ಮುಂಬಯಿ: ಹೊಸದಿಲ್ಲಿಯಲ್ಲಿ ನಡೆದಿದ್ದ ತಬ್ಲೀಘಿ ಸಮಾವೇಶಕ್ಕೆ ಹೋಗಿದ್ದ ಮಹಾರಾಷ್ಟ್ರದ 1,400 ಮಂದಿಯ ಪೈಕಿ 50 ಮಂದಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಗೃಹ ಸಚಿವ ಅನಿಲ್ ದೇಶ್‌ಮುಖ್ ಮಂಗಳವಾರ ಮಾಹಿತಿ ನೀಡಿದ್ದಾರೆ.
‘ನಿಜಾಮುದ್ದೀನ್ ಸಮಾವೇಶಕ್ಕೆ ಹೋಗಿ ಬಂದವರು ಸ್ವಯಂ ಪ್ರೇರಿತರಾಗಿ ಬಂದು ಸರಕಾರಕ್ಕೆ ತಮ್ಮ ಪ್ರಯಾಣದ ವಿವರಗಳನ್ನು ತಿಳಿಸಬೇಕು. ವಿವರ ತಿಳಿಸಿದವರನ್ನು ಕೆಲ ದಿನಗಳ ಮಟ್ಟಿಗೆ ನಿರ್ಬಂಧ ಕೇಂದ್ರಗಳಿಗೆ ರವಾನಿಸಿ ಪರೀಕ್ಷೆ ನಡೆಸಲಾಗುತ್ತದೆ. ಇದರಿಂದ ಅವರಿಗೂ ಒಳ್ಳೆಯದು, ಸಮಾಜಕ್ಕೂ ಒಳ್ಳೆಯದು. ಆದರೆ, ಸರಕಾರಕ್ಕೆ ವರದಿ ಸಲ್ಲಿಸದಿದ್ದರೆ ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು. ಇದೇ ವೇಳೆ ಪ್ರಯಾಣದ ಮಾಹಿತಿ ನೀಡದೆ ಇದ್ದ 150 ಮಂದಿ ವಿರುದ್ಧ ಮುಂಬಯಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಉ.ಪ್ರ.ದಲ್ಲೂಎಫ್ಐಆರ್: ಸಮಾವೇಶಕ್ಕೆ ಹೋಗಿ ಬಂದಿದ್ದನ್ನು ಮುಚ್ಚಿಟ್ಟ ಕಾರಣ ಉತ್ತರ ಪ್ರದೇಶದ ಚಿತ್ರಕೂಟ ರೇಂಜ್‌ನ 36 ನಿವಾಸಿಗಳ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ. ಇದೇ ವೇಳೆ ಉ.ಪ್ರ.ದ ಭಾಗ್ವತ್‌ನಿಂದ ಸಮಾವೇಶದಲ್ಲಿ ಭಾಗವಹಿಸಿದ ವ್ಯಕ್ತಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
ಕ್ವಾರೆಂಟೈನ್ ನಲ್ಲಿರುವ ತಬ್ಲಿಘಿಗಳಿಂದ ಮತ್ತೆ ಅನುಚಿತ ವರ್ತನೆ
ಹೊಸದಿಲ್ಲಿಯ ನರೇಲಾ ಪ್ರಾಂತ್ಯದಲ್ಲಿರುವ ನಿರ್ಬಂಧಿತ ಕೇಂದ್ರದಲ್ಲಿ ದಾಖಲಾಗಿದ್ದ ತಬ್ಲೀಘಿ ಸಂಘಟನೆಯ ಇಬ್ಬರು ಸದಸ್ಯರು, ತಾವಿರುವ ಕೊಠಡಿಯಲ್ಲಿಯೇ ಮಲ ವಿಸರ್ಜಿಸಿದ್ದಾರೆ. ಅವರ ವಿರುದ್ಧ ಕೇಸು ದಾಖಲಿಸಲಾಗಿದೆ.
ಎನ್‌ಬಿಎ ಕಳವಳ: ತಬ್ಲೀಘಿ ಸಮಾವೇಶಕ್ಕೆ ಹೋಗಿ ಬಂದವರಿಂದ ಕೋವಿಡ್ ಸೋಂಕು ಅಗಾಧ ಪ್ರಮಾಣದಲ್ಲಿ ಹರಡಿದ್ದನ್ನು ಪ್ರಕಟಿಸಿದ ಸುದ್ದಿ ವಾಹಿನಿಗಳ ಸುದ್ದಿ ವಾಚಕರಿಗೆ ಹಾಗೂ ವರದಿಗಾರರಿಗೆ ಬೆದರಿಕೆ ಬರುತ್ತಿರುವ ಬಗ್ಗೆ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ