ಹೊಸದಿಲ್ಲಿ: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಫಿಫಾ ಅಂಡರ್-17 ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ನಾಕಟೌ ಪ್ರವೇಶಿಸಿದ ಮೊದಲ ತಂಡವೆಂಬ ಹಿರಿಮೆ ಅಮೆರಿಕದ್ದಾಗಿದೆ. ಸೋಮವಾರ ಇಲ್ಲಿನ “ಜವಾಹರಲಾಲ್ ನೆಹರೂ ಸ್ಟೇಡಿಯಂ’ನಲ್ಲಿ ನಡೆದ “ಎ’ ವಿಭಾಗದ ಮೇಲಾಟದಲ್ಲಿ ಅದು ಘಾನಾವನ್ನು ಏಕೈಕ ಗೋಲಿನಿಂದ ಮಣಿಸಿತು.
ಇನ್ನೇನು ಅಮೆರಿಕ-ಘಾನಾ ನಡುವಿನ ಪಂದ್ಯ ಗೋಲಿಲ್ಲದೆ ಡ್ರಾನಲ್ಲಿ ಮುಗಿಯುತ್ತೆನ್ನುವಾಗಲೇ ಬದಲಿ ಆಟಗಾರನಾಗಿ ಬಂದ ಅಯೊ ಅಕಿನೋಲ 75ನೇ ನಿಮಿಷದಲ್ಲಿ ಬಾರಿಸಿದ ಆಕರ್ಷಕ ಗೋಲು ಅಮೆರಿಕಕ್ಕೆ ಅದೃಷ್ಟವನ್ನು ತಂದಿತ್ತಿತು. ಘಾನಾ ಹೋರಾಟ ವ್ಯರ್ಥವಾಯಿತು.
ಈ ಮೇಲಾಟದಲ್ಲಿ ಘಾನಾದ ಆರಂಭ ಅತ್ಯಂತ ಬಿರುಸಿನಿಂದ ಕೂಡಿತ್ತು. ಆಕ್ರಮಣಕಾರಿಯೇ ಆಟಲಾರಂಭಿಸಿ ಎದುರಾಳಿ ಕೋಟೆಗೆ ಲಗ್ಗೆ ಇಡುತ್ತಲೇ ಸಾಗಿತು. ಅಮೆರಿಕದ ಹೋರಾಟ ಕಾವೇರುವಾಗ ಸಾಕಷ್ಟು ಹೊತ್ತು ಕಳೆದಿತ್ತು. ಆದರೆ ಒಮ್ಮೆ ಆಕ್ರಮಣಕ್ಕಿಳಿದ ಬಳಿಕ ಅಮೆರಿಕ ಮತ್ತೆ ಹಿಂತಿರುಗಿ ನೋಡಲಿಲ್ಲ.
ಇದರೊಂದಿಗೆ ಅಮೆರಿಕ ಆಡಿದ ಎರಡೂ ಪಂದ್ಯಗಳನ್ನು ಗೆದ್ದಂತಾಗಿದೆ. ಮೊದಲ ಪಂದ್ಯದಲ್ಲಿ ಅದು ಆತಿಥೇಯ ಭಾರತವನ್ನು 3-0 ಗೋಲುಗಳಿಂದ ಮಣಿಸಿತ್ತು. ಘಾನಾ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಕೊಲಂಬಿಯಾವನ್ನು 1-0 ಅಂತರದಿಂದ ಹಿಮ್ಮೆಟ್ಟಿಸಿತ್ತು. ಘಾನಾ ಇನ್ನು ಭಾರತದ ವಿರುದ್ಧ ಆಡಲಿಕ್ಕಿದೆ. ಅಮೆರಿಕ ಪಡೆ ಕೊಲಂಬಿಯಾ ವಿರುದ್ಧ ಸೆಣಸಲಿದೆ. ಈ ಪಂದ್ಯಗಳು ಅ. 12ರಂದು ನಡೆಯಲಿವೆ.
ಮಾಲಿ 3-0 ಮೆರೆದಾಟ
ಮುಂಬಯಿಯಲ್ಲಿ ನಡೆದ “ಬಿ’ ವಿಭಾಗದ ಪಂದ್ಯದಲ್ಲಿ ಮಾಲಿ 3-0 ಅಂತರದಿಂದ ಟರ್ಕಿಯನ್ನು ಮಣಿಸಿತು. ಪರಗ್ವೆ ವಿರುದ್ಧ ಪರಾಭವಗೊಂಡಿದ್ದ ಮಾಲಿಗೆ ಇದು ಮೊದಲ ಜಯ. ಟರ್ಕಿ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 1-1 ಡ್ರಾ ಸಾಧಿಸಿತ್ತು.