ದೋಹಾ: ಸೋಮವಾರ ಭರ್ಜರಿಯಾಗಿ ಸಾಗಿದ ಕ್ಯಾಮೆರೂನ್-ಸೆರ್ಬಿಯಾ ನಡುವಿನ ವಿಶ್ವಕಪ್ ಫುಟ್‌ಬಾಲ್ ಪಂದ್ಯದಲ್ಲಿ ಗೋಲುಗಳ ಸುರಿಮಳೆಯಾಗಿದೆ. ಆದರೆ ಎರಡೂ ತಂಡಗಳು 3-3 ಗೋಲು ಬಾರಿಸಿದ್ದರಿಂದ ಯಾರಿಗೂ ಗೆಲುವು ಸಾಧಿಸಲಾಗಲಿಲ್ಲ. ಇತ್ತಂಡಗಳಿಗೆ ಅಂಕದ ಖಾತೆ ತೆರೆಯಲು ಈ ಫಲಿತಾಂಶ ನೆರವಾಯಿತು,
ಅಷ್ಟೇ. ಈ ಪಂದ್ಯದಲ್ಲಿ ಯಾವುದಾದರೂ ಒಂದು ತಂಡ ಗೆಲುವು ಸಾಧಿಸಿದ್ದರೆ ಅಂಕಪಟ್ಟಿಯಲ್ಲಿ ಜಿಗಿತ ಸಾಧಿಸುತ್ತಿದ್ದವು. ಆದರೆ ಹಾಗಾಗಲಿಲ್ಲ.
“ಜಿ’ ವಿಭಾಗದ ತಂಡಗಳಾದ ಕ್ಯಾಮೆರೂನ್ ಮತ್ತು ಸೆರ್ಬಿಯ ತಮ್ಮ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದವು. ಇಲ್ಲಿ ಒಂದೊಂದು ಅಂಕ ಗಳಿಸಿದ್ದರಿಂದ ನಾಕೌಟ್ ರೇಸ್‌ನಲ್ಲಿ ಉಳಿದುಕೊಂಡಿವೆ. ಇದೇ ವಿಭಾಗದ ಬಲಿಷ್ಠ ತಂಡಗಳಾದ ಬ್ರೆಝಿಲ್ ಮತ್ತು ಸ್ವಿಜರ್ಲೆಂಡ್ ಆಡಿದ ಮೊದಲ ಪಂದ್ಯವನ್ನು ಗೆದ್ದು ತಲಾ 3 ಅಂಕ ಸಂಪಾದಿಸಿವೆ. ಈ ಎರಡು ತಂಡಗಳನ್ನು ದಾಟಿ ಕ್ಯಾಮೆರೂನ್, ಸೆರ್ಬಿಯಗಳು ಮುನ್ನಡೆ ಸಾಧಿಸಲು ಸಾಧ್ಯವೇ ಎಂಬುದೊಂದು ಕೌತುಕ.
ತಿರುಗಿ ಬಿದ್ದ ಕ್ಯಾಮೆರೂನ್: ಆಫ್ರಿಕಾದ ಪ್ರಬಲ ತಂಡವೆಂದೇ ಗುರುತಿಸಲ್ಪಡುವ ಕ್ಯಾಮೆರೂನ್ ವಿರಾಮದ ವೇಳೆ 1-2 ಅಂತರದ ಹಿನ್ನಡೆಯಲ್ಲಿತ್ತು. ಆದರೆ 55ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಕಣಕ್ಕೆ ಇಳಿದ ವಿನ್ಸೆಂಟ್ ಅಬೂಬಕರ್ ಪಂದ್ಯಕ್ಕೆ ತಿರುವು ಒದಗಿಸಲು ಯಶಸ್ವಿಯಾದರು. ಪಂದ್ಯದ 63ನೇ ನಿಮಿಷದಲ್ಲಿ ಕ್ಯಾಮೆರೂನ್ ಪರ 2ನೇ ಗೋಲು ಸಿಡಿಸಿ ಆಟಗಾರರನ್ನು ಹುರಿದುಂಬಿಸಿದರು. ಮೂರೇ ನಿಮಿಷದಲ್ಲಿ ಎರಿಕ್ ಮ್ಯಾಕ್ಸಿಮ್ ಚೌಪೊ ಮೋಟಿಂಗ್ ಇನ್ನೊಂದು ಗೋಲು ಬಾರಿಸಿ ಪಂದ್ಯವನ್ನು ಸಮಬಲಕ್ಕೆ ತಂದು ನಿಲ್ಲಿಸಿದರು. ಇದೇ ಅಂತಿಮ ಫಲಿತಾಂಶವಾಯಿತು.
ಈ ಮುಖಾಮುಖಿಯಲ್ಲಿ ಗೋಲಿನ ಖಾತೆ ತೆರೆದದ್ದೇ ಕ್ಯಾಮೆರೂನ್. 29ನೇ ನಿಮಿಷದಲ್ಲಿ ಜೀನ್ ಚಾರ್ಲ್ಸ್ ಕ್ಯಾಸ್ಟಲೆಟೊ ಈ ಗೋಲು ದಾಖಲಿಸಿದರು. ಆದರೆ ವಿರಾಮದ ಹೊತ್ತಿಗೆ ಸರಿಯಾಗಿ ಸೆರ್ಬಿಯದ ಸ್ಟ್ರಾಹಿಂಜ ಪಾವ್ಲೋವಿಕ್ ಮತ್ತು ಸಗೇìಯಿ ಮಿಲಿನ್ಕೋವಿಕ್ ಸಾವಿಕ್ ಎರಡೇ ನಿಮಿಷಗಳ ಅಂತರದಲ್ಲಿ 2 ಗೋಲು ಬಾರಿಸಿ ಭರ್ಜರಿ ಮುನ್ನಡೆ ತಂದಿತ್ತರು. ವಿರಾಮ ಕಳೆದು ಎಂಟೇ ನಿಮಿಷದಲ್ಲಿ ಸೆರ್ಬಿಯ ಕಡೆಯಿಂದ 3ನೇ ಗೋಲು ದಾಖಲಾಯಿತು. ಕ್ಯಾಮೆರೂನ್‌ಗೆ 53ನೇ ನಿಮಿಷದಲ್ಲಿ ಈ ಆಘಾತ ಕೊಟ್ಟವರು ಅಲೆಕ್ಸಾಂಡ್ರ ಮಿಟ್ರೋವಿಕ್. ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿವೆ. ಇತ್ತಂಡಗಳಿಗೂ ತಾಲ ಒಂದು ಪಂದ್ಯ ಬಾಕಿಯಿದೆ. ಇಲ್ಲಿನ ಫಲಿತಾಂಶವೇ ನಿರ್ಣಾಯಕವಾಗಬಹುದು.