ಗುವಾಹಟಿ/ಕೋಲ್ಕತಾ: ಬಲಿಷ್ಠ ತಂಡವಾದ ಫ್ರಾನ್ಸ್ 17 ವರ್ಷದೊಳಗಿನ ಫುಟ್ಬಾಲ್ ವಿಶ್ವಕಪ್ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಜಯ ಸಾಧಿಸಿದೆ.
ಗುವಾಹಟಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಫ್ರಾನ್ಸ್ 5-1 ಗೋಲುಗಳಿಂದ ಹೊಂಡುರಾಸ್ ವಿರುದ್ಧ ಗೆಲುವು ಪಡೆಯಿತು. ಈ ಮೂಲಕ ಫ್ರಾನ್ಸ್ “ಇ’ ಗಂಪಿನಲ್ಲಿ ಮೂರಕ್ಕೆ ಮೂರು ಪಂದ್ಯದಲ್ಲಿಯೂ ಜಯ ಸಾಧಿಸಿ ಅಗ್ರ ಸ್ಥಾನದೊಂದಿಗೆ (9 ಅಂಕ) ನಾಕೌಟ್‌ಗೆ ಲಗ್ಗೆ ಹಾಕಿದೆ. ಜಪಾನ್ ವಿರುದ್ಧ ಗೆದ್ದಾಗಲೇ ಫ್ರಾನ್ಸ್‌ನ ನಾಕೌಟ್ ಪ್ರವೇಶ ಖಚಿತವಾಗಿತ್ತು. ಆದರೆ ಇದೀಗ ಈ ಗೆಲುವಿನ ಮೂಲಕ ಅಗ್ರಸ್ಥಾನದಲ್ಲಿಯೇ ಪ್ರವೇಶಿಸಿದಂತಾಗಿದೆ.
ಪಂದ್ಯದ ಆರಂಭದಿಂದಲೇ ಉಭಯ ತಂಡಗಳು ಆಕ್ರಮಣಕಾರಿ ಆಟಕ್ಕೆ ಮುಂದಾದವು. ಹೀಗಾಗಿ ಪಂದ್ಯ ಆರಂಭವಾಗಿ 10ನೇ ನಿಮಿಷದಲ್ಲಿಯೇ ಹೊಂಡುರಾಸ್ ಗೋಲು ದಾಖಲಿಸಿತು. ಆದರೆ ಈ ಹಂತದಲ್ಲಿ ತಿರುಗಿ ಬಿದ್ದ ಫ್ರಾನ್ಸ್ ಒಂದರ ಹಿಂದೆ ಒಂದು ಗೋಲು ಸಿಡಿಸಿತು. ಇತ್ತ ಹೊಂಡುರಾಸ್‌ಗೆ ಫ್ರಾನ್ಸ್ ಆಕ್ರಮಣವನ್ನು ತಡೆಯಲಾಗದೇ ತೆಪ್ಪಗಾಯಿತು. ಫ್ರಾನ್ಸ್ ಒಟ್ಟು 5 ಗೋಲು ಬಾರಿಸಿದರೆ, ಹೊಂಡುರಾಸ್ ಏಕೈಕಗೋಲಿಗೆ ತೃಪ್ತವಾಯಿತು. ಇದಕ್ಕೂ ಮುನ್ನ ಫ್ರಾನ್ಸ್ ತಂಡ ಗುಂಪು ಹಂತದಲ್ಲಿ ನ್ಯೂ ಕ್ಯಾಲೆಡೋನಿಯಾ ವಿರುದ್ಧ 7-1, ಜಪಾನ್ ವಿರುದ್ಧ 2-1ರಿಂದ ಜಯ ಸಾಧಿಸಿತ್ತು.
ಜಪಾನ್, ಕ್ಯಾಲೆಡೋನಿಯಾ ಪಂದ್ಯ ಡ್ರಾ: ಕೋಲ್ಕತಾದಲ್ಲಿ ನಡೆದ ಮತ್ತೂಂದು ಪಂದ್ಯದಲ್ಲಿ ಜಪಾನ್ ಮತ್ತು ನ್ಯೂ ಕ್ಯಾಲೆಡೋನಿಯಾ ತಂಡಗಳು 1-1 ಗೋಲುಗಳಿಂದ ಡ್ರಾ ಸಾಧಿಸಿವೆ. ಪಂದ್ಯ ಆರಂಭವಾಗಿ 7ನೇ ನಿಮಿಷದಲ್ಲಿ ಜಪಾನ್‌ನ ನಕಮುರ ಆಕರ್ಷಕವಾಗಿ ಗೋಲು ಸಿಡಿಸಿದರು. ಇದರಿಂದ ಆರಂಭದಲ್ಲಿಯೇ ಜಪಾನ್ ಮುನ್ನಡೆ ಸಾಧಿಸಿ ಹುಮ್ಮಸ್ಸಿನಲ್ಲಿತ್ತು. ನಂತರದ ಹಂತದಲ್ಲಿ ಎರಡೂ ತಂಡಗಳು ಗೋಲು ಸಿಡಿಸಲು ಪ್ರಯತ್ನಿಸಿದರೂ ಅದು ಯಶಸ್ವಿಯಾಗಲಿಲ್ಲ. ಇದರಿಂದಾಗಿ ಮೊದಲ ಅವಧಿಯಲ್ಲಿ ಜಪಾನ್ 1-0ಯಿಂದ ಮುನ್ನಡೆ ಪಡೆದಿತ್ತು.
ಎರಡನೇ ಅವಧಿಯ ಆರಂಭದಲ್ಲಿಯೂ ಯಾವುದೇ ಗೋಲು ದಾಖಲಾಗಲಿಲ್ಲ. ಹೀಗಾಗಿ ಜಪಾನ್ ಜಯಗಳಿಸುತ್ತೆ ಎಂದೇ ಅಂದಾಜಿಸಲಾಗಿತ್ತು. ಆದರೆ 83ನೇ ನಿಮಿಷದಲ್ಲಿ ನ್ಯೂ ಕ್ಯಾಲೆಂಡೋನಿಯಾದ ಜೆನೋ ಗೋಲು ಸಿಡಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. ಇದರಿಂದಾಗಿ ಜಪಾನ್ ಗೆಲುವಿನ ಅವಕಾಶವನ್ನು ಕಳೆದುಕೊಂಡಿತು. ಇದಕ್ಕೂ ಮುನ್ನ ಜಪಾನ್ ಗುಂಪು ಹಂತದಲ್ಲಿ ಹೊಂಡುರಾಸ್ ವಿರುದ್ಧ 6-1 ರಿಂದ ಗೆಲುವು ಪಡೆದರೆ, ಫ್ರಾನ್ಸ್ ವಿರುದ್ಧ 1-2ರಿಂದ ಸೋಲುಂಡಿತ್ತು.