Advertisement

ಮಳೆಗೆ ಹದಿನೈದು ಮರಗಳು ಧರೆಗೆ

11:34 AM Apr 21, 2017 | Team Udayavani |

ಬೆಂಗಳೂರು: ನಗರದ ಕೆಲವು ಪ್ರದೇಶಗಳಲ್ಲಿ ಗುರುವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಹದಿನೈದಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು ಕೆಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನಗರದ ಮೆಜೆಸ್ಟಿಕ್‌, ರೇಸ್‌ಕೋರ್ಸ್‌ ರಸ್ತೆ, ಬಸವೇಶ್ವರನಗರ, ಕೆಂಗೇರಿ ಸೇರಿದಂತೆ ವಿವಿಧೆಡೆ ಗಾಳಿಸಹಿತ ಮಳೆಯಾಗಿದ್ದು, ಆರು ಮರಗಳು ಮತ್ತು 12 ಮರದ ಕೊಂಬೆಗಳು ಮುರಿದುಬಿದ್ದವು. ಇದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿ ವಾಹನಸವಾರರು ಪರದಾಡುವಂತಾಯಿತು.  

Advertisement

ಸಂಜೆ 3.30ರಿಂದ 6.30 ಅವಧಿಯಲ್ಲಿ ಮಳೆ ಸುರಿದ ಕಾರಣ ಕೆಲಸ ಮುಗಿಸಿ ಮನೆಗಳತ್ತ ಹೊರಟಿದ್ದವರು ಮಳೆಯಲ್ಲಿ ಸಿಲುಕಿಕೊಂಡರು. ಬೈಕ್‌ ಸವಾರರು ಮಳೆಯಲ್ಲಿ ತೊಯ್ದುತೊಪ್ಪೆಯಾದರು. ಮರ ಮತ್ತು ಮರದ ರೆಂಬೆಗಳು ಬಿದ್ದ ಕಡೆಗಳಲ್ಲಿ ವಾಹನಗಳು ಪರ್ಯಾಯ ಮಾರ್ಗಗಳತ್ತ ಮುಖಮಾಡಿದ್ದರಿಂದ ವಾಹನದಟ್ಟಣೆ ಎಂದಿಗಿಂತ ತುಸು ಹೆಚ್ಚಿತ್ತು. ಬಸ್‌ಗಳ ಕಾರ್ಯಾಚರಣೆಯಲ್ಲೂ ವಿಳಂಬವಾಯಿತು. ಇದರಿಂದ ಪ್ರಯಾಣಿಕರಿಗೂ ಇದರ ಬಿಸಿತಟ್ಟಿತು.

ಕೊಟ್ಟಿಗೆಪಾಳ್ಯ, ಆರ್‌.ಆರ್‌. ನಗರದ ಎಚ್‌ಎಂಟಿ ವಾರ್ಡ್‌, ಹಂಪಿನಗರ, ಕೊಡಿಗೇಹಳ್ಳಿ, ಮೆಜೆಸ್ಟಿಕ್‌ ಮತ್ತಿತರ ಕಡೆಗಳಲ್ಲಿ 13ರಿಂದ 18 ಮೀ.ಮೀ. ಮಳೆ ದಾಖಲಾಗಿದೆ. ಬಸವೇಶ್ವರನಗರದ 4 ಮತ್ತು ವಿಜಯನಗರ 3 ಕಡೆ ಸೇರಿದಂತೆ ಬಿಎನ್‌ಎಸ್‌ ಕಾಲೇಜು, ಎನ್‌.ಆರ್‌. ಕಾಲೊನಿ, ಬಸವನಗುಡಿ, ಸುಂಕದಕಟ್ಟೆ ಪೈಪ್‌ಲೈನ್‌, ನಾಗರಬಾವಿ, ರಾಜಕುಮಾರ್‌ ಸಮಾಧಿ ಬಳಿ, ಎಂ.ಸಿ. ಲೇಔಟ್‌, ಎಚ್‌ಎಎಲ್‌ ಮೂರನೇ ಹಂತ, ಶ್ರೀನಗರ, ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್‌ ನಿಲ್ದಾಣ ಬಳಿ ಮರ ಮತ್ತು ಮರದ ಕೊಂಬೆಗಳು ಬಿದ್ದ ಬಗ್ಗೆ ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next