ಪ್ಯಾರಿಸ್: ಫಿಫಾ ವರ್ಲ್ಡ್ ಕಪ್ ನಲ್ಲಿ 36 ವರ್ಷದ ಬಳಿಕ ಮೆಸ್ಸಿ ನಾಯಕತ್ವದ ಆರ್ಜೆಂಟೀನಾ ತಂಡ ಫ್ರಾನ್ಸ್ ತಂಡದ ವಿರುದ್ಧ ಐತಿಹಾಸಿ ಜಯ ಸಾಧಿಸಿದೆ. ರೋಚಕ ಪಂದ್ಯ ಪೆನಾಲ್ಟಿ ಶೂಟೌಟ್‌ನಲ್ಲಿ ಆರ್ಜೆಂಟೀನಾ 4-2 ಅಂತರದಿಂದ ಜಯಭೇರಿ ಮೊಳಗಿಸುವುದರೊಂದಿಗೆ ಫುಟ್‌ಬಾಲ್ ಸಾಮ್ರಾಜ್ಯವನ್ನು 3ನೇ ಬಾರಿಗೆ ಆಳುವ ಹಕ್ಕು ಪಡೆಯಿತು.
ಕೈಲಿಯನ್ ಎಂಬಪೆ ಹ್ಯಾಟ್ರಿಕ್ ಗೋಲು ದಾಖಲಿಸಿದರೂ ಸೋತ ಫ್ರಾನ್ಸ್ ತಂಡದ ವಿರುದ್ಧ, ಪ್ಯಾರಿಸ್ ನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಫುಟ್ ಬಾಲ್ ಅಭಿಮಾನಿಗಳು ಹೆಚ್ಚಿರುವ ಫ್ರಾನ್ಸ್ ನಲ್ಲಿ ತನ್ನ ತಂಡ ಸೋತ ಹಿನ್ನೆಲೆಯಲ್ಲಿ ಅಭಿಮಾನಿಗಳು ನಗರದ ಬೀದಿಯಲ್ಲಿ ರಂಪಾಟ ನಡೆಸಿದ್ದಾರೆ.
ಪ್ಯಾರಿಸ್ ನ ನೈಸ್ ಮತ್ತು ಲಿಯಾನ್ ಬೀದಿಗಳಲ್ಲಿ ಸಾವಿರಾರು ಫುಟ್ ಬಾಲ್ ಅಭಿಮಾನಿಗಳು ಅನಾವಶ್ಯಕವಾಗಿ ಗಲಭೆ ಎಬ್ಬಿಸಿದ್ದಾರೆ. ಪ್ರತಿಭಟನಾನಿರತ ಅಭಿಮಾನಿಗಳು ಪೊಲೀಸ್ ಸಿಬ್ಬಂದಿಗಳ ಮೇಲೆ ಬಾಟಲಿ, ಕಲ್ಲು ಹಾಗೂ ಪಟಾಕಿಗಳನ್ನು ಎಸೆದು ದಾಂಧಲೆ ನಡೆಸಿದ್ದಾರೆ. ಇದಲ್ಲದೆ ಮಹಿಳೆಯೊಬ್ಬರ ಮೇಲೆ ಹಲ್ಲೆಯನ್ನೂ ಮಾಡಲಾಗಿದೆ.
ಆಕ್ರೋಶಿತ ಗುಂಪನ್ನು ಚದುರಿಸಲು ಪೊಲೀಸರು ಆಶ್ರುವಾಯುಗಳನ್ನು ಪ್ರಯೋಗಿಸಿದ್ದಾರೆ. ನಗರದೆಲ್ಲೆಡೆ ಮುಂಜಾಗ್ರತ ಕ್ರಮವಾಗಿ 14 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಗಲಭೆಯನ್ನು ನಿಯಂತ್ರಿಸಿದ ಬಳಿಕ ಪೊಲೀಸರು ಈ ಸಂಬಂಧ ಹತ್ತಾರು ಮಂದಿಯನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.
ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.