ಬಳ್ಳಾರಿ: “ಮೈತ್ರಿ ಸರ್ಕಾರ ಜಿಂದಾಲ್ ಸಂಸ್ಥೆಗೆ 3,667 ಎಕರೆ ಜಮೀನನ್ನು ಶುದ್ಧ ಕ್ರಯ ಮಾಡದೆ ಮೊದಲಿನಂತೆ ಲೀಜ್‌ನಲ್ಲೇ ಮುಂದುವರಿಸಬೇಕು. ಸರ್ಕಾರ ರಚಿಸಿರುವ ಉಪ ಸಮಿತಿ ಸದಸ್ಯರು ಸ್ಥಳ ಪರಿಶೀಲಿಸಿ ವರದಿ ನೀಡಬೇಕು’ ಎಂದು ವಿಜಯನಗರ ಶಾಸಕ ಆನಂದ್‌ಸಿಂಗ್, ಮಾಜಿ ಶಾಸಕ ಅನಿಲ್ ಲಾಡ್ ಎಚ್ಚರಿಸಿದರು.
ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ರಾಜ್ಯದಲ್ಲಿ ಯಾವುದೇ ಸರ್ಕಾರ ಆಡಳಿತ ನಡೆಸುತ್ತಿದ್ದರೂ ಸರಿಯಾದ ನಿರ್ಣಯ ಕೈಗೊಳ್ಳಬೇಕೆಂಬುದು ನಮ್ಮ ಮನವಿ. ಆದರೂ, ಒಂದು ವೇಳೆ ಪರಭಾರೆ ಮಾಡಿದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ’ ಎಂದು ಎಚ್ಚರಿಸಿದರು.
“ಹಲವಾರು ಸಂಸ್ಥೆಗಳು ಕೈಗಾರಿಕೆ ಸ್ಥಾಪಿಸುವುದಾಗಿ ಹೊಸಪೇಟೆಯಿಂದ ಬಳ್ಳಾರಿ ನಡುವೆ ಜಮೀನು ಸ್ವಾಧೀನ ಪಡಿಸಿಕೊಂಡು ಫೆನ್ಸಿಂಗ್ ಹಾಕಿಕೊಂಡು ಲ್ಯಾಂಡ್ ಬ್ಯಾಂಕ್ ಮಾಡಿಕೊಂಡಿವೆ. ಈ ಕುರಿತು ಹೋರಾಟ ಮಾಡಿದರೆ ನನ್ನ ಕಾರ್ಖಾನೆ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದರಲ್ಲಿ ನನ್ನ ಸ್ವಾರ್ಥವೇನಿಲ್ಲ.
ಜಿಲ್ಲೆಯ ಜನರ ಒತ್ತಾಯದ ಮೇರೆಗೆ ಹೋರಾಟಕ್ಕಿಳಿಯುವುದಾಗಿ’ ಹೇಳಿದರು. ಜಿಂದಾಲ್ ಸಂಸ್ಥೆಗೆ ಆರಂಭದಿಂದ ಈವರೆಗೆ ಎಷ್ಟು ಎಕರೆ ಜಮೀನು ನೀಡಲಾಗಿದೆ? ಜಮೀನು ನೀಡಿದವರಲ್ಲಿ ಎಷ್ಟು ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ? ಜಿಲ್ಲಾಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಎಷ್ಟು ಉದ್ಯೋಗ ಕಲ್ಪಿಸಲಾಗಿದೆ?
ಜಿಂದಾಲ್ ಸಂಸ್ಥೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಎಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ? ಎಂಬುದನ್ನು ಪರಿಶೀಲಿಸಬೇಕು. ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಈ ಬಗ್ಗೆ ಜನರಲ್ಲಿ ಚರ್ಚೆಯಾಗಬೇಕು. ಅದಕ್ಕೊಂದು ವೇದಿಕೆ ಸೃಷ್ಟಿಸಬೇಕೆಂದು ತಿಳಿಸಿದರು.