗೆ ಗೂಟಿ ಪದ್ಧತಿ ಸಸ್ಯಾಭಿವೃದ್ಧಿ ಆರಂಭಿಸಿದ್ದಾರೆ. ಪ್ರತಿ ಸೀಜನ್‌ನಲ್ಲಿ ಹಣ್ಣಿನಿಂದ ಕೆ.ಜಿ.ಗೆ 50ರಿಂದ 60 ರೂ. ಸಿಕ್ಕರೂ 50 ಸಾವಿರ ಆದಾಯ ಸಿಗುತ್ತಿದೆ. ಗಿಡಗಳು ಮೂರು ವರ್ಷದ ಬಳಿಕ ಸಸ್ಯಾಭಿವೃದ್ಧಿಗೆ ಗೂಟಿ ಪದ್ಧತಿಯಿಂದ ಎಕರೆಗೆ 1.50 ಲಕ್ಷ ರೂ.ದಿಂದ 2 ಲಕ್ಷ ರೂ. ಆದಾಯ ಸಿಗುತ್ತಿದೆ.

ಬೆರಳು ಗಾತ್ರದ 1 ಅಡಿ ಟೊಂಗೆಗೆ 2 ಗೂಟಿ ಕಟ್ಟಲು ಸಾಧ್ಯವಿದ್ದು, ಪ್ರತಿ ಗಿಡಕ್ಕೆ 80ರಿಂದ 100 ಗೂಟಿ ಕಟ್ಟಬಹುದಾಗಿದೆ. ಗೂಟಿ ಕಟ್ಟಿದ ಕಡ್ಡಿಯನ್ನು 10 ರೂ.ಗೆ ನರ್ಸರಿಯವರು, ರೈತರು ಖರೀದಿಸುತ್ತಾರೆ. ತಾವೇ ಪ್ಯಾಕೆಟ್‌ನಲ್ಲಿ ಒಂದೆರೆಡು ಅಡಿ ಬೆಳೆಸಿದರೆ 35 ರೂ. ಪ್ರತಿ ಸಸಿ ಮಾರಾಟ ಮಾಡಬಹುದಾಗಿದೆ ಎನ್ನುತ್ತಾರೆ ಶರಣಗೌಡ ಪಾಟೀಲ.

Advertisement

ಬೇಸಿಗೆಯಲ್ಲಿ ಅಂಜೂರ ಹಣ್ಣು ಮಾರಾಟ ಮಾಡಬಹುದಾಗಿತ್ತು. ಮಳೆಗಾಲದ ವೇಳೆ ಗಿಡದಲ್ಲಿಯೇ ಗೂಟಿ ಪದ್ಧತಿಯಲ್ಲಿ
ಕಸಿ ಕಟ್ಟುವಿಕೆಯಿಂದ ಸಸ್ಯಭಿವೃದ್ಧಿ ಕೈಗೊಳ್ಳಬಹುದು. ಎರೆಹುಳು ಗೊಬ್ಬರ, ಕೋಕೋಪಿಟ್‌, ಮರಳು ಮಶ್ರಿತ ಮಣ್ಣು, ಪ್ಲಾಸ್ಟಿಕ್‌ ಹಾಳೆ, ದಾರದಿಂದ ಗೂಟಿ ಕಟ್ಟಬಹುದಾಗಿದೆ. ಗೂಟಿ ಕಟ್ಟಿದ 45 ದಿನಕ್ಕೆ ಬೇರುಗಳು ಕಾಣಿಸಿಕೊಳ್ಳುತ್ತಿದ್ದು, ಬೇಡಿಕೆ ಆಧರಿಸಿ ಕಟಾವು ಮಾಡಿ ನಿರೀಕ್ಷಿತ ಆದಾಯ ಗಳಿಸಬಹುದಾಗಿದೆ.

ಬಳ್ಳಾರಿ, ಪುಣೆ ಭಾಗದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ತಾಜಾ ಹಣ್ಣುಗಳನ್ನು ಮಾತ್ರ ಮಾರಾಟ ಮಾಡಬಹುದು. ಪ್ರತಿ ಎಲೆಗೂ ಒಂದು ಹಣ್ಣು ಹಿಡಿಯುತ್ತಿದ್ದು, ನಿರಂತರ ಕಟಾವು, ನಿರಂತರ ಮಾರುಕಟ್ಟೆಗೆ ಸಾಗಿಸಬೇಕು. ಆದರೆ ಕಾರ್ಮಿಕರ ಕೊರತೆಯಿಂದ ಎಷ್ಟು ಸಾಧ್ಯವೋ ಅಷ್ಟು ಮಾರುಕಟ್ಟೆಗೆ ಉಳಿದವು ಡ್ರೈ ಫ್ರುಟ್‌ ಮಾಡಲಾಗುತ್ತದೆ. ಗಿಡದಲ್ಲಿ ಬಿಟ್ಟರೆ ಹಣ್ಣುಗಳು ಕೆಡುವುದಿಲ್ಲ. ಆದರೆ ಹಕ್ಕಿ, ಅಳಿಲು ಕಾಟದಿಂದ ಹಣ್ಣುಗಳು ಹಾಳಾಗುತ್ತಿವೆ.

ಪುಣೆ ತಳಿ ಡ್ರೈ ಫ್ರುಟ್‌ ಮಾಡಲು ಬರುವುದಿಲ್ಲ. ಹೀಗಾಗಿ ಈ ಪ್ರದೇಶಕ್ಕೆ ಒಗ್ಗುವ ಡಯಾನ್‌ ತಳಿ ಆಯ್ಕೆ ಮಾಡಿಕೊಂಡಿದ್ದು, ಹಣ್ಣು, ಡ್ರೆç ಫ್ರುಟ್‌ ಹಾಗೂ ಗೂಟಿ ಪದ್ಧತಿಯಿಂದ ಸಸ್ಯಾಭಿವೃದ್ಧಿ ಮಾಡಿ ಆದಾಯ ಸಿಗುತ್ತಿದೆ ಎನ್ನುತ್ತಾರೆ ರೈತ ಶರಣಗೌಡ ಪಾಟೀಲ.

ಅಂಜೂರ ಬರೀ ಹಣ್ಣು ಮಾರಾಟದಿಂದ ಆದಾಯ ನಿರೀಕ್ಷಿಸುವುದು ಕಷ್ಟ. ಅವುಗಳನ್ನು ವೈಜ್ಞಾನಿಕವಾಗಿ ಒಣಗಿಸಿದರೆ 5
ಕೆ.ಜಿ. ಅಂಜೂರ ಹಣ್ಣಿಗೆ 1 ಕೆ.ಜಿ. ಅಂಜೂರ ಡ್ರೈ ಫ್ರುಟ್‌ ಸಿಗುತ್ತಿದ್ದು, ಮಾರುಕಟ್ಟೆಯಲ್ಲಿ ಕೆಜಿಗೆ 700 ದಿಂದ 800 ರೂ. ಸಿಗಲಿದೆ. ಮೂರು ವರ್ಷದ ಗಿಡಗಳಿಗೆ ಗೂಟಿ ಕಟ್ಟುವುದರಿಂದ ಸಸ್ಯಾಭಿವೃದ್ಧಿಯಿಂದ 2 ಲಕ್ಷ ರೂ. ಆದಾಯ ಸಾಧ್ಯವಿದೆ.
*ಶರಣಗೌಡ ಪೊಲೀಸಪಾಟಿಲ,
ಕಂದಕೂರು ಅಂಜೂರ ಕೃಷಿಕ

*ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next