Advertisement

ಫಿಫಾ ವಿಶ್ವಕಪ್‌: ವೇಲ್ಸ್‌ಗೆ ನೀರು ಕುಡಿಸಿದ ಮಾರ್ಕಸ್‌ ರಶ್‌ಫೋರ್ಡ್‌

11:58 PM Nov 30, 2022 | Team Udayavani |

ಅಲ್‌ ರಯಾನ್‌: ಫಿಫಾ ವಿಶ್ವಕಪ್‌ ಪಂದ್ಯಾವಳಿಯಲ್ಲಿ “ಬಿ’ ವಿಭಾಗದ ನಾಕೌಟ್‌ ಲೆಕ್ಕಾಚಾರ ಅಂತಿಮಗೊಂಡಿದೆ. ಇಂಗ್ಲೆಂಡ್‌ ಮತ್ತು ಅಮೆರಿಕ ತಂಡಗಳು ನಾಕೌಟ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿವೆ.

Advertisement

ಕಳೆದ ರಾತ್ರಿ ಏಕಕಾಲಕ್ಕೆ ನಡೆದ ಪಂದ್ಯಗಳಲ್ಲಿ ಇಂಗ್ಲೆಂಡ್‌ 3-0 ಅಂತರದಿಂದ ವೇಲ್ಸ್‌ಗೆ ನೀರು ಕುಡಿಸಿದರೆ, ಅಮೆರಿಕ ಏಕೈಕ ಗೋಲಿ ನಿಂದ ಇರಾನ್‌ ಆಟವನ್ನು ಕೊನೆಗೊಳಿಸಿತು. ಇಂಗ್ಲೆಂಡ್‌ 7, ಅಮೆರಿಕ 5 ಅಂಕಗಳೊಂದಿಗೆ ಲೀಗ್‌ ವ್ಯವಹಾರ ಮುಗಿಸಿದವು.

ಪ್ರಿ-ಕ್ವಾರ್ಟರ್‌ ಫೈನಲ್‌ನಲ್ಲಿ ಇಂಗ್ಲೆಂಡ್‌- ಸೆನೆಗಲ್‌, ನೆದರ್ಲೆಂಡ್ಸ್‌-ಅಮೆರಿಕ ಮುಖಾ ಮುಖೀ ಆಗಲಿವೆ.

ರಶ್‌ಫೋರ್ಡ್‌ ದಾಳಿ
ಇಂಗ್ಲೆಂಡ್‌ ತಂಡದ ಗೆಲುವಿನ ರೂವಾರಿಯಾಗಿ ಮೂಡಿಬಂದವರು ಮಾರ್ಕಸ್‌ ರಶ್‌ಫೋರ್ಡ್‌. ಅವರು 50ನೇ ಹಾಗೂ 68ನೇ ನಿಮಿಷದಲ್ಲಿ ಗೋಲು ಸಿಡಿಸಿದರು. ರಶ್‌ಫೋರ್ಡ್‌ ಮೊದಲ ಗೋಲು ಬಾರಿಸಿದ ಒಂದೇ ನಿಮಿಷದಲ್ಲಿ ಫಿಲ್‌ ಫೋಡೆನ್‌ ಸಿಡಿದರು. ಇಂಗ್ಲೆಂಡ್‌ 2-0 ಮುನ್ನಡೆ ಸಾಧಿಸಿತು. ವೇಲ್ಸ್‌ಗೆ ಗೋಲು ಬಾರಿಸುವ ಯಾವ ಅವಕಾಶವೂ ಎದುರಾಗಲಿಲ್ಲ. ಇದರೊಂದಿಗೆ ವೇಲ್ಸ್‌ 64 ವರ್ಷ ಗಳ ಬಳಿಕ ಫಿಫಾ ವಿಶ್ವಕಪ್‌ ಗ್ರೂಪ್‌ ವಿಭಾಗದಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯಿತು.

ಮ್ಯಾಂಚೆಸ್ಟರ್‌ ಯುನೈಟೆಡ್‌ನ‌ ಫಾರ್ವರ್ಡ್‌ ಆಟಗಾರನಾಗಿರುವ ಮಾರ್ಕಸ್‌ ರಶ್‌ಫೋರ್ಡ್‌ ಅವರ 2ನೇ ಗೋಲು ಫಿಫಾ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ಇತಿಹಾಸದ 100ನೇ ಗೋಲಾಗಿ ದಾಖಲಾಯಿತು. ಹಾಗೆಯೇ 1966ರ ಬಳಿಕ ವಿಶ್ವಕಪ್‌ ಪಂದ್ಯಾವಳಿಯಲ್ಲಿ 3 ಗೋಲು ಬಾರಿಸಿದ ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡದ ಮೊದಲ ಆಟಗಾರನೆಂಬ ಹಿರಿಮೆಯನ್ನೂ ಒಲಿಸಿ ಕೊಂಡರು.

Advertisement

72ನೇ ನಿಮಿಷದಲ್ಲಿ ರಶ್‌ಫೋರ್ಡ್‌ಗೆ
ಹ್ಯಾಟ್ರಿಕ್‌ ಸಾಧಿಸುವ ಉಜ್ವಲ ಅವಕಾಶವೊಂದಿತ್ತು. ಆದರೆ ವೇಲ್ಸ್‌ ಕೀಪರ್‌ ಡೇನಿಯಲ್‌ ವಾರ್ಡ್‌ ಇದನ್ನು ಅಮೋಘ ರೀತಿಯಲ್ಲಿ ತಡೆದರು.

 

 

Advertisement

Udayavani is now on Telegram. Click here to join our channel and stay updated with the latest news.

Next