ಕೊಚ್ಚಿ: ಯುರೋಪಿಯನ್ ಚಾಂಪಿಯನ್ ಸ್ಪೇನ್ ಮಂಗಳವಾರ ಗೆಲ್ಲಲೇಬೇಕಾದ ಒತ್ತಡದೊಂದಿಗೆ ನೈಗರ್ ವಿರುದ್ಧ ಕಣಕ್ಕಿಳಿಯಲಿದೆ. ಇನ್ನೊಂದೆಡೆ, ಇದೇ ಮೊದಲ ಸಲ ಅಂಡರ್-17 ವಿಶ್ವಕಪ್ ಫುಟ್‌ಬಾಲ್ ಆಡುತ್ತಿರುವ ನೈಗರ್ “ಡಿ’ ವಿಭಾಗದ ಕಪ್ಪು ಕುದುರೆಯಾಗಿ ಗೋಚರಿಸುತ್ತಿದೆ.
ಕೊಚ್ಚಿಯಲ್ಲೇ ನಡೆದ ಮೊದಲ ಪಂದ್ಯದಲ್ಲಿ ಸ್ಪೇನ್ ಸೇನೆ ಜರ್ಮನಿಗೆ 1-2 ಗೋಲುಗಳಿಂದ ಸೋತಿತ್ತು. ಆದರೆ ನೈಗರ್ ತಂಡ ಕೊರಿಯಾವನ್ನು ಏಕೈಕ ಗೋಲಿನಿಂದ ಮಣಿಸಿ ಅಚ್ಚರಿಗೆ ಕಾರಣವಾಗಿತ್ತು. ಮಂಗಳವಾರವೂ ಇಂಥದೊಂದು ಅಚ್ಚರಿಯ ಫಲಿತಾಂಶ ದಾಖಲಾದರೆ ನೈಗರ್ ನೇರವಾಗಿ ದ್ವಿತೀಯ ಸುತ್ತಿಗೆ ಲಗ್ಗೆ ಇಡಲಿದೆ!
ಬಲಿಷ್ಠ ಜರ್ಮನಿ ವಿರುದ್ಧ ಸ್ಪೇನಿನ ಆರಂಭ ಚೇತೋಹಾರಿಯಾಗಿಯೇ ಇತ್ತು. ಪಂದ್ಯದ ಮೊದಲ ಗೋಲು ದಾಖಲಿಸುವ ಮೂಲಕ ಮೇಲುಗೈ ಸಾಧಿಸಿತ್ತು. ಆದರೆ ಬಳಿಕ 2 ಗೋಲುಗಳಿಗೆ ಹಾದಿ ಕಲ್ಪಿಸಿ ಶರಣಾಗತಿ ಸಾರಿತು.ಹೆಸರಾಂತ ಲಾ ಮಾಸಿಯ ಅಕಾಡೆಮಿಯ ಐವರು, ರಿಯಲ್ ಮ್ಯಾಡ್ರಿಡ್ ಅಕಾಡೆಮಿಯ ನಾಲ್ವರು ಆಟಗಾರರನ್ನು ಹೊಂದಿರುವ ಸ್ಪೇನ್ ಬಲಿಷ್ಠ ತಂಡ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಬ್ರಝಿಲ್ ವಿರುದ್ಧ ಹೋರಾಡುವಾಗ ಇವರಿಗೆಲ್ಲ ಕೊಚ್ಚಿಯ ಬಿಸಿಯನ್ನು ನಿಭಾಯಿಸುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಇದರಿಂದ ಎಂದಿನ “ಟಿಕಿ-ಟಾಕ’ ಶೈಲಿಯ ಆಟವಾಡಲು ಸಾಧ್ಯವಾಗಲಿಲ್ಲ. ನಾಯಕ ಅಬೆಲ್ ರಿಝ್, ಯುವ ಸ್ಟ್ರೈಕರ್ ಫರಾನ್ ಟೊರೆಸ್ ಅವರೆಲ್ಲ ಸಹಜ ಆಟಕ್ಕೆ ಕುದುರಿಕೊಂಡರೆ ಸ್ಪೇನ್ ಗೆಲುವಿನ ಖಾತೆ ತೆರೆಯಬಹುದು. ರಿಝ್ ಅತ್ಯಂತ ಆಕ್ರಮಣಕಾರಿ ಶೈಲಿಯ ಆಟಗಾರನಾಗಿದ್ದು, ಇತ್ತೀಚೆಗಷ್ಟೇ ಮುಗಿದ ಅಂಡರ್-17 ಯೂರೋ ಕಪ್ ಪಂದ್ಯಾವಳಿಯಲ್ಲಿ 16 ಗೋಲು ಸಿಡಿಸಿ ದಾಖಲೆ ಬರೆದ ಖ್ಯಾತಿ ಹೊಂದಿದ್ದಾರೆ.
ನೈಗರ್, ಆಫ್ರಿಕನ್ ಟೈಗರ್!
ಆಫ್ರಿಕಾದ ನೈಗರ್ ಮೊದಲ ಪಂದ್ಯದಲ್ಲೇ ಗೆಲುವಿನ ಆಟವಾಡಿದ ಉತ್ಸಾಹದಲ್ಲಿದೆ. 5 ಬಾರಿಯ ಅಂಡರ್-17 ವಿಶ್ವ ಚಾಂಪಿಯನ್ ನೈಜೀರಿಯಾವನ್ನು ಈ ಸಲದ ಕೂಟಕ್ಕೆ ಬರದಂತೆ ತಡೆದದ್ದೇ ನೈಗರ್ ಎಂಬುದನ್ನು ಮರೆಯುವಂತಿಲ್ಲ. ಅರ್ಹತಾ ಸುತ್ತಿನ ಆಫ್ರಿಕಾ ಚರಣದ ಪಂದ್ಯದಲ್ಲಿ ನೈಗರ್ ನೈಜೀರಿಯಾವನ್ನು ಮಣಿಸಿ “ಆಫ್ರಿಕನ್ ಟೈಗರ್’ ಎನಿಸಿದ್ದು ಈಗ ಇತಿಹಾಸ.
ಕೊರಿಯಾ ವಿರುದ್ಧ ಅದು 59ನೇ ನಿಮಿಷದಲ್ಲಿ ಗೆಲುವಿನ ಗೋಲು ಬಾರಿಸಿತ್ತು. ಸ್ಪೇನಿಗೆ ಆಘಾತವಿಕ್ಕಿದರೆ ನೈಗರ್ “ಜೈಂಟ್ ಕಿಲ್ಲರ್’ ಆಗಿ ಮೂಡಿಬರುವುದರಲ್ಲಿ ಅನುಮಾನವಿಲ್ಲ!